ನಿವೃತ್ತ ಕೆಎಎಸ್ ಅಧಿಕಾರಿಗೆ ಇಂದು ಸನ್ಯಾಸ ದೀಕ್ಷೆ - ವಿಶ್ವ ಒಕ್ಕಲಿಗರ ಮಠಕ್ಕೆ ಡಾ.ನಾಗರಾಜ ಉತ್ತರಾಧಿಕಾರಿ

Published : Dec 14, 2024, 08:27 AM IST
Nagaraju

ಸಾರಾಂಶ

ಡಾ.ಎಚ್.ಎಲ್. ನಾಗರಾಜ ಅವರು ಡಿ.14ರಂದು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದು, ಅವರಿಗೆ ‘ನಿಶ್ಚಲಾನಂದನಾಥ ಮಹಾಸ್ವಾಮೀಜಿ’ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಬೆಂಗಳೂರು : ತಹಸೀಲ್ದಾರ್ ಆಗಿ, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆಎಎಸ್ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದಿರುವ 49 ವರ್ಷದ ಡಾ.ಎಚ್.ಎಲ್. ನಾಗರಾಜ ಅವರು ಡಿ.14ರಂದು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದು, ಅವರಿಗೆ ‘ನಿಶ್ಚಲಾನಂದನಾಥ ಮಹಾಸ್ವಾಮೀಜಿ’ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೀಗ 81 ವರ್ಷ ಆಗಿದೆ. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಅವಿವಾಹಿತ ಡಾ.ಎಚ್.ಎಲ್.ನಾಗರಾಜ್ ಅವರನ್ನು ಉತ್ತರಾಧಿಕಾರಿಯಾಗಿ ಭಗವಂತನ ಇಚ್ಛೆಯಂತೆ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಮಠದ ಟ್ರಸ್ಟ್‌ನ ಎಲ್ಲಾ ಸದಸ್ಯರು ಸರ್ವಾನುಮಂತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಶನಿವಾರ ಮತ್ತು ಭಾನುವಾರ ಮಠದ ಆವರಣದಲ್ಲಿ ನಡೆಯುವ ಪಟ್ಟಾಧಿಕಾರ ಮಹೋತ್ಸವದಲ್ಲಿ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರು ಉಪಸ್ಥಿತರಿರುತ್ತಾರೆ. ಅವರ ಸಮ್ಮುಖದಲ್ಲಿ ನಾಗರಾಜ್ ಅವರಿಗೆ ಸನ್ಯಾಸ ದೀಕ್ಷೆ ನೀಡಿ ಪಟ್ಟಾಧಿಕಾರ ನೀಡಲಾಗುತ್ತದೆ. ನಾಥ ಪರಂಪರೆಯಂತೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಮುದಾಯ ಮತ್ತು ಸಮಾಜ ಸೇವಾ ಕಾರ್ಯಗಳನ್ನು ಅವರು ನಡೆಸಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠದ ಟ್ರಸ್ಟಿಗಳಾದ ದೊಡ್ಡಮನೆ ವೆಂಕಟೇಶ, ಆಡಿಟರ್ ನಾಗರಾಜ್, ಉಮೇಶ್ ಉಪಸ್ಥಿತರಿದ್ದರು.

ಉತ್ತರಾಧಿಕಾರಿ ನಾಗರಾಜ್ ಹಿನ್ನೆಲೆ:

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮನವರ ಪುತ್ರರಾಗಿರುವ ಎಚ್.ಎಲ್.ನಾಗರಾಜ್ ಅವರು ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮುಗಿಸಿದ್ದಾರೆ. ಪದವಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ಆದಿಚುಂಚನಗಿರಿ ಮಠದ ಹಾಸ್ಟೇಲ್‌ನಲ್ಲಿ ಉಳಿದುಕೊಂಡಿದ್ದರು. ಈ ಅವಧಿಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಟ್ರಸ್ಟಿ ಉಮೇಶ್ ಹೇಳಿದರು. 

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