ರೈತರಿಗೆ ₹2500 ಬರ ಪರಿಹಾರ ಮಂಜೂರು - 226 ಬರಪೀಡಿತ ತಾಲೂಕಿನ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಂದಾಯ

Published : Oct 30, 2026, 10:42 AM IST
drought

ಸಾರಾಂಶ

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ಬೆಳೆ ನಷ್ಟಕ್ಕೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2500 ರು. ವರೆಗೆ ಪರಿಹಾರ ದೊರೆಯಲಿದೆ.

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ಬೆಳೆ ನಷ್ಟಕ್ಕೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 2500 ರು. ವರೆಗೆ ಪರಿಹಾರ ದೊರೆಯಲಿದೆ.

ಈಗಾಗಲೇ ಸರ್ಕಾರ ಘೋಷಿಸಿರುವ 226 ಬರ ಪೀಡಿತ ತಾಲ್ಲೂಕುಗಳಲ್ಲಿ ಶೇ.33ಕ್ಕಿಂತ ಹೆಚ್ಚು ಬೆಳೆಹಾನಿ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಬೆಳೆಹಾನಿ ಇನ್‌ಪುಟ್ ಸಬ್ಸಿಡಿ (ಪರಿಹಾರ) ಬಿಡುಗಡೆ ಮಾಡಲು ಕಂದಾಯ ಇಲಾಖೆ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ. ಬರಪೀಡಿತ ತಾಲ್ಲೂಕುಗಳ ರೈತರಿಗೆ ಮೊದಲ ಹಂತದಲ್ಲಿ ಗರಿಷ್ಠ 2,500 ರು. ವರೆಗೆ ತುರ್ತು ಪರಿಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್‌ ಅನುದಾನ ಬಿಡುಗಡೆ ಆದ ಬಳಿಕ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಇನ್ನು, ಪ್ರಸ್ತುತ ಮಂಜೂರು ಮಾಡಿರುವ ಬೆಳೆ ಪರಿಹಾರ ನೀಡಲು 17 ಷರತ್ತುಗಳನ್ನು ವಿಧಿಸಲಾಗಿದೆ. ಈ ಎಲ್ಲಾ ಷರತ್ತುಗಳನ್ನು ಅನುಸರಿಸಿ ಅರ್ಹ ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಕ್‌ ಖಾತೆಗೆ ಜಮೆ ಮಾಡಲು ಸೂಚಿಸಲಾಗಿದೆ.

ಷರತ್ತುಗಳೇನು? 

ರೈತರು ಪರಿಹಾರಕ್ಕಾಗಿ ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಕಂದಾಯ ಇಲಾಖೆಯ ‘ಪರಿಹಾರ’ ತಂತ್ರಾಂಶ, ‘ಫ್ರೂಟ್ಸ್‌’ (FRUITS) ಪೋರ್ಟಲ್ ಹಾಗೂ ಮುಂಗಾರು ಬೆಳೆ ಸಮೀಕ್ಷೆಯ ಅಧಿಕೃತ ದತ್ತಾಂಶದ ಆಧಾರದ ಮೇಲೆ ನೇರವಾಗಿ ಅರ್ಹರನ್ನು ಗುರುತಿಸಲಾಗುತ್ತದೆ. ಪರಿಹಾರ ನೀಡುವಾಗ ತಾಲೂಕಿನಲ್ಲಿ ಅತಿ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಂದ ಆರಂಭಿಸಿ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಏರಿಕೆ ಕ್ರಮದಲ್ಲಿ ಹಣ ಪಾವತಿಸಲಾಗುತ್ತದೆ. ಬೆಳೆಗಳಲ್ಲೂ ಮೊದಲು ಮಳೆಯಾಶ್ರಿತ, ನಂತರ ನೀರಾವರಿ ಹಾಗೂ ಕೊನೆಯದಾಗಿ ಬಹುವಾರ್ಷಿಕ ಬೆಳೆಗೆ ಆದ್ಯತೆ ನೀಡಲಾಗುತ್ತದೆ. ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರಬೇಕು. ಡಿಬಿಟಿ ಮೂಲಕವೇ ಹಣ ವರ್ಗಾವಣೆಯಾಗಲಿದೆ.

ಗರಿಷ್ಠ ಮಿತಿ 2 ಹೆಕ್ಟೇರ್: ಒಬ್ಬ ರೈತ ಒಂದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನು ಹೊಂದಿದ್ದರೂ, ಆತನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಪರಿಹಾರ ಸೀಮಿತವಾಗಿರುತ್ತದೆ.

7,142 ಕೋಟಿ ರು. ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ

ರಾಜ್ಯದ 226 ಬರಪೀಡಿತ ತಾಲ್ಲೂಕುಗಳಲ್ಲಿ ಉಂಟಾಗಿರುವ ಒಟ್ಟು 47.09 ಲಕ್ಷ ಹೆಕ್ಟೇರ್‌ ಬೆಳೆ ಹಾನಿಗೆ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನುಸಾರ ರೈತರಿಗೆ ಬೆಳೆ ಪರಿಹಾರ ನೀಡಲು 7,142.64 ಕೋಟಿ ರು. ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಜಂಟಿ ಖಾತೆದಾರರಿಗೆ ನಿಯಮ: (ಇಂಗ್ಲಿಷ್‌ ಇದೆ)

