ಸರ್ಕಾರದ ವಿರುದ್ಧ ಆರ್‌ಸಿಬಿ ಚಾರ್ಜ್‌ಶೀಟ್‌!

Published : Jun 10, 2025, 04:29 AM IST
RCB

ಸಾರಾಂಶ

ಇದೀಗ ರಾಜ್ಯ ಸರ್ಕಾರದ ವಿರುದ್ಧ ಇದೀಗ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಕಂಪನಿಗಳೇ ಮುಗಿಬಿದ್ದಿವೆ.

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ನಡೆದಿದ್ದ ದುರಂತಕ್ಕೆ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಆಡಳಿತ ಮಂಡಳಿ, ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಆರ್‌ಸಿಎಸ್‌ಪಿಎಲ್‌), ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮೇಲೆ ಈವರೆಗೆ ಸರ್ಕಾರ ಬೆಟ್ಟು ಮಾಡುತ್ತಿತ್ತು. ಇದೀಗ ರಾಜ್ಯ ಸರ್ಕಾರದ ವಿರುದ್ಧ ಇದೀಗ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಕಂಪನಿಗಳೇ ಮುಗಿಬಿದ್ದಿವೆ.

ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ವಿಜಯೋತ್ಸವ ಕಾರ್ಯಕ್ರಮ ನಡೆಸಬೇಕು ಎಂದು ಸರ್ಕಾರ ಕೈಗೊಂಡ ನಿರ್ಧಾರದಿಂದಲೇ ಕಾಲ್ತುಳಿತ ದುರಂತ ನಡೆದಿದೆ. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು ನಂತರ ಕ್ರೀಡಾಂಗಣಕ್ಕೆ ಬಂದಿದ್ದೇ ಕಾಲ್ತುಳಿತ ಸಂಭವಿಸಲು ಕಾರಣ ಎಂದು ಪ್ರತ್ಯಾರೋಪ ಮಾಡಿವೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಆರ್‌ಸಿಎಸ್‌ಪಿಎಲ್‌ ಮತ್ತು ಡಿಎನ್‌ಎ ಕಂಪನಿ ಅರ್ಜಿ ಸಲ್ಲಿಸಿದೆ. ಜತೆಗೆ ಈಗಾಗಲೇ ಬಂಧಿಸಿರುವ ತಮ್ಮನ್ನು ಕೂಡಲೇ ಬಿಡುಗಡೆಗೆ ಆದೇಶಿಸುವಂತೆ ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್‌ ಸೋಸಲೆ, ಡಿಎನ್‌ಎ ಉದ್ಯೋಗಿಗಳಾದ ಸುನೀಲ್‌ ಮ್ಯಾಥ್ಯೂ, ಕಿರಣ್‌ ಕುಮಾರ್‌ ಮತ್ತು ಸುಮಂತ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಗಳ ವಿಚಾರಣೆ ವೇಳೆ ಆರ್‌ಸಿಬಿ, ಕೆಎಸ್‌ಸಿಎ ಸಂಸ್ಥೆಗಳು, ಸರ್ಕಾರದ ವಿರುದ್ದ ಹಲವು ಆರೋಪಗಳನ್ನು ಮಾಡಿ ಹೈಕೋರ್ಟ್‌ ಗಮನಕ್ಕೆ ತಂದು, ತಮ್ಮ ವಿರುದ್ಧದ ಬಲವಂತದ ಕ್ರಮ ಜರುಗಿಸದಂತೆ ಆದೇಶಿಸಲು ಕೋರಿವೆ.

