ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಂಕ 33ಕ್ಕಿಳಿಸಿ, ಆಂತರಿಕ ಅಂಕ ಪರಿಗಣಿಸಿ: ಕ್ಯಾಮ್ಸ್‌

ಸಾರಾಂಶ

ಕನಿಷ್ಠ ಶೇಕಡಾವಾರು ಅಂಕಗಳನ್ನು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಸಂಯೋಜಿತ ಮಾದರಿಯಲ್ಲಿ 33ಕ್ಕೆ ಇಳಿಸಬೇಕು ಎಂದು ಖಾಸಗಿ ಶಾಲಾ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.

 ಬೆಂಗಳೂರು : ಕೇಂದ್ರೀಯ ಪಠ್ಯಕ್ರಮದ (ಸಿಬಿಎಸ್‌ಇ, ಐಸಿಎಸ್‌) ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದಲ್ಲೂ 10ನೇ ತರಗತಿ ಪರೀಕ್ಷಾ ವ್ಯವಸ್ಥೆ ಪುನಾರಚಿಸಬೇಕು. ಉತ್ತೀರ್ಣಕ್ಕೆ ಬೇಕಾದ ಕನಿಷ್ಠ ಶೇಕಡಾವಾರು ಅಂಕಗಳನ್ನು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಸಂಯೋಜಿತ ಮಾದರಿಯಲ್ಲಿ 33ಕ್ಕೆ ಇಳಿಸಬೇಕು ಎಂದು ಖಾಸಗಿ ಶಾಲಾ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ಶಿಕ್ಷಣ ತಜ್ಞ ಗಣೇಶ್‌ ಭಟ್‌ ಮತ್ತಿತರರು, ರಾಜ್ಯ ಪಠ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಸರ್ಕಾರ 2025-26ನೇ ಸಾಲಿನಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಇದರಿಂದ ಫಲಿತಾಂಶ ಸುಧಾರಣೆಗೆ ಗ್ರೇಸ್‌ ಅಂಕ ಪದ್ಧತಿ ಬೇಕಿಲ್ಲ, ಮೂರು ವರ್ಷದಿಂದ ಕುಸಿಯುತ್ತಿರುವ ಫಲಿತಾಂಶ ತಾನಾಗಿಯೇ ಹೆಚ್ಚುತ್ತದೆ ಎಂದರು.

ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ 10ನೇ ತರಗತಿ ಉತ್ತೀರ್ಣಕ್ಕೆ ವಿಷಯವಾರು 33 ಅಂಕ ಪಡೆಯಬೇಕು. ಇಷ್ಟೂ ಅಂಕಗಳು ಲಿಖಿತ ಪರೀಕ್ಷೆಯಿಂದಲೇ ಬರಬೇಕಿಲ್ಲ. ಆಂತರಿಕ ಮೌಲ್ಯಮಾಪನದಲ್ಲಿ (ಇಂಟರ್ನಲ್‌ ಅಸೆಸ್‌ಮೆಂಟ್‌) 20ಕ್ಕೆ 20 ಅಂಕ ಪಡೆದರೆ ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದರೂ ಸಾಕು. ಆದರೆ, ರಾಜ್ಯಪಠ್ಯಕ್ರಮದಲ್ಲಿ ಶೇ.35 ಅಂಕವನ್ನು ಲಿಖಿತ ಪರೀಕ್ಷೆಯಲ್ಲೇ ಗಳಿಸಬೇಕು. ಉದಾಹರಣೆಗೆ ಗಣಿತದಲ್ಲಿ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ 28(ಶೇ.35) ಅಂಕ ಪಡೆಯಲೇ ಬೇಕು. ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ 20 ಅಂಕ ಪಡೆದರೂ ಅದನ್ನು ಪರಿಗಣಿಸುವುದಿಲ್ಲ. ಇದರಿಂದ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯುವಾಗ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಈ ಅನ್ಯಾಯ ತಪ್ಪಿಸಲು ತೇರ್ಗಡೆ ಅಂಕಗಳನ್ನು 33ಕ್ಕೆ ಇಳಿಸುವ ಜೊತೆಗೆ 1ನೇ ತರಗತಿಯಿಂದಲೇ ನಿರಂತರವಾಗಿ ಮಕ್ಕಳ ಕಲಿಕಾ ಮಟ್ಟ ಅಳೆಯುವ ಫಾರ್ಮೇಟಿವ್‌ ಮೌಲ್ಯಮಾಪನ ಜಾರಿಗೊಳಿಸಬೇಕು. ಆರ್‌ಟಿಇ ಕಾಯ್ದೆ ತಿದ್ದುಪಡಿ 2019ರ ಸೆಕ್ಷನ್‌ 16ರ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಗಣಿತ ಮತ್ತು ವಿಜ್ಞಾನದಲ್ಲಿ ಎರಡು ಮಟ್ಟದ (ಬೇಸಿಕ್‌/ಸ್ಟ್ಯಾಂಡರ್ಡ್‌) ಪರೀಕ್ಷಾ ಆಯ್ಕೆಗಳನ್ನು ಪರಿಚಯಿಸಬೇಕು. ಉತ್ತಮವಾಗಿ ಓದುವ ವಿದ್ಯಾರ್ಥಿಗೆ ಕಠಿಣವಾದ ಪ್ರಶ್ನೆ ಪತ್ರಿಕೆ, ಓದಿನಲ್ಲಿ ಹಿಂದಿರುವವರಿಗೆ ಸಾಧಾರಣ ಅಥವಾ ಸುಲಭ ಪ್ರಶ್ನೆ ಪತ್ರಿಕೆ ನೀಡುವ ಪದ್ಧತಿಯನ್ನು ಪರಿಚಯಿಸಬೇಕೆಂದು ಆಗ್ರಹಿಸಿದರು.

Share this article