ಬೆಂಗಳೂರು ಉಪನಗರ ರೈಲಿಗೆ 306 ಬೋಗಿ ಖರೀದಿ - ಕೆ-ರೈಡ್‌ನಿಂದ ಸರ್ಕಾರಕ್ಕೆ ಪ್ರಸ್ತಾವನೆ

Published : Oct 15, 2024, 12:38 PM IST
Chhath Puja Special Train

ಸಾರಾಂಶ

ಬೆಂಗಳೂರು ಉಪನಗರ ರೈಲು ಯೋಜನೆಗೆ ಬೇಕಾದ 306 ರೈಲ್ವೆ ಬೋಗಿಗಳನ್ನು (ರೋಲಿಂಗ್ ಸ್ಟಾಕ್) ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಯಮಿತವು (ಕೆ-ರೈಡ್) ನೇರವಾಗಿ ಖರೀದಿಸಲು ನಿರ್ಧರಿಸಿದೆ

ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆಗೆ ಬೇಕಾದ 306 ರೈಲ್ವೆ ಬೋಗಿಗಳನ್ನು (ರೋಲಿಂಗ್ ಸ್ಟಾಕ್) ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಯಮಿತವು (ಕೆ-ರೈಡ್) ನೇರವಾಗಿ ಖರೀದಿಸಲು ನಿರ್ಧರಿಸಿದೆ. ಇದಕ್ಕೆ 4270 ಕೋಟಿ ವೆಚ್ಚ ವಾಗಲಿದ್ದು, ರಾಜ್ಯ ಹಾಗೂ ರೈಲ್ವೆ ಇಲಾಖೆಗಳು ಅನುಪಾತ 50:50 ಅನುದಾನದಲ್ಲಿ ಬೋಗಿಗಳನ್ನು ಖರೀದಿ ಮಾಡುವ ಸಲುವಾಗಿ ಕೆ-ರೈಡ್‌ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರೈಲ್ವೆ ಇಲಾಖೆಯು ಐಸಿಎಫ್ (ಇಂಟೆಗ್ರಲ್ ಕೋಚ್ ಫ್ಯಾಕ್ಟರಿ-ಚೆನ್ನೈ) ಮೂಲಕ ಬೋಗಿಗಳನ್ನು ಪೂರೈಸುವ ವಿಚಾರ ಮುಂದಿಟ್ಟಿದೆ. ಈ ಸಂಬಂಧ ಇಂದು (ಮಂಗಳವಾರ) ರಾಜ್ಯದ ಆರ್ಥಿಕ ಇಲಾಖೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಯಲಿದ್ದು, ಯಾವ ರೀತಿ ಬೋಗಿಗಳನ್ನು ಪಡೆಯಬೇಕು ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವೀಸ್ ಶಿಫಾರಸ್ಸಿನ ಮೇರೆಗೆ ಕೆ-ರೈಡ್ ದೇಶದಲ್ಲೇ ಮೊದಲ ಬಾರಿಗೆ ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆಗೆ 35 ವರ್ಷಗಳ ಅವಧಿಗೆ ರೈಲನ್ನು ನಿಯೋಜಿಸಿಕೊಳ್ಳಲು ಕೆ-ರೈಡ್ ನಿರ್ಧರಿಸಿತ್ತು. ಇದಕ್ಕಾಗಿ ಕರೆದಿದ್ದ ತಾಂತ್ರಿಕ ಬಿಡ್‌ನಲ್ಲಿ ಬಿಇಎಂಎಲ್, ಭಾರತ್ ಹೆವಿ ಎಲೆಕ್ಟಿಕಲ್ಸ್ ಹಾಗೂ ಸಿಇಎಫ್ ಕಂಪನಿಗಳು ಅರ್ಹತೆ ಪಡೆದು ಆರ್ಥಿಕ ಬಿಡ್ ಹಂತಕ್ಕೆ ಬಂದಿದ್ದವು. ಆದರೆ, ಅಂತಿಮ ವಾಗಿ ಹಿಂದೇಟು ಹಾಕಿದವು. ಇದರಿಂದ ಕೆ-ರೈಡ್ ರೈಲ್ವೆ ಬೋಗಿಗಳನ್ನು ಪಡೆ ಯಶವಂತಪುರದ ಬಳಿ ನಡೆಯುತ್ತಿರುವ ಉಪನಗರ ರೈಲು ಯೋಜನೆಯ ಎಲಿವೇಟೆಡ್ ಕಾರಿಡಾರ್ ಕಾಮಗಾರಿ. ಸಂದಿಗ್ಧತೆ ಎದುರಿಸುವಂತಾಗಿತ್ತು. ಹೀಗಾಗಿ ಪಿಪಿಪಿ ಮಾದರಿ ಕೈಬಿಡಲಾಯಿತು. ಈ ನಡುವೆ ವಂದೇ ಮೆಟ್ರೋ ರೈಲ್ವೆ ಬೋಗಿಗಳನ್ನು ಪಡೆಯಲು ಯೋಜಿಸ ಲಾಗಿತ್ತು. ಆದರೆ, ಅದು ಸಮಂಜಸವಲ್ಲದ ಕಾರಣ ದಿಂದ ಬೋಗಿಗಳನ್ನು ನೇರವಾಗಿ ಖರೀದಿ ಮಾಡಲು ಮುಂದಾಗಿಲಾಗಿದೆ ಎಂದು ಕೆ-ರೈಡ್ ತಿಳಿಸಿದೆ.

