ಸ್ಮಾರ್ಟ್‌ ಮೀಟರ್‌ ಟೆಂಡರ್‌ ರದ್ದು ಕೋರಿ ಅರ್ಜಿ : ವಿಚಾರಣೆ ಇಂದು

ಸಾರಾಂಶ

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಮಾರ್ಟ್‌ ಮೀಟರ್ ಅಳವಡಿಕೆ ಸಂಬಂಧ ಕರೆಯಲಾಗಿರುವ ಟೆಂಡರ್ ಹಾಗೂ ಅದರ ಮಾರ್ಗಸೂಚಿ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ನಡೆಸಲಿದೆ.

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಮಾರ್ಟ್‌ ಮೀಟರ್ ಅಳವಡಿಕೆ ಸಂಬಂಧ ಕರೆಯಲಾಗಿರುವ ಟೆಂಡರ್ ಹಾಗೂ ಅದರ ಮಾರ್ಗಸೂಚಿ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ನಡೆಸಲಿದೆ.

ಈ ಕುರಿತು ಬೆಂಗಳೂರಿನ ಮತ್ತಿಕೆರೆ ನಿವಾಸಿಗಳಾದ ಎನ್. ಜಯಪಾಲ ಹಾಗೂ ಮುನಿಸ್ವಾಮಿ ಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿ ಕುರಿತು ನೀಡಿದ ವಿವರಣೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದೇ ವಿಚಾರ ಏಕಸದಸ್ಯ ನ್ಯಾಯಪೀಠದ ಮುಂದಿದೆ ಅಲ್ಲವೇ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು ಉತ್ತರಿಸಿ, ಏಕಸದಸ್ಯ ಪೀಠದ ಮುಂದಿರುವ ಅರ್ಜಿಯಲ್ಲಿ ಅರ್ಜಿದಾರರು ವ್ಯಕ್ತಿಗತ ಪರಿಹಾರ ಕೋರಲಾಗಿದೆ. ನಮ್ಮ ಈ ಅರ್ಜಿ ಸಮಗ್ರವಾಗಿದೆ ಎಂದು ಸಮಜಾಯಿಷಿ ನೀಡಿದರು. ಸರ್ಕಾರದ ಪರ ವಕೀಲರು, ಇಂಥದ್ದೇ ಮನವಿ ಒಳಗೊಂಡಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಆ ಅರ್ಜಿಯ ಮಾಹಿತಿ ಒದಗಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತಲ್ಲದೆ ಹೊಸದಾಗಿ ಸಲ್ಲಿಸಿರುವ ಈ ಅರ್ಜಿಯನ್ನು ಮಂಗಳವಾರ ನಡೆಸುವುದಾಗಿ ತಿಳಿಸಿತು.

Share this article