ರಾಜ್ಯ ರಾಜಕಾರಣದಲ್ಲಿ ಭಾರೀ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ತನಿಖೆಗೆ ಅಂತ್ಯವಾಡಲು ವಿಶೇಷ ತನಿಖಾ ದಳ (ಎಸ್‌ಐಟಿ) ಮುಂದಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ತನಿಖೆಗೆ ಅಂತ್ಯವಾಡಲು ವಿಶೇಷ ತನಿಖಾ ದಳ (ಎಸ್‌ಐಟಿ) ಮುಂದಾಗಿದೆ.
ಈ ಸಂಬಂಧ ಶೀಘ್ರ ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ ವಿಚಾರಣಾ ವರದಿಯನ್ನು ಎಸ್‌ಐಟಿ ಸಲ್ಲಿಸಲಿದ್ದು, ಇದಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಯಲಯದ (ಎಫ್‌ಎಸ್‌ಎಲ್) ವರದಿಗೆ ಎಸ್‌ಐಟಿ ಕಾಯುತ್ತಿದೆ ಎಂದು ತಿಳಿದು ಬಂದಿದೆ.
ಇದರಿಂದ ಪ್ರಕರಣದಲ್ಲಿ ಆರೋಪಕ್ಕೆ ತುತ್ತಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಮಾಜಿ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮತ್ತಿತರ ಬಿಜೆಪಿ ನಾಯಕರು ಕಳಂಕ ಮುಕ್ತರಾಗುವ ಸಾಧ್ಯತೆಗಳಿವೆ. ಪಿಎಸ್ಐ ಹಗರಣದಲ್ಲಿ ಬಿಜೆಪಿ ನಾಯಕರ ಪಾತ್ರದ ಕುರಿತ ಆರೋಪಗಳಿಗೆ ಈವರೆಗೆ ಯಾರೊಬ್ಬರೂ ಪುರಾವೆ ಒದಗಿಸಿಲ್ಲ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಚುನಾವಣಾ ವೇಳೆ ಚರ್ಚೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಪ್ರಯೋಗಿಸಿದ್ದ ಭ್ರಷ್ಟಾಚಾರ ಅಸ್ತ್ರಗಳಲ್ಲಿ ಪಿಎಎಸ್ ಪ್ರಕರಣ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕೇರಿದ ಬಳಿಕ ನ್ಯಾ.ವೀರಪ್ಪ ನೇತೃತ್ವದ ವಿಚಾರಣಾ ಸಮಿತಿ ವರದಿ ಆಧರಿಸಿ ಎಸ್‌ಐಟಿ ತನಿಖೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಆರೇಳು ತಿಂಗಳಿಂದ ತನಿಖೆ ನಡೆಸಿದ್ದ ಎಸ್‌ಐಟಿ, ಬಿಜೆಪಿ ನಾಯಕರ ವಿರುದ್ಧದ ಆರೋಪಗಳಿಗೆ ಪುರಾವೆ ಸಿಗದೆ ತನ್ನ ತನಿಖೆಗೆ ಅಂತ್ಯ ಹೇಳಲು ನಿರ್ಧರಿಸಿದೆ ಎನ್ನಲಾಗಿದೆ.
