ತೈಲ ಕೊರತೆ ವದಂತಿ: ಖರೀದಿಗೆ ಮುಗಿಬಿದ್ದ ಜನ-ಬಂಕ್‌ಗಳಲ್ಲಿ ಭಾರೀ ರಷ್‌

Published : Mar 25, 2026, 04:28 AM IST
petrol diesel

ಸಾರಾಂಶ

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌ ಅಭಾವ ಉಂಟಾಗಬಹುದು, ದರ ಏರಿಕೆಯಾಗಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಬೆನ್ನಲ್ಲೇ ಮಂಗಳವಾರ ರಾಜ್ಯದ ಕೆಲವೆಡೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಖರೀದಿಗೆ ವಾಹನ ಸವಾರರು ಮುಗಿಬಿದ್ದ ದೃಶ್ಯ ಕಂಡು ಬಂತು.

 ಬೆಂಗಳೂರು:  ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌ ಅಭಾವ ಉಂಟಾಗಬಹುದು, ದರ ಏರಿಕೆಯಾಗಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಬೆನ್ನಲ್ಲೇ ಮಂಗಳವಾರ ರಾಜ್ಯದ ಕೆಲವೆಡೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಖರೀದಿಗೆ ವಾಹನ ಸವಾರರು ಮುಗಿಬಿದ್ದ ದೃಶ್ಯ ಕಂಡು ಬಂತು. ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ರಾಯಚೂರು ಸೇರಿ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಈ ವಂದತಿ ನಂಬಿದ ಜನ ಬಂಕ್‌ಗಳತ್ತ ಧಾವಿಸಿ ಬಂದು, ಪೆಟ್ರೋಲ್‌ಗಾಗಿ ಮುಗಿಬಿದ್ದರು. ಬೆಳಗಾವಿ ಜಿಲ್ಲೆಯಲ್ಲಂತೂ ಪೆಟ್ರೋಲ್‌ ಬಂಕ್‌ಗಳ ಮುಂದೆ ಇಡೀ ದಿನ ವಾಹನ ಸವಾರರ ದಂಡೇ ಕಂಡು ಬಂತು. ಜಿಲ್ಲಾಧಿಕಾರಿ ಮನವಿಗೂ ವಾಹನ ಸವಾರರ ‘ಕ್ಯೂ’ ಕಡಿಮೆಯಾಗಲಿಲ್ಲ.

ಬೆಳಗಾವಿ ನಗರದ ರಾಮದೇವ ಹೋಟೆಲ್‌ ಬಳಿಯ ಸೇಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಗಾಗಿ ಯುವಕರ ನಡುವೆ ಫೈಟಿಂಗ್ ಕೂಡ ನಡೆಯಿತು. ಪೆಟ್ರೋಲ್‌ ಹಾಕಿಸಿಕೊಳ್ಳುವಾಗ ಸರದಿ ಸಾಲು ಮುರಿದ ವಿಚಾರಕ್ಕೆ ಗಲಾಟೆ ನಡೆದಿದ್ದು, ಹೆಲ್ಮೆಟ್‌ನಲ್ಲಿ ಹೊಡೆದಾಡಿಕೊಂಡರು. ಪೆಟ್ರೋಲ್ ಗಾಗಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರು ಗಲಾಟೆ ಬಿಡಿಸಿದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಲ್ಲಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಆಝಂ ನಗರ, ರಾಮದೇವ ವೃತ್ತ ಸೇರಿ ಬೆಳಗಾವಿಯ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಫುಲ್ ರಶ್‌ ಕಂಡು ಬಂತು. ಕಾರು, ಬೈಕ್ ಗಳಿಗೆ ವಾಹನ ಸವಾರರು ಟ್ಯಾಂಕ್ ಫುಲ್ ಮಾಡಿಸಿಕೊಂಡು ತೆರಳುತ್ತಿದ್ದರು. ಬೆಳಗಾವಿಯ ಕೊಲ್ಲಾಪುರ ‌ವೃತ್ತದಲ್ಲಿರುವ ಇಂಡಿಯನ್ ಆಯಿಲ್ ಬಂಕ್ ಮುಂದೆ ‘ಪೆಟ್ರೊಲ್ ನೋ ಸ್ಟಾಕ್’ ಎಂದು ಬೋರ್ಡ್ ಹಾಕಿದರೂ, ಸುಡು ಬಿಸಿಲಲ್ಲಿ ವಾಹನ ಸವಾರರು ಸರದಿ ಸಾಲಿನಲ್ಲಿ ‌ನಿಂತಿದ್ದರು. ‘ಈಗ ಇಲ್ಲಿ ಪೆಟ್ರೋಲ್‌ ಸ್ಟಾಕ್‌ ಇಲ್ಲ, ಬರುತ್ತೆ, ಇಂಧನ ಕೊರತೆ ಇಲ್ಲ, ಇಂಧನ ಸಾಕಷ್ಟಿದೆ’ ಎಂದು ಬಂಕ್ ಸಿಬ್ಬಂದಿ ಹೇಳಿದರೂ, ವಾಹನ ಸವಾರರು ಬಂಕ್‌ನಿಂದ ಕದಲಲಿಲ್ಲ. ಜನರನ್ನು ಮನವೊಲಿಸುವಲ್ಲಿ ಸಿಬ್ಬಂದಿ ಹೈರಾಣಾದರು.