ಜಂಟಿ ಖಾತೆದಾರರಾಗಿದ್ದಲ್ಲಿ, FRUITS ತಂತ್ರಾಂಶದಲ್ಲಿ ನೋಂದಾಯಿಸಲಾದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರವನ್ನು ಹಂಚಿಕೆ ಮಾಡಲಾಗುತ್ತದೆ. ಒಂದೇ ಜಮೀನಿಗೆ ಯಾವುದೇ ಕಾರಣಕ್ಕೂ ಎರಡೆರಡು ಬಾರಿ (ಡಬಲ್ ಪೇಮೆಂಟ್) ಪರಿಹಾರ ಪಾವತಿಯಾಗುವುದಿಲ್ಲ. ಪಹಣಿ ಮತ್ತು ಬೆಳೆ ಸಮೀಕ್ಷೆಯ ವಿಸ್ತೀರ್ಣದಲ್ಲಿ ವ್ಯತ್ಯಾಸವಿದ್ದರೆ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ 3 ದಿನಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸರಿಪಡಿಸಬೇಕು. ಆಧಾರ್ ಮತ್ತು ಪಹಣಿಯಲ್ಲಿ ಹೆಸರು ಶೇ.70ಕ್ಕಿಂತ ಹೆಚ್ಚು ಹೊಂದಾಣಿಕೆಯಾಗದಿದ್ದಲ್ಲಿ ತಹಶೀಲ್ದಾರರು ಸ್ಥಳ ಪರಿಶೀಲಿಸಿ 5 ದಿನಗಳಲ್ಲಿ ಬಯೋಮೆಟ್ರಿಕ್ ಮೂಲಕ ಅನುಮೋದನೆ ನೀಡಬೇಕು. ಜಿಲ್ಲಾಧಿಕಾರಿಗಳು ಪರಿಹಾರ ದತ್ತಾಂಶವನ್ನು ಡಿಜಿಟಲ್ ಸಹಿ ಮೂಲಕ ಅಂತಿಮಗೊಳಿಸಿದ ನಂತರವೇ ಖಜಾನೆ-2 ಮೂಲಕ ರೈತರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಸಂಪೂರ್ಣ ಪಟ್ಟಿಯನ್ನು ‘ಪರಿಹಾರ’ ತಂತ್ರಾಂಶದ ಪೋರ್ಟಲ್‌ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುತ್ತದೆ.

ಇನ್ನು, ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನುಗಳು, ಸರ್ಕಾರಿ ಜಮೀನುಗಳು, ನೀರಾವರಿ ಯೋಜನೆಗಳಿಗಾಗಿ ಈಗಾಗಲೇ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಡೆದಿರುವ ಜಮೀನುಗಳು (ಪಹಣಿಯಲ್ಲಿ ಹೆಸರು ಬದಲಾಗದಿದ್ದರೂ ಪರಿಹಾರ ಸಿಗುವುದಿಲ್ಲ) ಬೆಳೆ ಪರಿಹಾರಕ್ಕೆ ಅರ್ಹವಲ್ಲ ಎಂದು ತಿಳಿಸಲಾಗಿದೆ.

ಬರ ಪೀಡಿತ ತಾಲ್ಲೂಕುಗಳೆಂದು ಘೊಷಿಸಿರುವ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಯ ಜಂಟಿ ತಂಡಗಳು ಬೆಳೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯನ್ನು ತಯಾರಿಸಿದ್ದಾರೆ.

ಅದರಂತೆ 43.93 ಲಕ್ಷ ಹೆಕ್ಟೇರ್‌ ಕೃಷಿ ಹಾಗೂ 3.16 ಲಕ್ಷ ಹೆಕ್ಟೇರ್‌ ತೋಟಗಾರಿಕೆ ಸೇರಿದಂತೆ ಒಟ್ಟು 47.09 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಇದರ ಪೈಕಿ 36.42 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ, 9.43 ಲಕ್ಷ ಹೆಕ್ಟೇರ್‌ ನೀರಾವರಿ ಹಾಗೂ 1.24 ಲಕ್ಷ ಹೆಕ್ಟೇರ್‌ ಬಹುವಾರ್ಷಿಕ ಬೆಳೆಹಾನಿಯಾಗಿದೆ. ತಾಲ್ಲೂಕುವಾರು ಬೆಳೆ ಹಾನಿಯ ಇನ್ಪುಟ್‌ ಸಬ್ಸಿಡಿಗೆ ಎನ್‌ಡಿಆರ್‌ಎಫ್‌ ಅಡಿಯಲ್ಲಿ 7,142.64 ಕೋಟಿ ರು.ಗಳ ಆರ್ಥಿಕ ನೆರವು ನಿಡುವಂತೆ ಕೋರಿ ರಾಜ್ಯ ಸರ್ಕಾರದಿಂದ ಸೆಪ್ಟಂಬರ್‌ 10 ಮತ್ತು ಅ.1ರ ಪತ್ರಗಳಲ್ಲಿ ಕೇಂದ್ರ ಕೃಷಿ ಮಂತ್ರಾಲಯಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೈಸೂರು ಭಾಗದ ಶಾಸಕರ ಜತೆ ಸಿದ್ದು, ಪುತ್ರ ಮೀಟಿಂಗ್‌
ನ.1ರಿಂದ ವರ್ಗಾವಣೆಗೆ ಬ್ರೇಕ್‌ - ಚೀಟಿ ಹಿಡಿದುಕೊಂಡು ಯಾರೂ ಬರಬೇಡಿ : ಡಿಕೆಶಿ