ಎತ್ತಿನಹೊಳೆ ಗುತ್ತಿಗೇಲಿ ಹಲವು ಲೋಪ : ಸಿಎಜಿ

Published : Jan 30, 2026, 12:54 PM IST
Ettinahole Project

ಸಾರಾಂಶ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನ ಸಂಬಂಧ 14,805.80 ಕೋಟಿ ರು. ಮೊತ್ತದ ಶೇ.67ರಷ್ಟು ಕಾಮಗಾರಿಗಳನ್ನು ಕೇವಲ ಏಳು ಮಂದಿ ಗುತ್ತಿಗೆದಾರರಿಗೆ ನೀಡಿರುವುದು, ಹಲವು ಲೋಪದೋಷಗಳನ್ನು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ) ಪತ್ತೆ ಹಚ್ಚಲಾಗಿದೆ.

 ವಿಧಾನಸಭೆ :  ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನ ಸಂಬಂಧ 14,805.80 ಕೋಟಿ ರು. ಮೊತ್ತದ ಶೇ.67ರಷ್ಟು ಕಾಮಗಾರಿಗಳನ್ನು ಕೇವಲ ಏಳು ಮಂದಿ ಗುತ್ತಿಗೆದಾರರಿಗೆ ನೀಡಿರುವುದು, ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಕೆಲಸದ ಅನುಭವ ಮೌಲ್ಯಮಾಪನ ಮಾಡದೆ ಶೇ.80ರಷ್ಟು ಕಾಮಗಾರಿಗಳನ್ನು ಗುತ್ತಿಗೆ ನೀಡಿರುವುದು, ಭೂಸ್ವಾಧೀನ ವಿಳಂಬ, ಕಾಮಗಾರಿಗಳ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಳ ಸೇರಿದಂತೆ ಯೋಜನೆ ಅನುಷ್ಠಾನದಲ್ಲಿ ಹಲವು ಲೋಪದೋಷಗಳನ್ನು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ) ಪತ್ತೆ ಹಚ್ಚಲಾಗಿದೆ.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರ ಸಚಿವ ಪ್ರಿಯಾಂಕ್‌ ಖರ್ಗೆ ಅವರು ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ ಅನುಷ್ಠಾನದ ಮೇಲಿನ ಕಾರ್ಯ ನಿರ್ವಹಣೆ ಕುರಿತು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಮಂಡಿಸಿದರು.

ಯೋಜನೆ ಕಾಮಗಾರಿಗಳ ಟೆಂಡರ್‌ ವೇಳೆ ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಕೆಲಸದ ಅನುಭವ ಮೌಲ್ಯಮಾಪನ ಮಾಡದೆ ಶೇ.80ರಷ್ಟು ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಇದು ಸಕಾಲಕ್ಕೆ ಕಾಮಗಾರಿಗಳು ಪೂರ್ಣಗೊಳ್ಳದಿರಲು ಕಾರಣವಾಗಿದೆ. 14,805.80 ಕೋಟಿ ರು. ಮೊತ್ತದ ಶೇ.67ರಷ್ಟು ಕಾಮಗಾರಿಗಳನ್ನು ಕೇವಲ ಏಳು ಮಂದಿ ಗುತ್ತಿಗೆದಾರರಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಒಬ್ಬ ಗುತ್ತಿಗೆದಾರನಿಗೆ 5,216.58 ಕೋಟಿ ರು. ಮೊತ್ತದ 11 ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ವಿಜೆಎನ್‌ಎಲ್‌ ಈ ಗುತ್ತಿಗೆದಾರರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲು ವಿಫಲವಾಗಿದೆ. ಈ ಮೂಲಕ ಗುತ್ತಿಗೆದಾರರಿಗೆ ಪರೋಕ್ಷವಾಗಿ ಲಾಭಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಪಿಆರ್‌ ಎರಡು ಬಾರಿ ಬದಲಾವಣೆ:

ಈ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಎರಡು ಬಾರಿ ಪರಿಷ್ಕರಿಸಲಾಗಿದೆ. 2012ರಲ್ಲಿ 8,323.50 ಕೋಟಿ ರು. ಇದ್ದ ಯೋಜನಾ ವೆಚ್ಚವು 2014ರ ಫೆಬ್ರವರಿಯಲ್ಲಿ 12,912.36 ಕೋಟಿ ರು.ಗೆ ಪರಿಷ್ಕರಿಸಲಾಗಿದೆ. ನಂತರ 2023ರ ಜನವರಿಯಲ್ಲಿ 23,251.66 ಕೋಟಿ ರು.ಗೆ ಏರಿಕೆಯಾಗಿದೆ. ಆರಂಭದಲ್ಲಿ ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿ ಬಳಿಕ ವಿವಿಧ ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳ ಸಂಬಂಧ ಮಾಡಲಾದ ಡಿಪಿಆರ್‌ಗಳಲ್ಲಿ ಯೋಜನೆ ಪೂರ್ಣಗೊಳಿಸುವ ದಿನಾಂಕ ನಿಗದಿಪಡಿಸಿಲ್ಲ. 2023ರ ಅಕ್ಟೋಬರ್‌ನಲ್ಲಿ ವಿಜೆಎನ್‌ಎಲ್‌ ನಿರ್ದೇಶಕರ ಮಂಡಳಿಯ 2026ರ ನವೆಂಬರ್‌ಗೆ ಈ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಿರುವುದು ಸಿಎಜಿ ವರದಿಯಲ್ಲಿ ಬೆಳಕಿಗೆ ಬಂದಿದೆ.

