ರಾಜ್ಯದ ಹೊಸ ವಿವಿಗಳಿಗೆ ಬಲ ತುಂಬಲು ವಿಶ್ರಾಂತ ಕುಲಪತಿಗಳ ವೇದಿಕೆಯಿಂದ ಏಳು ಶಿಫಾರಸು

ಸಾರಾಂಶ

ರಾಜ್ಯದ ಒಂಬತ್ತು ಹೊಸ ವಿವಿಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಹಂತ ಹಂತವಾಗಿ ಅವುಗಳ ಸಾಮರ್ಥ್ಯವೃದ್ಧಿ ಮತ್ತು ಬಲವರ್ಧನೆಗೆ ದೃಢ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ(ಎಫ್‌ವಿಸಿಕೆ) ವಿನಂತಿಸಿದೆ.

 ಬೆಂಗಳೂರು :  ರಾಜ್ಯದ ಒಂಬತ್ತು ಹೊಸ ವಿವಿಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಹಂತ ಹಂತವಾಗಿ ಅವುಗಳ ಸಾಮರ್ಥ್ಯವೃದ್ಧಿ ಮತ್ತು ಬಲವರ್ಧನೆಗೆ ದೃಢ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ(ಎಫ್‌ವಿಸಿಕೆ) ವಿನಂತಿಸಿದೆ.

ಎಲ್ಲ ಒಂಬತ್ತು ವಿವಿಗಳ ಬೆಳವಣಿಗೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಯೊಂದಿಗೆ ಪ್ರತಿಯೊಂದು ವಿವಿಗಳಿಗೆ ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಸಿದ್ಧಪಡಿಸಬೇಕೆಂಬುದು ಸೇರಿ ವಿವಿಗಳ ಅಭಿವೃದ್ಧಿಗೆ ಏಳು ಶಿಫಾರಸುಗಳನ್ನು ಮಾಡಿದೆ.

ಹೊಸ ವಿವಿಗಳ ಸ್ಥಿತಿಗತಿ ಕುರಿತು ನಗರದಲ್ಲಿ ನಡೆದ ಸಂವಾದ ಸಭೆಯಲ್ಲಿ ಕೆಲ ಹೊಸ ವಿವಿಗಳೂ ಸೇರಿ ರಾಜ್ಯದ ಅನೇಕ ವಿವಿಗಳ ವಿಶ್ರಾಂತ ಕುಲಪತಿಗಳು ತಮ್ಮ ಅಭಿಪ್ರಾಯ, ಸಲಹೆಗಳನ್ನು ಮಂಡಿಸಿದರು. ಅಂತಿಮವಾಗಿ ಹೊಸ ವಿವಿಗಳಿರುವ ಒಂಬತ್ತು ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ಕಡಿಮೆ ಇದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಚ್ಚುವ/ವಿಲೀನ ಆಲೋಚನೆ ಬಿಟ್ಟು ಪ್ರತಿಯೊಂದು ವಿವಿಗೂ ಅಗತ್ಯ ಅನುದಾನ, ಮೂಲಸೌಕರ್ಯ, ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಮಾಡಿ ಸದೃಢಗೊಳಿಸಲು ಹಂತ ಹಂತವಾಗಿ ಯಾವ ಕ್ರಮ ಅನುಸರಿಸಬೇಕೆಂದು ಏಳು ಶಿಫಾರಸು ಮಾಡಲು ನಿರ್ಣಯಿಸಲಾಯಿತು ಎಂದು ವೇದಿಕೆ ಪ್ರಕಟಣೆ ತಿಳಿಸಿದೆ.

ಪ್ರಮುಖ ಶಿಫಾರಸುಗಳು:

ವಿವಿಗಳ ಪರಿಸ್ಥಿತಿ ವಿಶ್ಲೇಷಣೆ ಮತ್ತು ಅಗತ್ಯಗಳ ಮೌಲ್ಯಮಾಪನ, ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಸವಾಲುಗಳ ವಿಶ್ಲೇಷಣೆ ಮಾಡಬೇಕು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ರಚಿಸಿದ ಕುಲಪತಿ/ ವಿಶ್ರಾಂತ ಕುಲಪತಿ/ಶೈಕ್ಷಣಿಕ ತಜ್ಞರ ತಂಡದಿಂದ ಬಾಹ್ಯ ಲೆಕ್ಕಪರಿಶೋಧನೆ (ಆಡಳಿತಾತ್ಮಕ ಶೈಕ್ಷಣಿಕ ಲೆಕ್ಕಪರಿಶೋಧನೆ) ನಡೆಸಬೇಕು. ಯೋಜಿತ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಸರ್ಕಾರದಿಂದ ಸೂಕ್ತ ಸೌಲಭ್ಯ, ಅಧ್ಯಾಪಕರು ಮತ್ತು ಅನುದಾನ ಒದಗಿಸಬೇಕು. ವಿವಿಗಳ ಬೆಳವಣಿಗೆಗೆ ಸಿಎಸ್‌ಆರ್‌ ಅನುದಾನ ಸಂಗ್ರಹ, ವಿದ್ಯಾಥಿಗಳ ಜೊತೆ ಪೋಷಕರನ್ನೂ ಭಾಗೀದಾರರನ್ನಾಗಿಸಬೇಕು.

Share this article