ಸೋನು ನಿಗಮ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

Published : May 03, 2025, 12:14 PM IST
Sonu Nigam (Photo/instagram/@sonunigamofficial)

ಸಾರಾಂಶ

ಕನ್ನಡಿಗರಿಗೆ ಅವಮಾನ ಮಾಡಿ, ಭಾಷಾ ದ್ವೇಷಕ್ಕೆ ಪ್ರಚೋದನೆ ನೀಡಿದ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು : ಕನ್ನಡದ ಹಾಡು ಹಾಡಿ ಎಂದು ಕೇಳಿದ್ದಕ್ಕೆ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಉಗ್ರಗಾಮಿ ದಾಳಿಗೆ ಹೋಲಿಸಿದ ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಕನ್ನಡಿಗರ ಆಕ್ರೋಶ ತಣ್ಣಗಾಗುತ್ತಿಲ್ಲ. ಕನ್ನಡಿಗರಿಗೆ ಅವಮಾನ ಮಾಡಿ, ಭಾಷಾ ದ್ವೇಷಕ್ಕೆ ಪ್ರಚೋದನೆ ನೀಡಿದ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಸೋನು ನಿಗಮ್‌ ಅವರಿಗೆ ಕನ್ನಡ ಗೀತೆಯೊಂದನ್ನು ಹಾಡಲು ಕೋರಿದ್ದಾನೆ. ಇದಕ್ಕೆ ಪ್ರತಿಯಾಗಿ ಕನ್ನಡ, ಕನ್ನಡ, ಕನ್ನಡ ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಘಟನೆ ಸಂಭವಿಸಿತು ಎಂದು ಸೋನು ನಿಗಮ್‌ ಹೇಳಿದ್ದಾರೆ. ಕನ್ನಡ ಹಾಡು ಹೇಳುವಂತೆ ಮಾಡಿದ ಕೋರಿಕೆಗೂ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೂ ಏನು ಸಂಬಂಧ? ಇಂತಹ ಹೇಳಿಕೆ ಮೂಲಕ ಇಡೀ ಕನ್ನಡ ನಾಡು, ಕನ್ನಡಿಗರು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಹಿಂಸೆ ಮತ್ತು ಅಸಹಿಷ್ಣುತೆಗೆ ಹೋಲಿಸುವ ಮೂಲಕ ಸೋನು ನಿಗಮ್‌ ಕನ್ನಡಿಗರ ಅಸ್ಮಿತೆಯನ್ನು ಅವಮಾನಿಸಿದ್ದು ಪ್ರಕರಣ ದಾಖಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕ ಜಿಲ್ಲಾಧ್ಯಕ್ಷ ಎ.ಧರ್ಮರಾಜ್‌ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ಕನ್ನಡ ಹಾಡು ಹಾಡುವಂತೆ ಕೋರಿದ್ದನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿ ಕನ್ನಡಿಗ ಸಮುದಾಯವನ್ನು ಅವಮಾನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವಿವಿಧ ಸುದ್ದಿವಾಹಿನಿಗಳಲ್ಲೂ ವರದಿಯಾಗಿದೆ. ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ. ಅಲ್ಲದೇ ಕನ್ನಡಿಗರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಯುವ ಆತಂಕ ಉಂಟಾಗಿದೆ. ಸೋನು ನಿಗಮ್‌ ಹೇಳಿಕೆಗಳು ಆಕ್ಷೇಪಾರ್ಹ, ವಿಭಜನಕಾರಿ ಮತ್ತು ಸಾಮುದಾಯಿಕ ಸೌಹರ್ದಕ್ಕೆ ಹಾನಿಕಾರಕವಾಗಿವೆ. ಆದ್ದರಿಂದ ಆತನ ವಿರುದ್ಧ ವಿವಿದ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿರುವ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ, ‘ಕನ್ನಡದ ಹಾಡು ಹಾಡಿ ಅಂತ ಕೇಳೋದಕ್ಕೂ ಪಹಲ್ಗಾಮ್ ಘಟನೆಗೂ ಏನು ಸಂಬಂಧ ಮೂರ್ಖ ಸೋನು ನಿಗಮ್‌? ನಿಮಗೆ ಎಷ್ಟೇ ಪ್ರೀತಿ ಕೊಟ್ರು ತಿಂದ ತಟ್ಟೆಯಲ್ಲಿ ಉಗುಳೋ ಬುದ್ಧಿಯನ್ನು ನಿಮ್ಮಂಥವರು ಬಿಡೋಲ್ಲ. ಕನ್ನಡ ಕನ್ನಡಿಗರು ಅಂದ್ರೆ ಅಷ್ಟು ಬಿಟ್ಟಿ ಬಿದ್ದಿದ್ದೀವಾ. ಕೂಡಲೇ ಕ್ಷಮೆ ಯಾಚಿಸಬೇಕು. ಕನ್ನಡ ಚಿತ್ರರಂಗ ಇನ್ನೆಂದೂ ಇವನಿಗೆ ಹಾಡಲು ಅವಕಾಶ ಕೊಡಬೇಡಿ’ ಎಂದು ಒತ್ತಾಯಿಸಿದ್ದಾರೆ.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು