;Resize=(412,232))
ಬೆಂಗಳೂರು : ನಗರದಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ಸಂಬಂಧ ಪ್ರಸ್ತಾಪಿಸಲಾಗಿರುವ ಹೊಸ ನಿಯಮಗಳು ಹಾಗೂ ವಾರ್ಷಿಕವಾಗಿ 15 ಸಾವಿರ ರು.ನಿಂದ 25 ಸಾವಿರ ರು.ವರೆಗೆ ಶುಲ್ಕ ವಿಧಿಸುವ ಪ್ರಸ್ತಾಪನೆಯನ್ನು ಪುನರ್ ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಸಾರ್ವಜನಿಕರಿಂದ ವಿವಿಧ ಅಭಿಪ್ರಾಯಗಳು ಮತ್ತು ಆತಂಕಗಳು ವ್ಯಕ್ತವಾಗುತ್ತಿದ್ದು, ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ರಸ್ತೆ ಬದಿ ಪಾರ್ಕಿಂಗ್ ಸಮಸ್ಯೆ ಇರುವುದು ಸತ್ಯವಾದರೂ, ಈ ವೇಳೆ ಸಾಮಾನ್ಯ ನಾಗರಿಕರ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣಿಸುವುದು ಅಗತ್ಯ. ಈ ವಿಷಯವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪರಿಗಣಿಸಿ, ಬೆಂಗಳೂರು ನಗರದ ಶಾಸಕರು, ಸಂಘ-ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲ ನೀತಿಗಳ ಫಲವಾಗಿ ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಜಿಎಸ್‌ಟಿ, ಟೋಲ್ ಸೇರಿದಂತೆ ವೆಚ್ಚ ಹೆಚ್ಚಳದಿಂದ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ, ವಾಹನಗಳಿಂದಾಗಿ ಹೆಚ್ಚುವರಿ ₹15 ಸಾವಿರ ರು.ನಿಂದ 25 ಸಾವಿರ ರು.ವರೆಗೆ ವಾರ್ಷಿಕ ಪಾರ್ಕಿಂಗ್ ಶುಲ್ಕ ಆರ್ಥಿಕ ಹೊರೆಯಾಗುತ್ತದೆ.
ರಾಜ್ಯ ಸರ್ಕಾರವು ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ಹಾಗೂ ಆರ್ಥಿಕವಾಗಿ ನೆರವಾಗಲು ವಿವಿಧ ಜನಪರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇಂತಹ ಸಂದರ್ಭದಲ್ಲಿ, ನಗರ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಮೇಲೆ ಮತ್ತೊಂದು ಅನಿವಾರ್ಯ ಆರ್ಥಿಕ ಹೊರೆ ಬೀಳದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಬೆಂಗಳೂರು ನಗರದಲ್ಲಿ ದೊಡ್ಡ ನಿವೇಶನ ಅಥವಾ ಸ್ವಂತ ಮನೆ ಹೊಂದಿರುವ ಕೆಲವರು ತಮ್ಮ ವಾಹನಗಳನ್ನು ಮನೆಯ ಆವರಣದಲ್ಲೇ ನಿಲ್ಲಿಸಲು ಸಾಧ್ಯವಾಗಬಹುದು. ಆದರೆ ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಸೀಮಿತ ಜಾಗದ ಮನೆಗಳು ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದು, ತಮ್ಮ ವಾಹನಗಳನ್ನು ಮನೆಯೊಳಗೆ ನಿಲ್ಲಿಸಲು ಅಗತ್ಯ ಸ್ಥಳದ ಕೊರತೆ ಇದೆ.
ಹೊಸ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸರಿಯಾದ ಕ್ರಮ. ಆದರೆ, ನಗರದ ಹಳೆ ಕಟ್ಟಡಗಳು ಮತ್ತು ಹಳೆ ವಸತಿ ಪ್ರದೇಶಗಳಲ್ಲಿ ಇಂದಿನ ವಾಹನಗಳ ಸಂಖ್ಯೆಗೆ ಅನುಗುಣವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಸಾಧ್ಯವಿಲ್ಲ. ಅನೇಕ ಕುಟುಂಬಗಳು ಈಗಾಗಲೇ ಮನೆ ಸಾಲ, ವಾಹನ ಸಾಲ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ದೈನಂದಿನ ಜೀವನ ವೆಚ್ಚಗಳನ್ನು ನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ಅವರ ಮೇಲೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿ ಮತ್ತು ಬೆಂಗಳೂರಿನ ವಾಸ್ತವಿಕ ಪಾರ್ಕಿಂಗ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಪ್ರಸ್ತಾಪಿಸಿರುವ ವಾರ್ಷಿಕ ಪಾರ್ಕಿಂಗ್ ಶುಲ್ಕ ಮರುಪರಿಶೀಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಅಕ್ರಮ ಹಾಗೂ ದೀರ್ಘಾವಧಿಯ ರಸ್ತೆಬದಿ ಪಾರ್ಕಿಂಗ್ ನಿಯಂತ್ರಿಸುವುದು ಅಗತ್ಯವಾಗಿದ್ದು, ಅದನ್ನು ನಾನು ಸ್ವಾಗತಿಸುತ್ತೇನೆ. ಜೊತೆಗೆ ನಿಯಮಿತವಾಗಿ ವಾಹನ ಬಳಸುವ ಮತ್ತು ತಮ್ಮ ಕಟ್ಟಡದೊಳಗೆ ಪಾರ್ಕಿಂಗ್ ಸೌಲಭ್ಯ ಹೊಂದಿರದ ಸಾಮಾನ್ಯ ಕುಟುಂಬಗಳಿಗೆ ವಿನಾಯಿತಿ ನೀಡಲು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.