ಅಂತಾರಾಷ್ಟ್ರೀಯ ಸವಾಲು ಎದುರಿಸಲು ಸಿದ್ಧರಾಗಿ: ವಿದ್ಯಾರ್ಥಿಗಳಿಗೆ ನ್ಯಾ.ಭಜಂತ್ರಿ ಸಲಹೆ

Published : Jun 12, 2025, 06:19 AM IST
Bengaluru VV

ಸಾರಾಂಶ

ಅಂತಾರಾಷ್ಟ್ರೀಯ ಸವಾಲುಗಳನ್ನು ಎದುರಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬಿಹಾರದ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರು ಪದವೀಧರರಿಗೆ ಸಲಹೆ ನೀಡಿದರು.

ಬೆಂಗಳೂರು : ಭಾರತೀಯ ವಿದ್ಯಾರ್ಥಿಗಳು ನಮ್ಮ ದೇಶದ ಬೌದ್ಧಿಕ ಬಂಡವಾಳ ಮತ್ತು ಅದರ ಶ್ರೀಮಂತರ ಪರಂಪರೆಯ ರಾಯಭಾರಿಗಳಾಗಿ ಅಂತಾರಾಷ್ಟ್ರೀಯ ಸವಾಲುಗಳನ್ನು ಎದುರಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬಿಹಾರದ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರು ಪದವೀಧರರಿಗೆ ಸಲಹೆ ನೀಡಿದರು.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಪರಸ್ಪರ ಸಂಪರ್ಕ ಹೆಚ್ಚುತ್ತಿರುವ ಜಗತ್ತಿನಲ್ಲಿ ರಾಷ್ಟ್ರ-ರಾಷ್ಟ್ರಗಳ ನಡುವಿನ ಗಡಿಗಳು ಮಸುಕಾಗುತ್ತಿವೆ. ಇಂತಹ ಸಂದರ್ಭದಲ್ಲಿ ಯುವ ಜನರ ಕೌಶಲಗಳು ಮತ್ತು ದೃಷ್ಟಿಕೋನಗಳು ಭೌಗೋಳಿಕ ಗಡಿಗಳಿಗಷ್ಟೇ ಸೀಮಿತವಾಗಿರಬಾರದು. ಬೆಂ.ನಗರ ವಿವಿ ಪದವಿಯು ಇಡೀ ಜಗತ್ತಿನಲ್ಲಿ ತಾವು ತೊಡಗಿಸಿಕೊಳ್ಳಲು ಪಾಸ್‌ಪೋರ್ಟ್ ಆಗಿದೆ.

ಭಾರತದ ಬೌದ್ಧಿಕ ಬಂಡವಾಳ ಮತ್ತು ಅದರ ಶ್ರೀಮಂತ ಪರಂಪರೆಯ ರಾಯಭಾರಿಗಳಾಗಿ ‘ವಸುದೈವ ಕುಟುಂಬಕಂ’ಎಂಬ ಮನೋಭಾವವನ್ನು ನೀವು ಪ್ರದರ್ಶಿಸಬೇಕಿದೆ. ವೈವಿಧ್ಯಮಯ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಿ, ಅಂತಾರಾಷ್ಟ್ರೀಯ ಸವಾಲುಗಳೊಂದಿಗೆ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಘಟಿಕೋತ್ಸವ ಪದವಿ ವ್ಯಾಸಂಗದ ಅಂತ್ಯವಲ್ಲ, ಆರಂಭ ಎಂದು ಭಾವಿಸಬೇಕು. ನಿಮ್ಮ ಪದವಿ ಕೇವಲ ಕಾಗದದ ತುಂಡುಗಳಲ್ಲ. ನಿಮ್ಮ ಕಠಿಣ ಪರಿಶ್ರಮಕ್ಕೆ ಮಾಡಿದ ಹೂಡಿಕೆ. ಆದರೆ, ನಿಮ್ಮ ಶಿಕ್ಷಣದ ನಿಜವಾದ ಮೌಲ್ಯವು ನೀವು ಅದನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದರಲ್ಲಿ ಅಡಗಿದೆ. ಜೀವನವು ಸವಾಲು ಮತ್ತು ಸಂಕಷ್ಟಗಳನ್ನು ನೀಡುತ್ತದೆ. ಆದರೆ, ಅದೇ ಬದುಕು ಅಪಾರವಾದ ಆನಂದ ಮತ್ತು ಅಪೂರ್ವ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.