ಆರೋಪಗಳ ಸುರಿಮಳೆ:

ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಜೂ.3 ರಂದು ಪತ್ರ ಬರೆಯಲಾಗಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಸಲು ಸರ್ಕಾರವೇ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಿ ಯೋಜನೆ ರೂಪಿಸಿತು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಅಲ್ಲಿಗೆ ಲಕ್ಷಾಂತರ ಜನ ಬಂದಿದ್ದರು. ನಂತರ ಸ್ಟೇಡಿಯಂಗೆ ಬಂದಿದ್ದೇ ಕಾಲ್ತುಳಿತ ಸಂಭವಿಸಲು ಕಾರಣ ಎಂದು ಅರ್ಜಿದಾರ ಸಂಸ್ಥೆಗಳು ಅರ್ಜಿಯಲ್ಲಿ ಆರೋಪಿಸಿವೆ.

ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದ್ದ ಪೊಲೀಸರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಗತ್ಯವಿದ್ದಷ್ಟು ಭದ್ರತೆ ನೀಡಿಲಿಲ್ಲ. ಅಲ್ಲಿ ಕಡಿಮೆ ಪ್ರಮಾಣದಲ್ಲಿ ಪೊಲೀಸರು ಇದ್ದರು. ಇದರಿಂದ ತಾವೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದೆವು. ಮಧ್ಯಾಹ್ನ 3.30ಗೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ನಂತರ ಪೊಲೀಸರು ಬಂದು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಘಟನೆ ದಿನ ಪೊಲೀಸರಿಗೆ 2450 ಆಹಾರ ಪೊಟ್ಟಣ ಸಿದ್ದಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದು. ಇದರಿಂದ ಮಧ್ಯಾಹ್ನ 600 ಆಹಾರ ಪೊಟ್ಟಣಗಳನ್ನು ಮಾತ್ರ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದರು ಎಂದು ಅರ್ಜಿದಾರ ಸಂಸ್ಥೆಗಳು ಆರೋಪಿಸಿವೆ.

ಆರೋಪ ಅಲ್ಲಗಳೆದ ಸರ್ಕಾರ

ಸಂಸ್ಥೆಗಳ ಈ ಆರೋಪಗಳನ್ನು ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಸಂಪೂರ್ಣವಾಗಿ ಅಲ್ಲಗೆಳೆದರು. ಆರ್‌ಸಿಬಿ ಜಯಿಸಿದ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಆರ್‌ಸಿಬಿ ಟ್ವೀಟ್‌ ಮಾಡಿ ಘೋಷಿಸಿದೆ. ಇದಕ್ಕೆ ಸೂಕ್ತ ಅನುಮತಿ ಪಡೆದಿರಲಿಲ್ಲ. ಆರ್‌ಸಿಬಿ, ಡಿಎನ್‌ಎ ನಡೆಯೇ 11 ಮಂದಿ ಸಾವಿಗೆ ಕಾರಣ. ಆರೋಪಿಗಳು ಫಲಾಯನ ಮಾಡುವುದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರಬೇಕೇ? ಆರ್‌ಸಿಬಿ ಅಥವಾ ಡಿಎನ್‌ಎ ಉದ್ಯೋಗಿಗಳನ್ನು ಬಂಧಿಸದಂತೆ ಆದೇಶಿಸಿದರೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಆಕ್ರೋಶದಿಂದ ನುಡಿದರು.

ಆದರೆ, ಈ ಹಿಂದೆ ಕೆಎಸ್‌ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿಸಲಾಗಿದೆ. ಆರ್‌ಸಿಎಸ್‌ಪಿಎಲ್‌ ಮತ್ತು ಡಿಎನ್‌ಎ ಉದ್ಯೋಗಿಗಳು ಪರ ವಾಗಿ ಇಂತಹದ್ದೇ ಆದೇಶ ನೀಡಿ ಅವರಿಗೆ ರಕ್ಷಣೆ ನೀಡಬೇಕಿದೆ ಎಂದು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ಪೀಠ ತಿಳಿಸಿತು.

