ಪಹಲ್ಗಾಂ ಘಟನೆಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿದ ವಾಯು ದಾಳಿಯಿಂದ ಯುದ್ಧ ಉನ್ಮಾದ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕಾರವಾರ : ಪಹಲ್ಗಾಂ ಘಟನೆಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿದ ವಾಯು ದಾಳಿಯಿಂದ ಯುದ್ಧ ಉನ್ಮಾದ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನದ ಹಡಗುಗಳಿಗೆ ಭಾರತದ ಯಾವುದೇ ಬಂದರುಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಒಂದು ವೇಳೆ ಪಾಕಿಸ್ತಾನದ ಸಿಬ್ಬಂದಿ ಸಿಂಗಪುರ, ಮಲೇಷ್ಯಾ ಅಥವಾ ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರು ಹಡಗಿಂದ ಕೆಳಕ್ಕಿಳಿಯುವಂತಿಲ್ಲ. ಹಡಗಿನಲ್ಲೇ ಇರಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಾಣಿಜ್ಯ ಬಂದರಿನ ಭದ್ರತಾ ಅಧಿಕಾರಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೈಗಾ ಅಣುಸ್ಥಾವರ, ಐಎನ್ಎಸ್ ಕದಂಬ ನೌಕಾನೆಲೆಗೆ ಭದ್ರತೆ ಬಿಗಿಗೊಳಿಸಲಾಗಿದೆ. ಈ ಸಂಸ್ಥೆಗಳಿಗೆ ಅವರದ್ದೇ ಆದ ಭದ್ರತಾ ಸಿಬ್ಬಂದಿ ಇದ್ದು, ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ. ಮೀನುಗಾರಿಕಾ ಬೋಟಿನಲ್ಲಿ ಅಪರಿಚಿತರು ನುಸುಳಿ ಬರಬಹುದು ಎಂದು ಕರಾವಳಿ ಕಾವಲು ಪಡೆ ಮೀನುಗಾರಿಕಾ ಬೋಟ್‌ನವರಿಗೆ ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ. ಪರಿಶೀಲನೆಯನ್ನೂ ನಡೆಸಿದೆ.
ಪಾಕಿಸ್ತಾನಿಯರು ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರಿಗೆ ಹಡಗಿನಿಂದ ಕೆಳಕ್ಕಿಳಿಯಲು ಅವಕಾಶ ಇಲ್ಲ. ಪಾಕ್ ಹಡಗುಗಳಂತೂ ಈಗ ಬಂದರುಗಳಿಗೆ ಪ್ರವೇಶಿಸುವಂತಿಲ್ಲ.
- ರಾಜಕುಮಾರ ಹೆಡೆ, ಬಂದರು ಅಧಿಕಾರಿ