ಕೊಪ್ಪಳ : ಪಹಲ್ಗಾಂನಲ್ಲಿ 26 ಜನ ಅಮಾಯಕರನ್ನು ಕೊಂದು ಹಾಕಿದ್ದ ಉಗ್ರರನ್ನು ಸರ್ವನಾಶ ಮಾಡಲು ‘ಆಪರೇಷನ್ ಸಿಂದೂರ’ ಮೂಲಕ ಅವಕಾಶ ಸಿಕ್ಕಿತ್ತು. ಹೀಗಾಗಿ ಈ ‘ಆಪರೇಷನ್ ಸಿಂದೂರ’ ನಿಲ್ಲಿಸಬಾರದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಂನಲ್ಲಿ 26 ಜನರ ಅಮಾಯಕರನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಇವರಿಗೆ ಸಹಾಯ ಮಾಡಿದ್ದು ಪಾಕಿಸ್ತಾನದವರು. ಹೀಗಾಗಿ, ಉಗ್ರರರನ್ನು ಸದೆ ಬಡಿಯಲು ಒಂದು ಅವಕಾಶ ಸಿಕ್ಕಿತ್ತು ಎಂದು ಹೇಳಿದರು.
ನಾನು ಈ ಹಿಂದೆಯೂ ಯುದ್ಧ ಬೇಡ ಎಂದು ಹೇಳಿರಲಿಲ್ಲ. ಅನಿವಾರ್ಯವಾದರೆ ಯುದ್ಧ ಮಾಡಬೇಕು ಎಂದಿದ್ದೆ. ನಮ್ಮ ಸಾರ್ವಭೌಮಕ್ಕೆ ಧಕ್ಕೆ ಬಂದರೆ ಸುಮ್ಮನೇ ಇರಲು ಆಗಲ್ಲ. ಆದರೆ, ಅದನ್ನೇ ನಾನು ಯುದ್ಧ ಬೇಡ ಎಂದಿದ್ದೇನೆ ಎಂದು ಅರ್ಥೈಸಲಾಯಿತು ಎಂದರು.
ಕದನ ವಿರಾಮ ನನ್ನಿಂದಲೇ ಆಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಉಲ್ಟಾ ಹೊಡೆದಿದ್ದಾರೆ. ಹಾಗಾದರೆ ಅವರು ಮೊದಲು ಹೇಳಿದ್ದೇ ನಿಜ ಎನಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ, ಆರ್‌ಎಸ್‌ಎಸ್‌ಗೆ ನನ್ನ ವಿರೋಧ:
ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಸಲ್ಲ. ನನ್ನ 50 ವರ್ಷಗಳ ರಾಜಕೀಯದುದ್ದಕ್ಕೂ ಅವರನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಹೀಗಿರುವಾಗ ಗಂಗಾವತಿಯಲ್ಲಿ ಸ್ಪರ್ಧಿಸಿದ್ದ ಗಾಲಿ ಜನಾರ್ದನರೆಡ್ಡಿಯನ್ನು ಏಕೆ ಬೆಂಬಲಿಸುತ್ತೇನೆ ಎಂದು ಪ್ರಶ್ನಿಸಿದರು. ಗಂಗಾವತಿ ಚುನಾವಣೆಯಲ್ಲಿ ನಾನು ರೆಡ್ಡಿ ಬೆಂಬಲಿಸಿದ್ದೇನೆ ಎಂದು ಹೇಳಿದ್ದರೆ ಅದು ಶುದ್ಧ ಸುಳ್ಳು ಎಂದರು.