ಬೆಂಗಳೂರು : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ ತೆರಿಗೆಗೆ ಒಳಪಡದ ಎಲ್ಲಾ ವಸತಿ, ವಸತಿಯೇತರ, ವಾಣಿಜ್ಯ, ವಾಣಿಜ್ಯೇತರ ಕಟ್ಟಡ, ನಿವೇಶನ, ರೆಸಾರ್ಟ್, ಹೋಮ್ ಸ್ಟೇ ಸೇರಿ ಇತರೆ ಆಸ್ತಿಗಳನ್ನು ಗುರುತಿಸಿ ನಿಯಮಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಪಂಗಳ ತೆರಿಗೆ, ದರ ಮತ್ತು ಫೀಸುಗಳು) ನಿಯಮ 2025ಅನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಹಾಲಿ ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ, ಶುಲ್ಕಗಳ ಮೂಲಕ ಸುಮಾರು ₹1,500 ಕೋಟಿಗಳಷ್ಟು ಆದಾಯ ಸಂಗ್ರಹವಾಗುತ್ತಿತ್ತು. ಇದೀಗ ಹೊಸ ನಿಯಮಗಳ ಅನುಷ್ಠಾನದಿಂದ ಆದಾಯ ಅಂದಾಜು ₹4,500 ಕೋಟಿ ತಲುಪುವ ನಿರೀಕ್ಷೆ ಹೊಂದಲಾಗಿದೆ.
ಕರಡು ನಿಯಮಗಳಿಗೆ ಬಂದ ಆಕ್ಷೇಪಣೆ ಪರಿಶೀಲಿಸಿ ಅಂತಿಮ ನಿಯಮಗಳನ್ನು ಪ್ರಕಟಿಸಲಾಗಿದೆ. ಪ್ರಮುಖವಾಗಿ ಗ್ರಾಪಂ ವ್ಯಾಪ್ತಿಯ ಗ್ರಾಮದ ಗಡಿ ರೇಖೆಯೊಳಗಿನ ಜನವಸತಿ ಪ್ರದೇಶದಲ್ಲಿನ ನಿವೇಶನ ಅಥವಾ ಕಟ್ಟಡಗಳನ್ನು ಗ್ರಾಮ ಠಾಣಾ ಎಂದು ವರ್ಗೀಕರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಇದುವರೆಗೆ ತೆರಿಗೆಗೆ ಒಳಪಟ್ಟಿರದ ಎಲ್ಲಾ ಆಸ್ತಿಗಳನ್ನು ಪ್ರತೀ ವರ್ಷ ಮಾರ್ಚ್ ತಿಂಗಳಲ್ಲಿ ಸಮೀಕ್ಷೆ ನಡೆಸಿ ವಿವರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿ ತಂತ್ರಾಂಶದ ಮೂಲಕ ತೆರಿಗೆ ವ್ಯಾಪ್ತಿಗೆ ಮುಂದಿನ ಏ.1ರಿಂದ ಒಳಪಡಿಸಲು ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ 2025ರ ಜಾರಿಯ ಪೂರ್ವದ ನಿವೇಶನಗಳಿಗೆ ಸಂಬಂಧಿಸಿ ಕ್ರಯ ಪತ್ರ ಹಾಗೂ ಕಟ್ಟಡಗಳಿಗೆ ಸಂಬಂಧಿಸಿದ ಎಸ್ಕಾಂನಿಂದ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಪಡೆದ ದಿನಾಂಕವನ್ನು ಪೂರ್ಣಗೊಂಡ ದಿನಾಂಕವೆಂದು ಪರಿಗಣಿಸಿ ಅಥವಾ 2016ರ ಫೆಬ್ರವರಿ ಯಿಂದ ಇವುಗಳಲ್ಲಿ ಯಾವುದು ನಂತರವೋ ಆ ದಿನಾಂಕದಿಂದ ಕಟ್ಟಡಗಳ ಬಾಕಿ ತೆರಿಗೆಯನ್ನು ತಂತ್ರಾಂಶದಲ್ಲಿ ತೆರಿಗೆ ಲೆಕ್ಕಾಚಾರ ಮಾಡಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು.