ಈ ಮಧ್ಯೆ, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಅವರು ಮಧ್ಯಾಹ್ನ 2.3ಕ್ಕೆ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಬೆಳಗಾವಿ ಜಿಲ್ಲೆಗೆ ಎರಡು ತಿಂಗಳಿಗೆ ಅಗತ್ಯ ಇರುವಷ್ಟು ತೈಲ ಸಂಗ್ರಹ ನಮ್ಮಲಿದೆ. ವದಂತಿಗೆ ಬೆಳಗಾವಿ ‌ಜಿಲ್ಲೆಯ ಜನರು ಯಾರೂ ಕಿವಿಗೊಡಬಾರದರು ಎಂದು ಸ್ಪಷ್ಟನೆ ನೀಡಿದರೂ, ಬಂಕ್‌ಗಳ ಮುಂದೆ ‘ಕ್ಯೂ’ ಕಡಿಮೆ ಆಗಲಿಲ್ಲ.

ದೊಡ್ಡ, ದೊಡ್ಡ ಕ್ಯಾನ್ ಗಳಲ್ಲಿ ತುಂಬಿಸಿಕೊಂಡರು:

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ನಿಪ್ಪಾಣಿ ರಸ್ತೆ ಮತ್ತು ಬಸವೇಶ್ವರ ವೃತ್ತದ ಬಳಿ ಇರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಗಾಗಿ ವಾಹನ ಸವಾರರು ಮುಗಿಬಿದ್ದರು. ಟ್ರಾಕ್ಟರ್ ಮೂಲಕ ದೊಡ್ಡ, ದೊಡ್ಡ ಕ್ಯಾನ್ ತಂದು, ಪೆಟ್ರೋಲ್‌, ಡೀಸೆಲ್‌ ಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಚಿಕ್ಕೋಡಿ, ಚಿಕ್ಕೋಡಿ ವಿಭಾಗದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಪುಲ್ ರಶ್ ಕಂಡು ಬಂತು. ಟ್ರಾಕ್ಟರ್ ಮೂಲಕ ದೊಡ್ಡ, ದೊಡ್ಡ ಕ್ಯಾನ್ ತಂದು ಪೆಟ್ರೋಲ್‌, ಡೀಸೆಲ್‌ ತುಂಬಿಸಿಕೊಂಡು ಜನ ಹೋಗುತ್ತಿದ್ದರು. ‘ಪ್ಯಾನಿಕ್ ಆಗಬೇಡಿ’ ಎಂಬ ಬಂಕ್ ಸಿಬ್ಬಂದಿ ಮನವಿಗೂ ವಾಹನ ಸವಾರರು ಕಿವಿಗೊಡಲಿಲ್ಲ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ‌ಪೆಟ್ರೊಲ್ ಹಾಕಿಸಿಕೊಳ್ಳಲು ಸರದಿ ಸಾಲಿನಲ್ಲಿ ಬರುವಂತೆ ಹೇಳಿದ್ದಕ್ಕೆ ಪೆಟ್ರೊಲ್ ಬಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ವಾಗ್ವಾದ ನಡೆಯಿತು.