ನಿಜವಾದ ನಾಯಕತ್ವವು ಇತರರನ್ನು ಅರ್ಥಮಾಡಿಕೊಳ್ಳುವಿಕೆ ಮತ್ತು ಸೇವೆಯಲ್ಲಿ ಅಡಗಿದೆ. ನೈತಿಕತೆಯು ನಂಬಿಕೆ ಮತ್ತು ಗೌರವದ ಅಡಿಪಾಯವಾಗಿದೆ. ನಿಮ್ಮನ್ನು ಮೀರಿ ನೀವು ಜಗತ್ತನ್ನು ನೋಡಿ ಮತ್ತು ನಿಮ್ಮ ಸುತ್ತಲಿನವರನ್ನು ಮೇಲೆತ್ತಲು ಪ್ರಯತ್ನ ಮಾಡಿ. ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಿ, ಪ್ರತಿ ಯಶಸ್ಸನ್ನು ವಿನಯದಿಂದ ಸ್ವೀಕರಿಸಿ ಮತ್ತು ಪ್ರತಿ ಸಂವಹನವನ್ನು ದಯೆಯಿಂದ ನಡೆಸಿರಿ. ನಿಮ್ಮ ಕಾರ್ಯಗಳನ್ನು ಸಹಾನುಭೂತಿಯಿಂದ ಮಾರ್ಗದರ್ಶನ ಮಾಡಿರಿ ಎಂದು ತಿಳಿಸಿದರು.

ಸ್ಥಳೀಯ ಭಾಷೆಯಲ್ಲಿ ಶಿಕ್ಷಣಕ್ಕೆ ಆದ್ಯತೆ: ಗೆಹಲೋತ್

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಬೇಕು. ಹಾಗೆಯೇ ಈ ಘಟಿಕೋತ್ಸವದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಂಕ್‌ ಪಡೆದಿದ್ದಾರೆ. ಇದು ಶೈಕ್ಷಣಿಕವಾಗಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿರುವ ದ್ಯೋತಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂ.ನಗರ ವಿವಿ ಕುಲಪತಿ(ಪ್ರಭಾರ) ಪ್ರೊ.ಕೆ.ಆರ್.ಜಲಜಾ, ವಿವಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಬಿ. ರಮೇಶ್ ಉಪಸ್ಥಿತರಿದ್ದರು.

ಚಿನ್ನದ ಪದಕ, ಪದವಿ ಪ್ರದಾನ

ಘಟಿಕೋತ್ಸವದಲ್ಲಿ 57 ವಿದ್ಯಾರ್ಥಿಗಳಿಗೆ 65 ಚಿನ್ನದ ಪದಕ ಮತ್ತು ನಗದು ಬಹುಮಾನ. ಒಟ್ಟಾರೆ 32,486 ಪದವಿ ಹಾಗೂ 7,285 ಸ್ನಾತಕೋತ್ತರ ಪದವಿ ಸೇರಿ 39,780 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದರು. ಸಾಂಕೇತಿಕವಾಗಿ ಹಲವು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉಳಿದವರಿಗೆ ಘಟಿಕೋತ್ಸವದ ಬಳಿಕ ಪ್ರದಾನ ಮಾಡಲಾಗುವುದು ಎಂದು ವಿವಿಯ ಅಧಿಕಾರಿಗಳು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''