ರಾಜ್ಯದಲ್ಲಿ ನೋಂದಣಿ ಕಾರ್ಯ ಮತ್ತೆ ಆರಂಭ - ಉಪ ನೋಂದಣಾಧಿಕಾರಿಗಳ ಸಂಘದ ಪ್ರತಿಭಟನೆ ವಾಪಸ್

Published : Oct 24, 2024, 10:24 AM IST
soil mining

ಸಾರಾಂಶ

ಉಪ ನೋಂದಣಾಧಿಕಾರಿಗಳ ಸಂಘವು ಪ್ರತಿಭಟನೆ ಹಿಂಪಡೆದಿದ್ದು, ಇಂದು(ಗುರುವಾರದಿಂದ) ಪೂರ್ಣ ಪ್ರಮಾಣದಲ್ಲಿ ನೋಂದಣಿ ಕಾರ್ಯ ನಡೆಸುವುದಾಗಿ ತಿಳಿಸಿದೆ.

ಬೆಂಗಳೂರು : ರಾಜ್ಯದಲ್ಲಿ ನಕಲಿ ದಸ್ತಾವೇಜು ನೋಂದಣಿಯಾದರೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗೆ ಜೈಲು ಶಿಕ್ಷೆ ವಿಧಿಸುವ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯ್ದೆ- 2023ಯ 22-ಬಿ ನಿಯಮ ವಿರೋಧಿಸಿ ಸೋಮವಾರದಿಂದ ದಸ್ತಾವೇಜು ನೋಂದಣಿ ಸ್ಥಗಿತಗೊಳಿಸಿದ್ದ ಉಪ ನೋಂದಣಾಧಿಕಾರಿಗಳ ಸಂಘವು ಪ್ರತಿಭಟನೆ ಹಿಂಪಡೆದಿದ್ದು, ಇಂದು(ಗುರುವಾರದಿಂದ) ಪೂರ್ಣ ಪ್ರಮಾಣದಲ್ಲಿ ನೋಂದಣಿ ಕಾರ್ಯ ನಡೆಸುವುದಾಗಿ ತಿಳಿಸಿದೆ.

ಕಾಯ್ದೆ ಬಗ್ಗೆ ಉಪ ನೋಂದಣಾಧಿಕಾರಿಗಳಿಗೆ ಉಂಟಾಗಿರುವ ಗೊಂದಲ ಬಗೆಹರಿಸುವವರೆಗೆ ಹಾಗೂ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವವರೆಗೆ ಕಾಯ್ದೆ ಅನುಷ್ಠಾನ ಮಾಡುವುದಿಲ್ಲ ಎಂದು ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಾದ ಕೆ.ಎ. ದಯಾನಂದ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿಗಳು ಪ್ರತಿಭಟನೆ ಹಿಂಪಡೆದಿದ್ದು, ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ನೋಂದಣಿ ಸೇವೆ ನೀಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ನೋಂದಣಿ ಕಾಯೆಗೆ 22-ಬಿ ಹಾಗೂ 22ಸಿ ಸೇರಿಸುವ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ಆಗಿ ಅ.19ರಂದು ರಾಜ್ಯ ಸರ್ಕಾರವು ರಾಜ್ಯಪತ್ರ ಪ್ರಕಟಿಸಿತ್ತು. ಇದರಡಿ ದಸ್ತಾವೇಜು ನೋಂದಣಿಗೆ ಮೊದಲು ಎಲ್ಲಾ ದಾಖಲೆಗಳ ನೈಜತೆಯನ್ನು ಉಪ ನೋಂದಣಾಧಿಕಾರಿಗಳು ಪರಿಶೀಲಿಸಬೇಕು. ನಕಲಿ ದಸ್ತಾವೇಜು ನೋಂದಣಿ ಅಥವಾ ನಕಲಿ ದಾಖಲೆ ಬಳಸಿ ದಸ್ತಾವೇಜು ಸೃಷ್ಟಿಗೆ ಉಪ ನೋಂದಣಾಧಿಕಾರಿಗಳೂ ಹೊಣೆ. ಅವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಪ ನೋಂದಣಾಧಿಕಾರಿಗಳು ನೂತನ ಅಧಿನಿಯಮದ ಅಡಿ ಯಾವ ದಸ್ತಾವೇಜುಗಳನ್ನು ಹೇಗೆ ನೋಂದಣಿ ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಬೇಕು. ಅಲ್ಲಿಯವರೆಗೆ ನೋಂದಣಿ ಕಾರ್ಯ ನಡೆಸುವುದಿಲ್ಲ ಎಂದು ನೋಂದಣಿ ಸ್ಥಗಿತಗೊಳಿಸಿದ್ದರು. ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ಅಧ್ಯಕ್ಷತೆಯಲ್ಲಿ ಬುಧವಾರ ಐಜಿಆರ್ ಜತೆ ಸಭೆ ನಡೆಸಲಾಯಿತು.

2 ದಿನ ಶೇಕಡಾ 90ರಷ್ಟು ಶುಲ್ಕ ಸಂಗ್ರಹ ಕುಸಿತ

ಪ್ರತಿನಿತ್ಯ ರಾಜ್ಯಾದ್ಯಂತ ಎಲ್ಲಾ ರೀತಿಯ ದಸ್ತಾವೇಜು ಸೇರಿ ಸರಾಸರಿ 10 ಸಾವಿರ ನೋಂದಣಿ ನಡೆಯುತ್ತಿತ್ತು. ಇದರಿಂದ ನಿತ್ಯ 100 ಕೋಟಿ ರು. ಸರಾಸರಿ ಶುಲ್ಕ ಸರ್ಕಾರಕ್ಕೆ ಬರುತ್ತಿತ್ತು. ಆದರೆ ಅ.22 ರಂದು 465 ವಿವಾಹ ನೋಂದಣಿ, 113 ವಿಶೇಷ ವಿವಾಹ ನೋಂದಣಿ ಸೇರಿದಂತೆ 2036 ನೋಂದಣಿ ಮಾತ್ರ ಆಗಿದ್ದು, ಕೇವಲ 13.84 ಕೋಟಿ ರು. ಶುಲ್ಕ ಸಂಗ್ರಹವಾಗಿದೆ.

ಇನ್ನು ಅ.23ರಂದು ಬುಧವಾರ 1,710 ನೋಂದಣಿ ಮಾತ್ರ ಮಾಡಿದು ಕೇವಲ 5.32 ಕೋಟಿ ರು.ಗೆ ಕುಸಿದಿದೆ. ತನ್ಮೂಲಕ ಶೇ.95 ರಷ್ಟು ಆದಾಯ ಕುಸಿದಿದೆ. ಪ್ರತಿಭಟನೆಗೆ ಮೊದಲು ಆ.18 ರಂದು 103.19 ಕೋಟಿ ರು., ಅ.10 ರಂದು 101.83 ಕೋಟಿ ರು. ಹೀಗೆ ಸರಾಸರಿ 100 ಕೋಟಿ ರು. ಶುಲ್ಕ ಸಂಗ್ರಹ ದಾಖಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