ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯ ಆವರಣದಲ್ಲಿ ಅಂಗವಿಕಲನೋರ್ವ ಹೊಂದಿದ್ದ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಯನ್ನು ತೆರವುಗೊಳಿರುವ ಹಿನ್ನೆಲೆಯಲ್ಲಿ ಮತ್ತೆ ಮಳಿಗೆ ಆರಂಭಿಸಲು ಸ್ಥಳಾವಕಾಶ ಕಲ್ಪಿಸುವ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯ ಆವರಣದಲ್ಲಿ ಅಂಗವಿಕಲನೋರ್ವ ಹೊಂದಿದ್ದ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಯನ್ನು ತೆರವುಗೊಳಿರುವ ಹಿನ್ನೆಲೆಯಲ್ಲಿ ಮತ್ತೆ ಮಳಿಗೆ ಆರಂಭಿಸಲು ಸ್ಥಳಾವಕಾಶ ಕಲ್ಪಿಸುವ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ದೇವನಹಳ್ಳಿ ತಾಲೂಕು ಕಚೇರಿಯ ಆವರಣದಲ್ಲಿ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿ ಆರಂಭಿಸಲು ತಮಗೆ ಸ್ಥಳಾವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅಂಗವಿಕಲ ಜಿ.ಕೆ.ಸುರೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ವಿಚಾರಣೆ ವೇಳೆ ಸುರೇಶ್ ಪರ ವಕೀಲ ಡಿ.ಮೋಹನ್ ಕುಮಾರ್, ಅರ್ಜಿದಾರರು ಮತ್ತು ಅವರ ಪತ್ನಿ ಅಂಗವಿಕಲರಾಗಿದ್ದಾರೆ. ಅಂಗವಿಕಲರ ಜೀವನೋಪಯಕ್ಕಾಗಿ ಸರ್ಕಾರ ಜಾರಿಗೆ ತಂದ ಯೋಜನೆಯಡಿ ಅರ್ಜಿದಾರರು ದೇವನಹಳ್ಳಿ ತಾಲೂಕಿನ ಕಚೇರಿ ಆವರಣದಲ್ಲಿ ಕಂಪ್ಯೂಟರ್ ಮತ್ತು ಜೆರಾಕ್ಸ್ ಅಂಗಡಿಯನ್ನು ಆರಂಭಿಸಿದ್ದರು. ಆದರೆ, 2024ರ ನ.7ರಂದು ಕೆಲ ಅಧಿಕಾರಿಗಳು ಬಂದು ಬಲವಂತವಾಗಿ ಅರ್ಜಿದಾರರ ಅಂಗಡಿಯನ್ನು ತೆರವುಗೊಳಿಸಿದ್ದಾರೆ. ಹಾಗಾಗಿ, ಜೀವನೋಪಾಯ ಕಂಡುಕೊಳ್ಳಲು ಮತ್ತೆ ಕಚೇರಿಯ ಆವರಣ ಒಳ ಹಾಗೂ ಹೊರಭಾಗದಲ್ಲಿ ಮಳಿಗೆ ಆರಂಭಿಸಲು ಅನುಮತಿ ಕೋರಿ 2024ರ ಡಿ.26ರಂದು ಅರ್ಜಿದಾರರು ಮನವಿ ಪತ್ರ ಸಲ್ಲಿಸಿದ್ದರು. ಅದನ್ನು ಈವರೆಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪರಿಗಣಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹೆಚ್ಚುವರಿ ಸರ್ಕಾರಿ ವಕೀಲರು, ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿದ್ದ ಸುಮಾರು 50 ಅಂಗಡಿಗಳಿಂದ ತೊಂದರೆ ಉಂಟಾಗುತ್ತಿತ್ತು. ಇದರಿಂದ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ನ್ಯಾಯಾಲಯವು ಸ್ವಲ್ಪ ಸಮಯ ನೀಡಿದರೆ, ಅರ್ಜಿದಾರರ ಮನವಿ ಪತ್ರವನ್ನು ಮೆರಿಟ್ ಆಧಾರದಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರ ಮನವಿ ಪರಿಗಣಿಸಿ ಎಂಟು ವಾರದಲ್ಲಿ ಕಾನೂನು ಮತ್ತು ಸರ್ಕಾರದ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಗಳ ಅನುಗುಣವಾಗಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
- ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಅಂಗವಿಕಲನ ಅಂಗಡಿ
- ಅಧಿಕಾರಿಗಳಿಂದ 2024ರ ನ.7ರಂದು ಬಲವಂತವಾಗಿ ಅಂಗಡಿ ತೆರವು
- ಜೀವನೋಪಾಯಕ್ಕೆ ಮಳಿಗೆ ಆರಂಭಿಸಲು ಅನುಮತಿ ಕೋರಿ 2024ರ ಡಿ.26ರಂದು ಅರ್ಜಿ
- ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಿಂದ ಅರ್ಜಿ ವಿಚಾರಣೆ: ಸೂಚನೆ