ಹವ್ಯಕ ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು, ಸಮಾಜವನ್ನು ಸಂಘಟಿಸಲು ಹೊಸ ಪೀಳಿಗೆ ಅವಶ್ಯಕತೆಯಿದೆ. ಹೀಗಾಗಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಕರೆಯಂತೆ ಹವ್ಯಕರು ತಮ್ಮ ಸಂತತಿ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಬೆಂಗಳೂರು : ಹವ್ಯಕ ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು, ಸಮಾಜವನ್ನು ಸಂಘಟಿಸಲು ಹೊಸ ಪೀಳಿಗೆ ಅವಶ್ಯಕತೆಯಿದೆ. ಹೀಗಾಗಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಕರೆಯಂತೆ ಹವ್ಯಕರು ತಮ್ಮ ಸಂತತಿ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶನಿವಾರ ಪಾಲ್ಗೊಂಡು 81 ಶಿಕ್ಷಕರಿಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹವ್ಯಕ ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಅವರು ಉನ್ನತ ಹುದ್ದೆಯಲ್ಲಿದ್ದು, ಎಲ್ಲರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ಆದರ್ಶಪ್ರಾಯರಾಗಿ ಬದುಕು ಸಾಗಿಸುತ್ತಾರೆ ಎಂದರು.
ಹೃದ್ರೋಗ ತಜ್ಞೆ ಡಾ। ವಿಜಯಲಕ್ಷ್ಮೀ ಬಾಳೇಕುಂದ್ರಿ, ಮಾಜಿ ಸಚಿವ ರಾಮಚಂದ್ರ ಗೌಡ, ಸಂಸದ ಮತ್ತು ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್, ವಾಗ್ಮಿ ಡಾ। ಕೆ.ಪಿ.ಪುತ್ತೂರಾಯ ಇತರರಿದ್ದರು.
ಹವ್ಯಕ ಸಮುದಾಯದವರ ಸಂಖ್ಯೆ ಬಹಳ ಚಿಕ್ಕದು. ಆದರೆ ಅವರ ಉತ್ಸಾಹ ಬೇರೆಲ್ಲ ಸಮುದಾಯಗಳಿಗಿಂತ ದೊಡ್ಡದಿದೆ. ಈ ಉತ್ಸಾಹ, ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮುಂದಿನ ಪೀಳಿಗೆಯಲ್ಲೂ ಮುಂದುವರಿಯಬೇಕು. ಇದಕ್ಕಾಗಿ ಸಮಾಜ ಬೆಳೆಯಬೇಕಿದ್ದು, ರಾಘವೇಶ್ವರ ಭಾರತೀ ಸ್ವಾಮೀಜಿ ಕರೆಯಂತೆ 3 ಮಕ್ಕಳನ್ನು ಹೊಂದಲು ಹವ್ಯಕ ಸಮುದಾಯದವರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ಯಾವುದೇ ದೇಶದ ಶಿಕ್ಷಣದ ಮೌಲ್ಯ ಹಾಳಾದರೆ ಆ ದೇಶ ಅವನತಿಯತ್ತ ಸಾಗುತ್ತದೆ. ಹೀಗಾಗಿ ಶಿಕ್ಷಣದ ಮೌಲ್ಯವನ್ನು ಎತ್ತಿ ಹಿಡಿಯಲು ಎಲ್ಲ ಶಿಕ್ಷಕರು ಮುಂದಾಗಬೇಕು. ಮಕ್ಕಳಿಗೆ ಕೇವಲ ಪಠ್ಯದ ವಿಚಾರಗಳನ್ನು ತಿಳಿಸದೆ ಮಾನವೀಯ ಮೌಲ್ಯಗಳನ್ನು ಬೋಧಿಸುವತ್ತಲೂ ಗಮನಹರಿಸಬೇಕು. ದೇಶಪ್ರೇಮದ ಬಗ್ಗೆ ತಿಳಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸಬೇಕು ಎಂದು ಹೇಳಿದರು.
ಹೃದ್ರೋಗ ತಜ್ಞೆ ಡಾ। ವಿಜಯಲಕ್ಷ್ಮೀ ಬಾಳೇಕುಂದ್ರಿ, ಮಾಜಿ ಸಚಿವ ರಾಮಚಂದ್ರ ಗೌಡ, ಸಂಸದ ಮತ್ತು ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ವೆಂಕಟೇಶ್, ವಾಗ್ಮಿ ಡಾ। ಕೆ.ಪಿ.ಪುತ್ತೂರಾಯ ಇತರರಿದ್ದರು.