ಅದರೆ, ಅಂತಹ ಆದೇಶಕ್ಕೆ ಹೊರಡಿಸಲು ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರು ಆಕ್ಷೇಪಿಸಿದ್ದರಿಂದ, ಅರ್ಜಿದಾರ ಕಂಪನಿಗಳ ಪದಾಧಿಕಾರಿಗಳನ್ನು ಬಂಧಿಸದಂತೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಜೂ.12ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅಲ್ಲಿನ ಠಾಣಾಧಿಕಾರಿ ಅಮಾನತುಗೊಂಡಿದ್ದಾರೆ. ನಿಖಿಲ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇದು ಕಾನೂನುಬಾಹಿರ ಕ್ರಮ. ನಿಖಿಲ್‌ ಬಂಧಿಸುವ ಅಧಿಕಾರ ಸಿಸಿಬಿಗೆ ಇರಲಿಲ್ಲ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗೋಷ್ಠಿಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ ನಂತರ ಪೊಲೀಸರು ನಿಖಿಲ್‌ ಮತ್ತಿತರರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿ, ಅಗತ್ಯಬಿದ್ದರೆ ಮಾತ್ರ ತನಿಖಾಧಿಕಾರಿ ಆರೋಪಿಯನ್ನು ಬಂಧಿಸಬಹುದು. ತನಿಖಾಧಿಕಾರಿ ಹೊರತುಪಡಿಸಿ ಯಾರಿಗೂ ಬಂಧಿಸುವಂತೆ ಸೂಚಿಸುವ ಅಧಿಕಾರವಿಲ್ಲ. ತನಿಖೆ ನಡೆಯದೇ ಮುಖ್ಯಮಂತ್ರಿಗಳು ಬಂಧಿಸುವಂತೆ ಹೇಗೆ ಸೂಚನೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಬಂಧಿಸದಂತೆ ಮೌಖಿಕ ಸೂಚನೆ:

ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ವಜಾಗೊಳಿಸಿದ್ದಾರೆ. ಐವರು ಪೊಲೀಸ್‌ ಅಧಿಕಾರಿಗಳ ಅಮಾನತು ಮಾಡಿದ್ದಾರೆ. ಗುಪ್ತದಳದ ಮುಖ್ಯಸ್ಥ ಹುದ್ದೆಯಿಂದ ಹೇಮಂತ್‌ ನಿಂಬಾಳ್ಕರ್‌ ರನ್ನು ವರ್ಗಾಯಿಸಿದ್ದಾರೆ. ಇದೆಲ್ಲ ಏತಕ್ಕಾಗಿ ಮಾಡಿದ್ದಾರೆ? ಅವರನ್ನು ಬಂಧಿಸುವಂತೆ ಮುಖ್ಯಮಂತ್ರಿ ಏಕೆ ನಿರ್ದೇಶಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ನಿಖಿಲ್‌ ಪರ ವಕೀಲರು, ಬಂಧನಕ್ಕೂ ಮುನ್ನ ನಿಖಿಲ್‌ಗೆ ಪೊಲೀಸರು ಯಾವುದೇ ನೋಟಿಸ್‌ ನೀಡಿಲ್ಲ. ಪತ್ನಿ, ಮಗುವಿನ ಜೊತೆ ಪ್ರವಾಸಕ್ಕೆ ತೆರಳುತ್ತಿದ್ದ ನಿಖಿಲ್‌ ರನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ಕಾನೂನುಬಾಹಿರ ಕ್ರಮ ಎಂದು ಆಕ್ಷೇಪಿಸಿದರು.

ಈ ಎಲ್ಲ ಆರೋಪಗಳನ್ನು ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಆಕ್ಷೇಪಿಸಿ, ಕಂಪನಿಗಳ ನಡೆಯಿಂದ ಘಟನೆ ನಡೆದಿದೆ ಎಂದು ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿಗಳು ತನಿಖೆಗೆ ಸಹಕರಿಸಬೇಕು. ಸರ್ಕಾರ ಅವರನ್ನು ಬಂಧಿಸಬಾರದು ಎಂದು ಮೌಖಿಕವಾಗಿ ಹೇಳಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