;Resize=(412,232))
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮುಕ್ತಾಯಗೊಂಡಿರುವ ನಡುವೆಯೇ ಹಿಂಗಾರು ರೈತರ ಕೈಹಿಡಿಯುವಂತೆ ಮಳೆ ಆಗುತ್ತಿದೆ. ಆದರೆ ದುರದೃಷ್ಟವಶಾತ್ ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸೋಮವಾರ ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ರೈತ ನಿಂಗಪ್ಪ ರಿತ್ತಿ (60) ಜಮೀನಿಗೆ ಕೆಲಸಕ್ಕೆ ಹೋಗಿದ್ದಾಗ ಸಿಡಿಲು ಬಡಿದುಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸವಣೂರು ತಾಲೂಕಿನಲ್ಲಿ 7-8 ಕುರಿಗಳೂ ಸಹ ಮೃತಪಟ್ಟಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆ, ಹೊಲಗಳು ಜಲಾವೃತಗೊಂಡಿವೆ. ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ 2 ಆಕಳು ಬಲಿಯಾಗಿವೆ.
ಒಣಹವೆಯಿಂದ ಬಿರುಕುಬಿಟ್ಟಿದ್ದ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಹಸ್ತ ಮಳೆ ತಂಪೆರೆದಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ಕಡಲೆಗೆ, ಮಳೆ ಪೂರಕವಾಗಿದ್ದು, ರೈತರ ಮುಖದಲ್ಲಿ ಸಂತೋಷ ಮನೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಭೂಮಿಗೆ ತಂಪೆರೆದಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಮಂಗಳೂರು, ಬಂಟ್ವಾಳ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಬೆಳಗ್ಗಿನ ವೇಳೆ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ.
ಶೃಂಗೇರಿ ತಾಲೂಕಾದ್ಯಂತ ಮಳೆ ಅಬ್ಬರ:
ಸೋಮವಾರ ಗುಡುಗು ಸಿಡಿಲಿನ ಆರ್ಭಟದೊಂದಿದೆ ಮಳೆ ಅಬ್ಬರಿಸಿತು. ಭಾನುವಾರ ರಾತ್ರಿಯಿಂದ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೆಳಗಿನವರೆಗೂ ಸುರಿಯಿತು. ನವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಮಳೆರಾಯ ಮುಂಚಿತವಾಗಿ ಅಬ್ಬರಿಸಲು ಆರಂಭಿಸಿದೆ. ಅಡಕೆ ಕೊಯಿಲು ಆರಂಭಗೊಂಡಿದ್ದು, ಬೆಳೆಗಾರರಲ್ಲಿ ಫಜೀತಿ ಎದುರಾಗಿದೆ. ಗುಡುಗು ಸಿಡಿಲಿನ ಆರ್ಭಟದಿಂದ ವಿದ್ಯುತ್, ಮೊಬೈಲ್ ನೆಟ್‌ವರ್ಕ್‌ನಲ್ಲಿ ವ್ಯತ್ಯಯ ಉಂಟಾಗಿತ್ತು.
ಮನೆಗೆ ಹಾನಿ, ಮಹಿಳೆ ಗಂಭೀರ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆನೆದೋಡಿ ಎಂಬಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಜಿಕಲ್ಲು ಗ್ರಾಮದ ಪ್ರೌಢಶಾಲೆಯೊಂದರ ತರಗತಿ ಕೊಠಡಿಗೂ ಸಿಡಿಲು ಬಡಿದು ಹಾನಿಯಾಗಿದೆ.
ಬೆಂಗಳೂರಿನಲ್ಲಿ ಸಂಜೆ ಮಳೆ:
ರಾಜಧಾನಿ ಬೆಂಗಳೂರಿನಲ್ಲಿ ಸಂಜೆ 3 ಗಂಟೆ ನಂತರ ಅಬ್ಬರ ಮಳೆಯಾಗಿದೆ. ಶಾಲೆ, ಕಚೇರಿಯಿಂದ ತೆರಳುವವರಿಗೆ ಫಜೀತಿಯಾಗಿದ್ದು, ರಸ್ತೆ, ಇಕ್ಕೆಲಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಏರ್ಪಟ್ಟಿತು.
ಚಾ.ನಗರದಲ್ಲಿ ಗುಡುಗು ಸಹಿತ ಮಳೆ:
ಚಾಮರಾಜನಗರದಲ್ಲಿ ಸೋಮವಾರ ರಾತ್ರಿ 8 ಗಂಟೆ ಹೊತ್ತಿಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ ಸೇರಿದಂತೆ ಹಲವೆಡೆ ಮಳೆ ಇಳೆಯನ್ನು ತಂಪಾಗಿಸಿದೆ.