ನನ್ನೂರಿಗೆ ಕಳಿಸಿ: ಉಗ್ರ ಕೃತ್ಯ ಕೇಸಲ್ಲಿ ಖುಲಾಸೆಗೊಂಡ ಪಾಕ್‌ ಪ್ರಜೆ ಹೈಕೋರ್ಟ್‌ ಮೊರೆ

ಸಾರಾಂಶ

  ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಿ’ ಹೀಗೆಂದು ಪಾಕಿಸ್ತಾನದ ಕರಾಚಿಯ ಉತ್ತರ ನಿಜಮಾಬಾದ್‌ನ ನಿವಾಸಿ ಮೊಹಮ್ಮದ್ ಫಹದ್‌ (37) ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾನೆ.

ವೆಂಕಟೇಶ್ ಕಲಿಪಿ

  ಬೆಂಗಳೂರು :  ''ಭಯೋತ್ಪಾದನೆ ಕೃತ್ಯ ಎಸಗಲು ಪಿತೂರಿ ನಡೆಸಿದ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಆರೋಪದಿಂದ ಖುಲಾಸೆಯಾದರೂ ತನ್ನನ್ನು ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ (ಫಾರಿನರ್ಸ್‌ ಡಿಟೆನ್ಷನ್‌ ಸೆಂಟರ್‌) ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ದಯವಿಟ್ಟು, ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಿ’

ಹೀಗೆಂದು ಪಾಕಿಸ್ತಾನದ ಕರಾಚಿಯ ಉತ್ತರ ನಿಜಮಾಬಾದ್‌ನ ನಿವಾಸಿ ಮೊಹಮ್ಮದ್ ಫಹದ್‌ (37) ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾನೆ. ಈ ಸಂಬಂಧ ರಾಜ್ಯ ಸರ್ಕಾರ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ, ಬೆಂಗಳೂರಿನ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಪ್ರತಿ ಬಂಧನ ಕೇಂದ್ರದ ಮೇಲ್ವಿಚಾರಕರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಿದ್ದಾನೆ.

ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿ ಸಂಬಂಧ ಕೋರ್ಟ್‌ ಕಚೇರಿ ಎತ್ತಿರುವ ಕೆಲ ಆಕ್ಷೇಪಣೆಗಳನ್ನು ಪರಿಹರಿಸುವಂತೆ ಅರ್ಜಿದಾರ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

18 ವರ್ಷಗಳಿಂದ ಬಂಧನ: ಪ್ರಕರಣವೊಂದರ ಸಂಬಂಧ 18 ವರ್ಷದ ಹಿಂದೆ ಫಹದ್‌ ಬೆಂಗಳೂರಿನ ಕೇಂದ್ರ ಕಾರಾಗೃಹದ ಪಾಲಾಗಿದ್ದ. ಈ ಮಧ್ಯೆ ಕಳ್ಳತನ ಹಾಗೂ ಇತರೆ ಆರೋಪಗಳ ಸಂಬಂಧ ಬೆಂಗಳೂರಿನ ಅಬ್ದುಲ್‌ ರೆಹಮಾನ್‌ ಎಂಬಾತ ಜೈಲು ಸೇರಿದ್ದ. ಇದೇ ವ್ಯಕ್ತಿಯನ್ನು ಪಾಕಿಸ್ತಾನದ ಲಷ್ಕರ್‌-ಇ-ತೊಯ್ಬಾದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ಅಕ್ರಮವಾಗಿ ಸಂಗ್ರಹಿಟ್ಟಿರುವ ಆರೋಪ ಸಂಬಂಧ 2012ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ರೆಹಮಾನ್‌ಗೆ ಜೈಲಲ್ಲಿ ಸಂಪರ್ಕಕ್ಕೆ ಬಂದಿದ್ದ ಫಹದ್‌ ಧಾರ್ಮಿಕ ಮೂಲಭೂತವಾದ ಬೋಧಿಸಿದ್ದ. ಇದರಿಂದ ಹಿಂದು ಧರ್ಮದ ಬಗ್ಗೆ ರೆಹಮಾನ್‌ ದ್ವೇಷ ಭಾವನೆ ಬೆಳೆಸಿಕೊಂಡಿದ್ದ. ಪಾಕಿಸ್ತಾನ ಮತ್ತು ಯುಎಇಯಿಂದ ಕಾರ್ಯನಿರ್ವಹಿಸುತ್ತಿರುವ ಲಷ್ಕರ್‌ ಎ-ತೊಯ್ಬಾಗೆ (ಎಲ್‌ಎಟಿ) ಈತನನ್ನು ಫಹದ್‌ ಪರಿಚಯಿಸಿದ್ದ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಜಾಮೀನು ಮೇಲೆ ಬಿಡುಗಡೆಯಾದ ನಂತರ ಅಬ್ದುಲ್‌ ರೆಹಮಾನ್‌ ಎಲ್‌ಇಟಿಗೆ ಯುವಕರನ್ನು ಸೇರಿಸಲು ಹಣ ಸಂಗ್ರಹಿಸಿ, ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಬಾಂಬ್‌ ಸ್ಫೋಟ ನಡೆಸಲು, ಹಿಂದು ಕಾರ್ಯಕರ್ತರ ಹತ್ಯೆಗೆ ಸಂಚು ರೂಪಿಸಲು ಎಲ್‌ಇಟಿ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರೆಹಮಾನ್‌ ಮತ್ತು ಫಹದ್‌ ಇಬ್ಬರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಕ್ರಿಮಿನಲ್‌ ಪಿತೂರಿ, ಭಯೋತ್ಪಾದನೆ ಕೃತ್ಯ ಎಸಗಲು ಪಿತೂರಿ ನಡೆಸಿದ ಸೇರಿ ವಿವಿಧ ಆರೋಪದಡಿ ಅಬ್ದುಲ್‌ ರೆಹಮಾನ್‌ ಹಾಗೂ ಮೊಹಮ್ಮದ್‌ ಫಹದ್‌ ಅವರನ್ನು ತಪ್ಪಿತಸ್ಥರೆಂದು ಬೆಂಗಳೂರಿನ ಎನ್‌ಐಎ ವಿಶೇಷ ಕೋರ್ಟ್‌ 2023ರ ಫೆಬ್ರವರಿಯಲ್ಲಿ ಶಿಕ್ಷೆ ವಿಧಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌ ಫಹದ್‌ನನ್ನು ಖುಲಾಸೆಗೊಳಿಸಿ 2025ರ ಸೆ.25ರಂದು ಹೈಕೋರ್ಟ್‌ ಆದೇಶಿಸಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಆದೇಶಿಸಿತ್ತು. ಆದರೆ ಗಡಿಪಾರು ಮಾಡುವ ಬದಲು ಫಹದ್‌ನನ್ನು ಬೆಂಗಳೂರಿನ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.