ಸಮೀಕ್ಷೆ ಪ್ರಕಾರ ಹೊಸದಾಗಿ ತೆರಿಗೆ ವ್ಯಾಪ್ತಿಗೆ ಒಳಪಡುವ ಆಸ್ತಿಗಳ ವಿವರಗಳನ್ನು ಗ್ರಾಪಂ ತನ್ನ ಸೂಚನಾ ಫಲಕ, ತಾಪಂ ಸೂಚನಾ ಫಲಕ, ತಾಲೂಕು ಕಚೇರಿ, ಗ್ರಾಪಂ ಗ್ರಂಥಾಲಯ ಹಾಗೂ ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿ 7ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆ ಪಡೆಯಬೇಕು. ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಗ್ರಾಪಂ ಅಧ್ಯಕ್ಷರ ಅನುಮೋದನೆಯೊಂದಿಗೆ ತೆರಿಗೆಗೆ ಒಳಪಡಿಸಬೇಕು. ತೆರಿಗೆಗೆ ಒಳಪಡಿಸಿದ ಆಸ್ತಿಗಳನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು. ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ತಂತ್ರಾಂಶದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ತೆರಿಗೆಗಳನ್ನು ಗರಿಷ್ಠ ಪೂರ್ಣವಾಗಿ ಅಥವಾ ಕನಿಷ್ಠ ಎರಡು ಕಂತಿನಲ್ಲಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ಕೆಲ ಆಸ್ತಿಗಳಿಗೆ ತೆರಿಗೆ ವಿನಾಯಿತಿ:
ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಾರ್ಥವಾಗಿ ನಡೆಸಲಾಗುವ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಸೇರಿ ಇನ್ನಿತರ ಸಂಸ್ಥೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿದೆ. ಜತೆಗೆ ಸೈನಿಕರು, ಮಾಜಿ ಸೈನಿಕರು, ಮೃತ ಸೈನಿಕರ ಪತ್ನಿಯರು, ಕುಷ್ಠ ರೋಗಿಗಳು, ಎಚ್‌ಐವಿ ರೋಗಿಗಳು, ವಿಶೇಷ ಚೇತನರು, ಸ್ವ ಸಹಾಯ ಗುಂಪುಗಳಿಗೆ ಸೇರಿದ ಆಸ್ತಿಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಲು ನಿಯಮದಲ್ಲಿ ತಿಳಿಸಲಾಗಿದೆ. ಜತೆಗೆ, ಎಲ್ಲ ಆಸ್ತಿಗಳಿಗೂ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ತೆರಿಗೆ ಪಾವತಿಸಿದರೆ ಶೇ. 5ರಷ್ಟು ತೆರಿಗೆ ವಿನಾಯಿತಿ ನೀಡುವ ಕುರಿತು ಉಲ್ಲೇಖಿಸಲಾಗಿದೆ.
ತೆರಿಗೆ ಕಟ್ಟದಿದ್ದರೆ ಚರಾಸ್ತಿ-ಸ್ಥಿರಾಸ್ತಿ ಜಪ್ತಿ:
ನಿಗದಿತ ತೆರಿಗೆ ಅಥವಾ ಶುಲ್ಕ ಪಾವತಿಸಲು ವಿಫಲರಾಗುವವರಿಗೆ ಮೊದಲಿಗೆ ತಗಾದೆ ನೋಟಿಸ್ ನೀಡಬೇಕು. ಅದಾದ ನಂತರ ತಗಾದೆ ಆದೇಶ ಜಾರಿ ಮಾಡಿ, ಅದರಿಂದಲೂ ತೆರಿಗೆ ಅಥವಾ ಶುಲ್ಕ ಪಾವತಿಸದಿದ್ದರೆ ಆಸ್ತಿ ಮಾಲೀಕರ ಚರಾಸ್ತಿ ಅಥವಾ ಸ್ಥಿರಾಸ್ತಿ ಜಪ್ತಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಚರಾಸ್ತಿ ಅಥವಾ ಸ್ಥಿರಾಸ್ತಿ ಜಪ್ತಿ ನಂತರದ 7 ದಿನಗಳಲ್ಲಿ ತೆರಿಗೆ ಅಥವಾ ಶುಲ್ಕ ಪಾವತಿಸದಿದ್ದರೆ ಅವುಗಳನ್ನು ಹರಾಜು ಅಥವಾ ಮಾರಾಟ ಮಾಡಿ ತೆರಿಗೆ, ಶುಲ್ಕ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ. ಇನ್ನು, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಮೇಲ್ಮನವಿ ಪ್ರಾಧಿಕಾರವನ್ನಾಗಿ ಮಾಡಲಾಗಿದ್ದು, ಗ್ರಾಪಂಗಳ ಕ್ರಮದ ವಿರುದ್ಧ ಅಸಮಾಧಾನವಿದ್ದರೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.