ರಾಜ್ಯ ಸರ್ಕಾರದ ಅಂತಿಮ ತೀರ್ಮಾನದ ಬಳಿಕ ರೈಲ್ವೆ ಮಂಡಳಿ, ಸಂಪುಟ ಸಮಿತಿಗೆ ನಮ್ಮ ಪ್ರಸ್ತಾವನೆ ಕಳಿಸಲಾಗುವುದು. ಅಲ್ಲಿ ಅನುದಾನದ ಕುರಿತು ನಿರ್ಧಾರ ಆಗಬೇಕಾಗುತ್ತದೆ. ಬಳಿಕ ನೀತಿ ಆಯೋಗದ ಜೊತೆಗೂ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇನ್ನು, ಬಿಎಸ್‌ಆರ್‌ಪಿ ಯೋಜನೆಗಾಗಿ ಜರ್ಮನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಹಾಗೂ ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಆರ್ಥಿಕ ನೆರವು ಪಡೆಯಲಾಗು ತಿದೆ. ಈ ಒಪಂದದ ನಿಬಂಧನೆ ಪ್ರಕಾರ 2025ರ ಸೆಪ್ಟೆಂಬ‌ರ್ ಹೊತ್ತಿಗೆ ರೋಲಿಂಗ್ ಸ್ಟಾಕ್ ನಿಯೋಜನೆ ಬಗ್ಗೆ ಎರಡೂ ಸಂಸ್ಥೆಗಳಿಗೆ ಅಂತಿಮ ವರದಿ ನೀಡಬೇ ಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಬೋಗಿಗಳ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದರು.

ಬಿಎಸ್‌ಆರ್‌ಪಿ ಯೋಜನೆಯಲ್ಲಿ ಮೆಟ್ರೋದಂತೆ ಹವಾನಿಯಂತ್ರಿತ ರೈಲನ್ನು ಬಳಸಲು ತೀರ್ಮಾನವಾಗಿದೆ. ಒಂದು ಬೋಗಿಯಲ್ಲಿ 300 ಜನ ಪ್ರಯಾಣಿ ಸುವ ಸಾಮರ್ಥ ಇರಲಿದ್ದು, ಆರಂಭಿಕ ಹಂತದಲ್ಲಿ ಮೂರು ಬೋಗಿಗಳ ರೈಲನ್ನು ಓಡಿಸುವ ಬಗ್ಗೆ ಚಿಂತನೆ ನಡೆದಿದೆ.

3.2 ಮೀ. ಅಗಲ, 21.74 ಮೀ. ಉದ್ದದ ರೈಲ್ವೆ ಬೋಗಿಯಲ್ಲಿ ಸೀಟುಗಳನ್ನು ಎದುರು ಬದು ರಾಗಿ ಜೋಡಿಸಲು ಕೆ-ರೈಡ್ ಯೋಜಿಸಿದೆ. ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ ಸಿಗ್ನಲಿಂಗ್ ಸಿಸ್ಟಂ) ಮೂಲಕ ರೈಲುಗಳು ಸಂಚರಿಸಲಿದ್ದು, ರೈಲಿನ ವೇಗ ಸೇರಿದಂತೆ ಟ್ರ್ಯಾಕ್‌ನಲ್ಲಿನ ಪ್ರತಿಯೊಂದು ಮಾಹಿತಿಯೂ ನಿರ್ವಹಣಾ ಕೇಂದ್ರಕ್ಕೆ ತಲುಪಬೇಕಿದೆ. ಮಹಿಳೆಯರು, ಅಂಗವಿಕಲರಿಗೆ ಅನುಕೂಲವಾಗುವಂತೆ ಬೋಗಿಯ ಒಳವಿನ್ಯಾಸವನ್ನು ರೂಪಿಸಿಕೊಳ್ಳಲಾಗಿದೆ. ಒಟ್ಟು 149 ಕಿ.ಮೀ. ಉಪನಗರ ರೈಲು ಯೋಜನೆ ನಾಲ್ಕು ಕಾರಿಡಾರ್ ಹೊಂದಿದೆ.

ಕೆಎಸ್‌ಆ‌ರ್- ದೇವನಹಳ್ಳಿ 'ಸಂಪಿಗೆ' ಮಾರ್ಗ (41.40 ಕಿ.ಮೀ.), ಬೈಯಪ್ಪನಹಳ್ಳಿ-ಚಿಕ್ಕಬಾಣಾವರ 'ಮಲ್ಲಿಗೆ' ಮಾರ್ಗ (25.01 ಕಿ.ಮೀ.), ಕೆಂಗೇರಿ-ವೈಟ್ ಫೀಲ್ಡ್ 'ಪಾರಿ ಜಾತ' ಮಾರ್ಗ (35.52 ಕಿ.ಮೀ.), ಹೀಲಲಿಗೆ- ರಾಜಾನುಕುಂಟೆ 'ಕನಕ' ಮಾರ್ಗ (46.24 ಕಿ.ಮೀ.) ಸಂಪರ್ಕ ಕಲ್ಪಿಸಲಿವೆ. ಮಲ್ಲಿಗೆ ಉಪನಗರ ರೈಲು ಮಾರ್ಗ 2027ಕ್ಕೆ ಮುಕ್ತವಾಗಲಿದೆ. ಅಷ್ಟರೊಳಗೆ ರೈಲು ಲಭ್ಯವಿರಲಿವೆ ಎಂದು ಕೆ-ರೈಡ್ ವಿಶ್ವಾಸ ವ್ಯಕ್ತಪಡಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''