ಗದಗ ಜಿಲ್ಲೆಯ ನರಗುಂದದಲ್ಲಿ ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ವಾಹನಗಳ ಚಾಲಕರು ಪೆಟ್ರೋಲ್‌ ಬಂಕ್‌ ಮುಂದೆ ಇಂಧನ ತುಂಬಿಸಲು ಉದ್ದನೆಯ ಸಾಲಿನಲ್ಲಿ ನಿಂತಿದ್ದರು. ತಾಲೂಕಿನಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಸ್ಪಷ್ಟನೆ ನೀಡಿದರಾದರೂ, ವಾಹನ ಸವಾರರ ‘ಕ್ಯೂ’ ಕಡಿಮೆಯಾಗಲಿಲ್ಲ.

ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿಯೂ ಬೈಕ್, ಕಾರು ಮತ್ತು ‌ಟಿಪ್ಪರ್ ತೆಗೆದುಕೊಂಡು ಬಂದ ವಾಹನ ಸವಾರರು, ಪೆಟ್ರೋಲ್ ಬಂಕ್ ಗಳ ಮುಂದೆ ಸಾಲಗಟ್ಟಿ ನಿಂತಿದ್ದರು. ವಾಹನಗಳ ಜೊತೆಗೆ ಖಾಲಿ ಬಾಟಲ್ ಮತ್ತು ಕ್ಯಾನ್ ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದು, ಈ ವೇಳೆ ಮಾತಿನ ಚಕಮಕಿ ಕೂಡ ಕಂಡು ಬಂತು. ಕೆಲಕಾಲ ಪೆಟ್ರೋಲ್ ಬಂಕ್ ಬಳಿ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಯಿತು.

ಧಾರವಾಡದಲ್ಲಿ ಭಾರತ ಪೆಟ್ರೋಲಿಯಂ, ಹಿಂದುಸ್ತಾನ, ರಿಲಯನ್ಸ್‌ ಸೇರಿದಂತೆ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಜನರು ಪೆಟ್ರೋಲ್ ಹಾಕಿಸಿಕೊಂಡರು. ಸಾಧನಕೇರಿಯ ಎಚ್‌ಪಿ ಬಂಕ್‌ನಲ್ಲಿ ಪೆಟ್ರೋಲ್‌ಗಾಗಿ ಬೈಕ್‌ ಸವಾರರು ಅರ್ಧ ಕಿ.ಮೀ. ದೂರ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿಯೂ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಸವಾರರ ಸರದಿ ಸಾಲು ಕಂಡು ಬಂತು. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹೆದ್ದಾರಿ ಬದಿಯ ಕಾಮಾಕ್ಷಿ ಪೆಟ್ರೋಲ್‌ ಬಂಕ್‌ ಸೇರಿದಂತೆ ಹಲವೆಡೆ ವಾಹನ ಸವಾರರ ‘ಕ್ಯೂ’ ಕಂಡು ಬಂತು. ಕೊಪ್ಪಳದ ಕೆಲವೆಡೆ ಸರದಿ ಸಾಲು ನಿಯಂತ್ರಿಸಲು ಪೆಟ್ರೋಲ್‌ ಬಂಕ್‌ಗಳಿಗೆ ಪೊಲೀಸರು ಆಗಮಿಸಬೇಕಾಯಿತು.

ಬುಧವಾರ ಊರಿಗೆ ಹೋಗುವುದಿದೆ. ಜತೆಗೆ ಬೆಲೆ ಏರಿಕೆ ಆಗಲಿದೆ ಎನ್ನಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇವತ್ತೇ ಕಾರಿನ ಡೀಸೆಲ್‌ ಟ್ಯಾಂಕ್‌ ಪೂರ್ಣಗೊಳಿಸುತ್ತಿದ್ದೇನೆ.

- ಸಚಿನ್‌, ಸಾಧನಕೇರಿ ನಿವಾಸಿ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮಾ.27, 28ಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಬಜೆಟ್ ಮಂಡನೆ
ಬೂತ್ ಮಟ್ಟದಿಂದ ಕಾಂಗ್ರೆಸ್ ಬಲಪಡಿಸಲು ಒತ್ತು