ರಾಜಣ್ಣ ಹನಿಟ್ರ್ಯಾಪ್‌ ಆರೋಪ ನಿರಾಧಾರ: ಸರ್ಕಾರಕ್ಕೆ ಸಿಐಡಿ

Published : Jul 31, 2025, 07:14 AM IST
KN Rajanna Honeytrap

ಸಾರಾಂಶ

ತಮ್ಮ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂಬ ರಾಜ್ಯ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಆರೋಪ ನಿರಾಧಾರವಾಗಿದೆ. ಸಚಿವರ ಆಪಾದನೆಗೆ ಯಾವುದೇ ಪುರಾವೆ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ವಿಚಾರಣೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಪೂರ್ಣಗೊಳಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ತಮ್ಮ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂಬ ರಾಜ್ಯ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಆರೋಪ ನಿರಾಧಾರವಾಗಿದೆ. ಸಚಿವರ ಆಪಾದನೆಗೆ ಯಾವುದೇ ಪುರಾವೆ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ವಿಚಾರಣೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಪೂರ್ಣಗೊಳಿಸಿದೆ.

ತನ್ಮೂಲಕ ಏಳು ತಿಂಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹನಿಟ್ರ್ಯಾಪ್ ಯತ್ನ ವಿವಾದವು ತಾರ್ಕಿಕ ಅಂತ್ಯ ಕಂಡಿದೆ.

ಈ ಪ್ರಕರಣದ ಕುರಿತು ಸುದೀರ್ಘವಾಗಿ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಕೊನೆಗೆ ಆರೋಪದಲ್ಲಿ ಹುರುಳಿಲ್ಲವೆಂದು ಷರಾ ಬರೆದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವಿಧಾನಸಭಾ ಅಧಿವೇಶನದ ವೇಳೆ ತಮ್ಮ ಮೇಲೆ ಮೂರು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಸಚಿವ ರಾಜಣ್ಣ ಗಂಭೀರ ಸ್ವರೂಪದ ಆರೋಪ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಅವರು ಮನವಿ ಮಾಡಿದ್ದರು. ಇದೇ ವಿಚಾರವಾಗಿ ರಾಜಣ್ಣ ಅವರ ಪುತ್ರ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ರಾಜೇಂದ್ರ ಸಹ ದನಿ ಎತ್ತಿದ್ದರು. ಈ ಮನವಿ ಸ್ವೀಕರಿಸಿದ ಗೃಹ ಸಚಿವರು, ಹನಿಟ್ರ್ಯಾಪ್ ಆರೋಪದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅಂತೆಯೇ ಸಿಐಡಿ ವಿಚಾರಣೆ ನಡೆಸಿತ್ತು.

ನೀವೇ ಹುಡುಕಿ ಅಂದ್ರು ಸಚಿವರು:

ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿರುವ ಸಚಿವರ ಮನೆ, ಗೃಹ ಕಚೇರಿ ಹಾಗೂ ಮಧುಗಿರಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ ನಡೆಸಿತ್ತು. ಅಲ್ಲದೆ ಸಚಿವರು, ಅವರ ಆಪ್ತ ಸಹಾಯಕರು, ಭದ್ರತಾ ಸಿಬ್ಬಂದಿ ಹಾಗೂ ಮನೆ ಕೆಲಸಗಾರರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದರು. ಆದರೆ ಯಾರೊಬ್ಬರೂ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಪೂರಕವಾದ ಮಾಹಿತಿ ನೀಡಲಿಲ್ಲ ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ತಾವು ಮಾಡಿದ್ದ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಸಚಿವರಿಗೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ‘ನೀವೇ ತನಿಖೆ ಮಾಡಿ. ನನಗೆ ಯಾರೂ ಗೊತ್ತಿಲ್ಲ. ನನ್ನ ಮನೆಗೆ ಬಂದು ಕೈ ಹಿಡಿದು ಎಳೆದಾಡಿದಾಗ ಕಪಾಳಕ್ಕೆ ಬಿಗಿದು ಕಳುಹಿಸಿದ್ದೆ. ಆದರೆ ಆ ಹುಡುಗಿಯ ಪರಿಚಯವೂ ಇಲ್ಲ ಗುರುತು ಇಲ್ಲ’ ಎಂದು ರಾಜಣ್ಣ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಸಚಿವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿರಲಿಲ್ಲ. ಸರ್ಕಾರಿ ನಿವಾಸದ ಸಂದರ್ಶಕರ ನೋಂದಣಿ ಪುಸಕ್ತದಲ್ಲಿ ಸಚಿವರ ಭೇಟಿಗೆ ಬಂದವರ ಮಾಹಿತಿ ಕೂಡ ಸಿಗಲಿಲ್ಲ ಎಂದು ಸಿಐಡಿ ಹೇಳಿರುವುದಾಗಿ ಉನ್ನತ ಮೂಲಗಳು ಹೇಳಿವೆ.

ಈ ಎಲ್ಲ ಅಂಶಗಳನ್ನು ಆಧರಿಸಿ ಸಚಿವರ ಆರೋಪಕ್ಕೆ ಆಧಾರರಹಿತವಾಗಿವೆ ಎಂದು ಅಂತಿಮ ವರದಿಯಲ್ಲಿ ಸಿಐಡಿ ತಿಳಿಸಿರುವುದಾಗಿ ಗೊತ್ತಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ 58 ಮಾದರಿಯ ಕರಡು ಲೋಗೋ ಸಿದ್ಧ!