ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯದ ಬಡವರ ಜೇಬಿಗೆ ಒಂದು ಲಕ್ಷ ಕೋಟಿ ರು. ಹಾಕುತ್ತಿದ್ದೇವೆ. ಆದರೆ ಜೆಡಿಎಸ್ ಹಾಗೂ ಬಿಜೆಪಿಯವರ ತ್ಯಾಗ, ಕೊಡುಗೆ ಏನಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆ ಸೇರಿ ವಿವಿಧ ಜನಪರ ಯೋಜನೆಗಳಡಿ ಸರ್ಕಾರ ಬಡವರ ಜೇಬಿಗೆ ಒಂದು ಲಕ್ಷ ಕೋಟಿ ರು. ಹಾಕುತ್ತಿದೆ. ಆದರೆ ಜೆಡಿಎಸ್‌ನ ದೊಡ್ಡ ಗೌಡರು, ಮಕ್ಕಳು, ಮೊಮ್ಮಕ್ಕಳು ಯಾವ ತ್ಯಾಗ ಮಾಡಿದ್ದಾರೆ? ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಕೊಡುಗೆ ಏನು? ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಕೈಗೆ ಅಸ್ತ್ರ ನೀಡಿದ್ದೇವೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ರೈತರಿಗೆ ಮೊದಲು ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪ. ನಾನು ಸಚಿವನಾದಾಗ 6 ತಾಸು ನೀಡುತ್ತಿದ್ದ ವಿದ್ಯುತ್ ಅನ್ನು 7 ತಾಸಿಗೆ ಏರಿಸಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಯಾವುದೇ ಬಡವರ ಹೊಟ್ಟೆ ತುಂಬಿಸಿವೆಯೇ? ಜಮೀನು ಕೊಟ್ಟಿದೆಯೇ? ಎಂದು ತಿರುಗೇಟು ನೀಡಿದರು.
ಐತಿಹಾಸಿಕ ತೀರ್ಮಾನ:
ನಮ್ಮ ಸರ್ಕಾರ ಸುದೀರ್ಘ ಚರ್ಚೆ ನಡೆಸಿ ಪರಿಶಿಷ್ಟ ಸಮುದಾಯದವರ ಒಳಮಿಸಲಾತಿಗೆ ಒಂದು ಸ್ವರೂಪ ನೀಡಿದೆ. ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈನವರು ಸಮಾಧಾನವಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನ ಐತಿಹಾಸಿಕವಾದದ್ದು. ಲಂಬಾಣಿ, ಬೋವಿ ಸಮುದಾಯದ ಜೊತೆಗೆ ಎಡ ಹಾಗೂ ಬಲಗೈ ನಾಯಕರನ್ನೂ ಕರೆಸಿ ಮಾತನಾಡಿದ್ದೇನೆ. ಎಲ್ಲರಿಗೂ ಸಮಾಧಾನ ತರುವ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.