ಏನಿದು ಹಗರಣ?: 2022ರಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡಮಟ್ಟದ ಅಕ್ರಮ ಬಯಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು, ನೇಮಕಾತಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತಕುಮಾರ್ ಹಾಗೂ ಪ್ರಥಮ ದರ್ಜೆ ಗುಮಾಸ್ತ ಸೇರಿ ನೇಮಕಾತಿ ವಿಭಾಗದ ಅಧಿಕಾರಿಗಳು, ಕಲುಬರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗೂ ಕಾಂಗ್ರೆಸ್ ಮುಖಂಡ ಆರ್.ಡಿ.ಪಾಟೀಲ್ ಮಾತ್ರವಲ್ಲದೆ 100 ಅಭ್ಯರ್ಥಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಐದಾರು ಪಿಎಸ್‌ಐಗಳು ಸಹ ಜೈಲು ಸೇರಿದ್ದರು. ಈ ಹಗರಣ ಅಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ಆಗಿನ ಸಿಎಂ ಬೊಮ್ಮಾಯಿ, ಡಿಸಿಎಂ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧವೂ ಆರೋಪಗಳು ಕೇಳಿ ಬಂದಿದ್ದವು. ವಿಧಾನಸಭಾ ಚುನಾವಣೆ ವೇಳೆ ಈ ಹಗರಣವು ಪ್ರಮುಖವಾಗಿ ಪ್ರಸ್ತಾಪವಾಗಿತ್ತು.
ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರವು, ಪಿಎಸ್ಐ ನೇಮಕಾತಿ ಹಗರಣದ ಕುರಿತು ವಿಚಾರಣೆಗೆ ನ್ಯಾ.ವೀರಪ್ಪ ನೇತೃತ್ವದ ಸಮಿತಿ ರಚಿಸಿತು. ಬಳಿಕ ಈ ಸಮಿತಿ ಶಿಫಾರಸು ಮೇರೆಗೆ ಹಗರಣದಲ್ಲಿ ರಾಜಕೀಯ ನಾಯಕರ ಪಾತ್ರದ ಕುರಿತ ತನಿಖೆಗೆ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಮುಂದಾಳತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು.
ಯತ್ನಾಳ್ ಗೈರು, ಅಶ್ವತ್ಥ್ ಸೋದರರ ಹೇಳಿಕೆ: ಪಿಎಸ್ಐ ನೇಮಕಾತಿ ಹಗರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿ ಬಂಡಾಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್‌ರಿಂದಲೇ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ದಾಖಲೆ ಸಲ್ಲಿಸುವಂತೆ ಯತ್ನಾಳ್‌ಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಯತ್ನಾಳ್ ಗೈರಾಗಿದ್ದರು. ಇನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸಂಬಂಧಿ ಆಯ್ಕೆಗೆ ಅಶ್ವತ್ಥನಾರಾಯಣ ಪ್ರಭಾವ ಬೀರಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಅಶ್ವತ್ಥನಾರಾಯಣ ಹಾಗೂ ಅವರ ಸೋದರನನ್ನು ಎಸ್ಐಟಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿತ್ತು. ಅದೇ ರೀತಿ ಅಂದು ಪಿಎಸ್‌ಐ ನೇಮಕಾತಿ ವಿಚಾರವಾಗಿ ಕನಕಗಿರಿ ಬಿಜೆಪಿ ಮಾಜಿ ಶಾಸಕ ಬಸವರಾಜ ದಡೇಸಗೂರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಅವರನ್ನೂ ವಿಚಾರಣೆ ನಡೆಸಿ ಎಸ್‌ಐಟಿ ಹೇಳಿಕೆ ಪಡೆದಿತ್ತು. ಹಲವರ ವಿಚಾರಣೆ ಹೊರತಾಗಿಯೂ ಹಗರಣದಲ್ಲಿ ಬಿಜೆಪಿ ನಾಯಕರ ಪಾತ್ರಕ್ಕೆ ಪೂರಕ ದಾಖಲೆಗಳು ಲಭ್ಯವಾಗಿಲ್ಲ ಎಂದು ಮೂಲಗಳು ವಿವರಿಸಿವೆ.
ಎಫ್ಎಸ್ಎಲ್ ವರದಿ: ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಆರೋಪಿಗಳಿಂದ ಜಪ್ತಿ ಮಾಡಿದ ದಾಖಲೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಕೊಡಲಾಗಿದೆ. ಈ ಕುರಿತ ಎಫ್ಎಸ್ಎಲ್ ವರದಿ ಬಂದ ನಂತರ ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಎಸ್‌ಐಟಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.