ರಾಜ್ಯ ಸರ್ಕಾರದ ಹನಿಮೂನ್‌ ಅವಧಿ ಮುಗಿದಿದೆ : ಅಶೋಕ್

Published : Aug 21, 2025, 08:24 AM IST
Karnataka LoP R Ashoka (File photo/ANI)

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 27 ತಿಂಗಳಲ್ಲಿ 25 ರೀತಿಯ ತೆರಿಗೆ ಹಾಗೂ ಶುಲ್ಕ ಹೆಚ್ಚಳದ ಮೂಲಕ ತೆರಿಗೆ ಭಯೋತ್ಪಾದನೆ ಸೃಷ್ಟಿಸಿದೆ. 56,000 ಕೋಟಿ ರು. ಹೆಚ್ಚುವರಿ ತೆರಿಗೆ ಸಂಗ್ರಹಿಸಿದ್ದರೂ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ

  ವಿಧಾನಸಭೆ :  ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 27 ತಿಂಗಳಲ್ಲಿ 25 ರೀತಿಯ ತೆರಿಗೆ ಹಾಗೂ ಶುಲ್ಕ ಹೆಚ್ಚಳದ ಮೂಲಕ ತೆರಿಗೆ ಭಯೋತ್ಪಾದನೆ ಸೃಷ್ಟಿಸಿದೆ. 56,000 ಕೋಟಿ ರು. ಹೆಚ್ಚುವರಿ ತೆರಿಗೆ ಸಂಗ್ರಹಿಸಿದ್ದರೂ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ನಿರ್ಲಕ್ಷಿಸಿದೆ ಎಂದು ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರದ ಹನಿಮೂನ್‌ ಅವಧಿ ಮುಗಿದಿದೆ. 27 ತಿಂಗಳು ಎಂದರೆ ಮೂರು ಪೂರ್ಣ ಹೆರಿಗೆಗಳ ಸಮಯ. ಆದರೆ, ಯಾವೊಂದೂ ಯೋಜನೆ ಪೂರ್ಣಗೊಳಿಸದ ಈ ಸರ್ಕಾರವೇ ‘ಗರ್ಭಪಾತ ಸರ್ಕಾರ’ ಆಗಿಬಿಟ್ಟಿದೆ ಎಂದು ಟೀಕಿಸಿದರು.

ನಿಯಮ 69ರ ಅಲ್ಪ ಕಾಲಾವಾಧಿ ಚರ್ಚೆಯಲ್ಲಿ ಅನುದಾನ ಹಂಚಿಕೆ ತಾರತಮ್ಯ, ಅಭಿವೃದ್ಧಿ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ತೆರಿಗೆ, ಶುಲ್ಕ ಹೆಚ್ಚಿಸಿ 56 ಸಾವಿರ ಕೋಟಿ ರು. ವಸೂಲಿ ಮಾಡುತ್ತಿದ್ದರೂ ಅಭಿವೃದ್ಧಿಗೆ ಬಳಸುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ 1554 ಕೋಟಿ ರು, ಬಿಎಂಟಿಸಿಗೆ 532 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 35,000 ಕೋಟಿ ರು. ಗ್ಯಾರಂಟಿಗೆ ಬಳಕೆಯಾಗಿದೆ.

ಹೀಗಿದ್ದರೂ ತೆರಿಗೆ ಹಾಗೂ ಶುಲ್ಕ ಹೆಚ್ಚಳ ಮಾಡುತ್ತಲೇ ಇದ್ದಾರೆ. ಬಸ್‌ ದರ ಶೇ.15, ವಾಹನ ದರ ಶೇ.9, ಕಾವೇರಿ ನೀರು ಶುಲ್ಕ ಏರಿಕೆ, ಒಳಚರಂಡಿ ನೀರು ನಿರ್ವಹಣೆ ಶುಲ್ಕ ಶೇ.300 ಏರಿಕೆ, ಮದ್ಯದ ಮೇಲಿನ ತೆರಿಗೆ ಶೇ.40 ಏರಿಕೆ, ಮದ್ಯದಂಗಡಿ ಲೈಸೆನ್ಸ್‌ ಶುಲ್ಕ ಶೇ.50 ಏರಿಕೆ, ವಿದ್ಯುತ್‌ ದರ 36 ಪೈಸೆ ಏರಿಕೆ, ಮೆಟ್ರೊ ದರ ಏರಿಕೆ, ಆಸ್ತಿ ಮಾರ್ಗಸೂಚಿ ದರ ಏರಿಕೆ, ವೃತ್ತಿ ತೆರಿಗೆ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಹೆಚ್ಚಳ, ಕಾರ್ಮಿಕ ಇಲಾಖೆಯಲ್ಲಿ 250 ರು. ವರೆಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇರಾ ಅಡಿಯಲ್ಲೇ ಒಂದು ಫ್ಲ್ಯಾಟ್‌ಗೆ 15,000 ರು. ವಿಧಿಸಲಾಗಿದೆ. ಕಸದ ಸೆಸ್‌ ದುಪ್ಪಟ್ಟು ಮಾಡಿ ಎರಡು ಬಾರಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ತೆರಿಗೆ ಭಯೋತ್ಪಾದನೆ ಎಂದು ಆರೋಪಿಸಿದರು

ಮನೆಯೊಳಗೆ ಕಾರು ನಿಲ್ಲಿಸಿದರೆ ಪಾರ್ಕಿಂಗ್‌ ಶುಲ್ಕ ವಿಧಿಸಲಾಗುತ್ತದೆ. ಪಂಚಾಯಿತಿ ಇ-ಖಾತೆಗೆ 1,000 ರು. ಶುಲ್ಕ, ಬಿಬಿಎಂಪಿಯಲ್ಲಿ ಇ-ಖಾತಾ ಮಾಡಲು ಪ್ರತ್ಯೇಕ ಶುಲ್ಕ, ಮರಣ ಪ್ರಮಾಣಪತ್ರ ಪಡೆಯಲು 50 ರು. ಶುಲ್ಕ, ರೈತರ ಸಾಲಕ್ಕೆ ಸ್ಟ್ಯಾಂಪ್‌ ಕಾಗದಕ್ಕೆ 100 ರು. ಹೀಗೆ ಅನೇಕ ತೆರಿಗೆ, ಶುಲ್ಕ ಹೆಚ್ಚಿಸಲಾಗಿದೆ. ಇದರ ಜತೆಗೆ ಕಮಿಷನ್‌ ಹಾವಳಿಯೂ ನಿಂತಿಲ್ಲ. ಬಿಲ್‌ ಪಾವತಿಗಳಲ್ಲಿ ಶೇ.60 ರಷ್ಟು ಕಮಿಷನ್‌ ವಸೂಲಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಅಭಿವೃದ್ಧಿ ಇಲ್ಲ:

ವಿಧಾನಸೌಧ ಸುತ್ತಲೂ 1500 ಕ್ಕೂ ಅಧಿಕ ರಸ್ತೆ ಗುಂಡಿಗಳಿವೆ. ಒಂದು ರಸ್ತೆಯಲ್ಲೂ ನೆಮ್ಮದಿಯಾಗಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್‌ಗೆ ಬೆಂಗಳೂರಿನ ಹೊಣೆ ನೀಡಿದಾಗ ಬ್ರ್ಯಾಂಡ್‌ ಬೆಂಗಳೂರು ಕನಸು ಕಾಣುವ ಮಾತಾಡಿದ್ದರು. ಆದರೆ ಕಿಂದರಿ ಜೋಗಿಯಂತೆ ಕಥೆ ಕಟ್ಟಿ ಜನರನ್ನು ವಂಚಿಸಿದ್ದಾರೆ. ಬ್ರ್ಯಾಂಡ್‌ ಬೆಂಗಳೂರು ಹೋಗಿ ತೇಲುವ ಬೆಂಗಳೂರು ಹಾಗೂ ಬ್ಯಾಡ್‌ ಬೆಂಗಳೂರು ಆಗಿದೆ. ಕೆಟ್ಟ ನಗರಗಳಲ್ಲಿ ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನಕ್ಕೆ ಬಂದಿದೆ. ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳು 824 ಕಿ.ಮೀ. ಉದ್ದವಿದ್ದು, ಈವರೆಗೆ 5,000 ಕೋಟಿ ರು. ಖರ್ಚು ಮಾಡಲಾಗಿದೆ. ಇಷ್ಟೊಂದು ಹಣ ಎಲ್ಲಿಗೆ ಹೋಗಿದೆ? ಎಂದು ಆರ್‌. ಅಶೋಕ್‌ ಪ್ರಶ್ನೆ ಮಾಡಿದರು.

ಶಾಸಕರಿಗೆ ಅನುದಾನವಿಲ್ಲ:

ಶಾಸಕರಿಗೆ ಅನುದಾನ ನೀಡದ ಬಗ್ಗೆ ಕಾಂಗ್ರೆಸ್‌ನ ಶಾಸಕರೇ ಕಿಡಿಕಾರಿದ್ದಾರೆ. ಇನ್ನು ಬಿಜೆಪಿ ಶಾಸಕರಿಗೆ ಅನುದಾನ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರಿಗೂ ಅನುದಾನ ನೀಡಿದರೆ ಅಭಿವೃದ್ಧಿ ಮಾಡಬಹುದು. ಆದರೆ ಅನುದಾನ ವಿಚಾರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಅಶೋಕ್‌ ಹೇಳಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು, ಈ ವಾಡಿಕೆ ಶುರು ಮಾಡಿದ್ದೇ ನೀವು ಎಂದು ಕಿಡಿ ಕಾರಿದರು.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