ವಿನ್ಯಾಸ ಬದಲಿಂದ 621 ಕೋಟಿ ರು. ಹೆಚ್ಚುವರಿ ವೆಚ್ಚ:

ಯೋಜನೆಯ ಭಾಗವಾಗಿ ಸಮತೋಲನ ಜಲಾಶಯ ಸ್ಥಳವನ್ನು ಎರಡು ಬಾರಿ ಬದಲಿಸಲಾಗಿದೆ. ಆರಂಭದಲ್ಲಿ ಪ್ರಸ್ತಾಪಿಸಲಾಗಿದ್ದ 10 ಟಿಎಂಸಿ ಸಾಮರ್ಥ್ಯವನ್ನು 2 ಟಿಎಂಸಿಗೆ ಇಳಿಸಿರುವುದು ಲೆಕ್ಕಪರಿಶೋಧನೆ ವೇಳೆ ಗೊತ್ತಾಗಿದೆ. ಮಳೆಗಾಲದ ತಿಂಗಳಲ್ಲಿ ಹೆಚ್ಚಿನ ನೀರು ಪಂಪ್‌ ಮಾಡುವ ಸಂಬಂಧ ವಿನ್ಯಾಸ ಬದಲಾವಣೆ ಮಾಡಿದ ಪರಿಣಾಮ 621.45 ಕೋಟಿ ರು. ಹೆಚ್ಚುವರಿ ವೆಚ್ಚದ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

7,954 ಕೋಟಿ ರು.ಸಾಲದ ಕೋರಿಕೆ ನೆನೆಗುದಿಗೆ:

ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಸಾಲಗಳನ್ನು ಪಡೆಯಲು ವಿಜೆಎನ್‌ಎಲ್‌ 2023ರ ಜೂನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಆದರೆ, ಸರ್ಕಾರ ಆ ಕೋರಿಕೆಯನ್ನು ಇನ್ನೂ ಅನುಮೋದಿಸದ ಪರಿಣಾಮ ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ 7,954.63 ಕೋಟಿ ರು. ಬಗ್ಗೆ ವಿಜೆಎನ್‌ಎಲ್‌ ಆರ್ಥಿಕ ಅನಿಶ್ಚಿತತೆ ಎದುರಿಸುತ್ತಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟೆಂಡರ್‌ ನ್ಯೂನ್ಯತೆಗಳು:

ಯೋಜನೆ ಅನುಷ್ಠಾನದ ಹಂತ-1 ಮತ್ತು ಹಂತ-2 ಕಾಮಗಾರಿಗಳ ನಡುವೆ ಸಮನ್ವಯದ ಕೊರತೆಯಿಂದ 2,965.77 ಕೋಟಿ ರು. ವೆಚ್ಚದಲ್ಲಿ ಸೃಷ್ಟಿಸಿದ್ದ ಮೂಲಸೌಕರ್ಯಗಳ ಸಮರ್ಪಕ ಬಳಕೆಯಾಗಿಲ್ಲ. ಯೋಜನೆಯ ಗುತ್ತಿಗೆ ನಿರ್ವಹಣೆಯಲ್ಲಿ ಪ್ರಮಾಣಿತ ಟೆಂಡರ್‌ ದಾಖಲೆ ಅಳವಡಿಸಿಕೊಂಡಿಲ್ಲ. ಗುತ್ತಿಗೆದಾರನ ಟೆಂಡರ್‌ ಸಾಮರ್ಥ್ಯ ಮೌಲ್ಯಮಾಪನ ಮಾಡಿಲ್ಲ. 87.05 ಕೋಟಿ ರು.ನಿಂದ 1,135.03 ಕೋಟಿ ರು. ವ್ಯಾಪ್ತಿಯ ಹೆಚ್ಚಿನ ಮೌಲ್ಯದ ಗುತ್ತಿಗಳಿಗೆ ಸಾಕಷ್ಟು ಬಿಡ್ಡಿಂಗ್‌ ಸಮಯ ನೀಡದಿರುವುದು ಸೇರಿದಂತೆ ಟೆಂಡರ್ ಪ್ರಕ್ರಿಯೆಗಳಲ್ಲಿನ ಹಲವು ನ್ಯೂನ್ಯತೆಗಳು ಬೆಳಕಿಗೆ ಬಂದಿವೆ.

12 ವರ್ಷ, 15,297 ಕೋಟಿ ರು. ವೆಚ್ಚ:

ಯೋಜನೆಯನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಗುತ್ತಿಗೆಯ ವಿವಿಧ ಹಂತಗಳಲ್ಲಿ ಪರಿಶೀಲನಾ ವೇಳಾಪಟ್ಟಿ, ವರದಿ ಮಾಡುವ ಬಗ್ಗೆ ಸರ್ಕಾರ ಅಥವಾ ವಿಜೆಎನ್‌ಎಲ್‌ ನಿಗದಿ ಮಾಡಿಲ್ಲ. ಪರಿಣಾಮಕಾರಿ ಮೇಲ್ವಿಚಾರಣಾ ವ್ಯವಸ್ಥೆ ಇಲ್ಲದ ಕಾರಣ ಯೋಜನೆ ಅನುಷ್ಠಾನದಲ್ಲಿ ಎದುರಾದ ಆಡಚಣೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಇಂತಹ ಹಲವು ನ್ಯೂನ್ಯತೆಗಳಿಂದ ಈ ಯೋಜನೆ ಕಳೆದ 12 ವರ್ಷಗಳಲ್ಲಿ 15,297 ಕೋಟಿ ರು. ವೆಚ್ಚದ ಹೊರತಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶವೂ ಈಡೇರಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

40 ವರ್ಷ ವಯಸ್ಸಾದರೂ ಸಿಗುತ್ತದೆ ಸರ್ಕಾರಿ ಕೆಲಸ
ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