;Resize=(412,232))
ಬೆಂಗಳೂರು : ನಗರದಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ದಿಢೀರ್ ಸುರಿದ ಮಳೆಯಿಂದ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಮಳೆಗೆ ಸಿಲುಕಿದರು.
ವೈಟ್ಫೀಲ್ಡ್, ಶಾಂತಿನಗರ, ಸಾರಕ್ಕಿ ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಬೆನ್ನಿಗಾನಹಳ್ಳಿ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಪ್ಯಾಲಸ್ ಗುಟ್ಟಹಳ್ಳಿ, ಟೌನ್ಹಾಲ್, ಅಶೋಕ ಪಿಲ್ಲರ್, ಆಚಾರ್ಯ ಲೇಔಟ್, ಎಂ.ಜಿ.ರಸ್ತೆ, ಶಾಂತಿನಗರ, ಕಮೀಷನರೆಟ್ ರಸ್ತೆ, ಸಿಲ್ಕ್ಬೋರ್ಡ್ ಮೆಟ್ರೋ ನಿಲ್ದಾಣ ಸೇರಿದಂತೆ ಹಲವೆಡೆ ರಸ್ತೆಗಳು, ಫ್ಲೈಓವರ್, ಅಂಡರ್ಪಾಸ್ಗಳು ಜಲಾವೃತಗೊಂಡಿದ್ದವು. ಆನಂದರಾವ್ ವೃತ್ತದ ಬಳಿಯ ಒಳಚರಂಡಿಯ ಮ್ಯಾನ್ಹೋಲ್ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ಗಲೀಜು ನೀರು ಹರಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.
ಸಾರಕ್ಕಿಯಲ್ಲಿ ಗರಿಷ್ಠ 40 ಮಿ.ಮೀ, ಶಾಂತಿನಗರ 38, ಶ್ರೀನಗರದಲ್ಲಿ 22 ಮಿ.ಮೀ ಮಳೆಯಾಗಿದೆ. ದೀಪಾಂಜಲಿ ನಗರ 22, ಎಚ್ಎಎಲ್ ವಿಮಾನ ನಿಲ್ದಾಣ 20, ಮಹದೇವಪುರ 13, ವರ್ತೂರು 18, ಎ. ನಾರಾಯಣಪುರ 14, ದೇವಸಂದ್ರದಲ್ಲಿ 14, ಉಲ್ಲಾಳ 6.5 ಮಿ.ಮೀ ಮಳೆಯಾಗಿದೆ. ಶುಕ್ರವಾರವೂ ನಗರದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.