ಸುಹಾಸ್‌ ಹತ್ಯೆ ಹಿಂದೆ ಪಿಎಫ್‌ಐ ಕೈವಾಡ : ಬಿಜೆಪಿ

Published : May 09, 2025, 01:16 PM IST
Suhas Shetty

ಸಾರಾಂಶ

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕೈವಾಡದ ಶಂಕೆ - ಕರ್ನಾಟಕ ಬಿಜೆಪಿ

 ಮಂಗಳೂರು :  ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕೈವಾಡದ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ಭದ್ರತಾ ಏಜೆನ್ಸಿ)ಗೆ ವಹಿಸಬೇಕು ಎಂದು ಕರ್ನಾಟಕ ಬಿಜೆಪಿ ಒತ್ತಾಯಿಸಿದೆ.

ಸಂಸದರು, ಶಾಸಕರನ್ನು ಒಳಗೊಂಡ ರಾಜ್ಯ ಬಿಜೆಪಿ ನಿಯೋಗ ಗುರುವಾರ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್‌ ಕುಮಾರ್‌, ಮೇ 9ರಂದು ರಾಜ್ಯಾಧ್ಯಕ್ಷರು, ವಿರೋಧ ಪಕ್ಷ ನಾಯಕರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಎನ್‌ಐಎ ತನಿಖೆಗೆ ಮಧ್ಯಪ್ರವೇಶ ಮಾಡಲು ಮನವಿ ಮಾಡುತ್ತೇವೆ ಎಂದರು.

ನಾಡಿದ್ದು ಸುಹಾಸ್‌ ಮನೆಗೆ ನಡ್ಡಾ

ಮೇ 11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಧರ್ಮಸ್ಥಳದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಅವರು ಸುಹಾಸ್‌ ಶೆಟ್ಟಿಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ಗಡಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಪೊಲೀಸರು ಇನ್ನೊಂದು ರೀತಿಯ ಭದ್ರತೆಯಲ್ಲಿ ತೊಡಗುವಂತಾಗಬಾರದೆಂಬ ಕಾರಣಕ್ಕೆ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ಸುಹಾಸ್‌ ಶೆಟ್ಟಿ ಕೊಲೆಗೆ ಸಂಬಂಧಿಸಿದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಒಟ್ಟಾಗಿ ಪೊಲೀಸ್‌ ಆಯುಕ್ತರೊಂದಿಗೆ ಚರ್ಚೆ ಮಾಡಿ ಸಾರ್ವಜನಿಕ ವಲಯದಲ್ಲಿ ಮತ್ತು ನಮ್ಮಲ್ಲಿರುವ ಅನುಮಾನ ಹೇಳಿದ್ದೇವೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲೇಬೇಕು. ಈ ಕೃತ್ಯದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೃತ್ಯಕ್ಕೆ ಅಂತಾರಾಷ್ಟ್ರೀಯವಾಗಿ ಹಣಕಾಸಿನ ನೆರವು ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಾಗಾಗಿ ಸ್ಥಳೀಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬುದು ಗೃಹಸಚಿವರ ಹೇಳಿಕೆಯಿಂದ ಗೊತ್ತಾಗಿದೆ ಎಂದು ಹೇಳಿದರು.

ಸಿದ್ದಾಂತಕ್ಕಾಗಿ ಹೋರಾಟ:

ರೌಡಿಶೀಟ್‌ ಪೊಲೀಸರ ಒಂದು ಪ್ರಕ್ರಿಯೆ. ಮೂರಕ್ಕಿಂತ ಹೆಚ್ಚು ಪ್ರಕರಣ ಇರುವವರಿಗೆ ರೌಡಿಶೀಟ್‌ ಹಾಕಲಾಗುತ್ತದೆ. ಕೇಸು ಇರುವವರೆಲ್ಲರೂ ಕ್ರಿಮಿನಲ್‌ಗಳಲ್ಲ. ಸುಹಾಸ್‌ ಶೆಟ್ಟಿ ಸಿದ್ಧಾಂತಕ್ಕಾಗಿ ಹೋರಾಡಿದ್ದ ವ್ಯಕ್ತಿ ಎಂದು ಪ್ರತಿಕ್ರಿಯಿಸಿದರು.

PREV

Recommended Stories

ರೈತರ ಶ್ರೇಯೋಭಿವೃದ್ಧಿಯೇ ಸಂಘಗಳ ಗುರಿ
ರೈತರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಹಕಾರಿ