ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ರೆ ಸಚಿವ ಸ್ಥಾನ ಬಿಡಲು ಸಿದ್ಧ - ಈ ವಿಷಯ ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ: ರಾಜಣ್ಣ

ಸಾರಾಂಶ

ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಗಿರಿ ಬಿಡುತ್ತೇನೆ. ಇದನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

  ತುಮಕೂರು : ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಗಿರಿ ಬಿಡುತ್ತೇನೆ. ಇದನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ಧಾಂತ ಇದೆ. ಅದಕ್ಕೆ ನಾನು ಬದ್ಧ. 2023ರ ಮೇ 18ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದರು. ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಗಳಿಗೆ ಒಪ್ಪಂದ ಆಗಿದೆ ಎಂಬ ಬಗ್ಗೆ 2023ರ ಮೇ 18ರಂದು ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖಿಸಿಲ್ಲ. 5 ವರ್ಷ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.

ಹಾಸನ ಉಸ್ತುವಾರಿಯಿಂದ ಮುಕ್ತಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಈ ಉದ್ದೇಶದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಲು ಕೋರಿದ್ದೇನೆ. ಹಾಸನಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.

ಜಾತಿ ಗಣತಿ

ಚಾಮರಾಜನಗರದಲ್ಲಿ 2025ರ ಮಾರ್ಚ್ 17ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿಯನ್ನು ಬಿಡಗುಡೆ ಮಾಡುವ ಸಂಭವವಿದೆ. ನ್ಯಾ.ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿಗೆ ತರಲಿದ್ದೇವೆ ಎಂದು ರಾಜಣ್ಣ ನುಡಿದರು.

Share this article