ಪ್ಲೀಸ್‌ ಪಾಕಿಸ್ತಾನಕ್ಕೆ ಕಳಿಸಿ!ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿರುವ ಫಹದ್‌, 2006ರಿಂದ 18 ವರ್ಷಗಳಿಂದ ನಾನು ಜೈಲಿನಲ್ಲಿ ಬಂಧನದಲ್ಲಿದ್ದೆ. ಬಂಧನ ಅವಧಿಯಲ್ಲಿ ತಂದೆಯನ್ನು ಕಳೆದುಕೊಂಡೆ. ನನ್ನ ಕುಟುಂಬ ಸದಸ್ಯರ ಸ್ಥಿತಿಗತಿ ಹದಗೆಟ್ಟಿದೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಕುಟುಂಬದವರು 18 ವರ್ಷಗಳಿಂದ ನನಗಾಗಿ ಕಾಯುತ್ತಿದ್ದಾರೆ. 

ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಹೈಕೋರ್ಟ್‌ ಆದೇಶಿಸಿದ ನಂತರವೂ ಪ್ರತಿಬಂಧನ ಕೇಂದ್ರದಲ್ಲಿ ನನ್ನನ್ನು ಇರಿಸಿರುವುದು ಅನ್ಯಾಯ. ಹಲವು ಬಾರಿ ಮನವಿ ಮಾಡಿದರೂ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರದ ಮೇಲ್ವಿಚಾರಕರಾಗಿರುವ ವಿದೇಶಿಯರ ಪ್ರಾದೇಶಿಕ ಆಯುಕ್ತರು ಕ್ರಮ ಜರುಗಿಸಿಲ್ಲ. ಆದ್ದರಿಂದ ವಾಘಾ ಗಡಿ ಅಥವಾ ಇನ್ಯಾವುದೇ ಮಾರ್ಗದ ಮೂಲಕ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದಾರೆ.

2006ರಿಂದ 18 ವರ್ಷಗಳಿಂದ ನಾನು ಜೈಲಿನಲ್ಲಿ ಬಂಧನದಲ್ಲಿದ್ದೆ. ಬಂಧನ ಅವಧಿಯಲ್ಲಿ ತಂದೆಯನ್ನು ಕಳೆದುಕೊಂಡೆ. ನನ್ನ ಕುಟುಂಬ ಸದಸ್ಯರ ಸ್ಥಿತಿಗತಿ ಹದಗೆಟ್ಟಿದೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಕುಟುಂಬದವರು 18 ವರ್ಷಗಳಿಂದ ನನಗಾಗಿ ಕಾಯುತ್ತಿದ್ದಾರೆ. ಪಾಕಿಸ್ತಾನಕ್ಕೆ ಗಡಿಪಾರು ಮಾಡಲು ಹೈಕೋರ್ಟ್‌ ಆದೇಶಿಸಿದ ನಂತರವೂ ಪ್ರತಿಬಂಧನ ಕೇಂದ್ರದಲ್ಲಿ ನನ್ನನ್ನು ಇರಿಸಿರುವುದು ಅನ್ಯಾಯ. ಹಲವು ಬಾರಿ ಮನವಿ ಮಾಡಿದರೂ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರದ ಮೇಲ್ವಿಚಾರಕರಾಗಿರುವ ವಿದೇಶಿಯರ ಪ್ರಾದೇಶಿಕ ಆಯುಕ್ತರು ಕ್ರಮ ಜರುಗಿಸಿಲ್ಲ. ಆದ್ದರಿಂದ ವಾಘಾ ಗಡಿ ಅಥವಾ ಇನ್ಯಾವುದೇ ಮಾರ್ಗದ ಮೂಲಕ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದಾರೆ.

 

Share this article