ಪಾಕ್ ಜತೆ ಕ್ರಿಕೆಟ್ ಆಡಲೇಬಾರದು: ಖಾದರ್‌

ಸಾರಾಂಶ

ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್, ‘ಪಾಕಿಸ್ತಾನದ ಜತೆ ನಾವು ಕ್ರಿಕೆಟ್ ಆಟ ಆಡಲೇಬಾರದು’ ಎಂದು ಹೇಳಿದ್ದಾರೆ.

ಮಂಗಳೂರು :  ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್, ‘ಪಾಕಿಸ್ತಾನದ ಜತೆ ನಾವು ಕ್ರಿಕೆಟ್ ಆಟ ಆಡಲೇಬಾರದು’ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಟಿ20 ಮ್ಯಾಚ್ ನಡೆಯುತ್ತಿರುವುದು ಸಂತೋಷದ ವಿಚಾರ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ಭಾರತ ದೇಶದ ಪ್ರಜೆ. ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನೋಡಿದ್ದೇವೆ. ಭಾರತ ದೇಶದಲ್ಲಿ ಅವರ ಜತೆ ಪಂದ್ಯ ಬ್ಯಾನ್ ಮಾಡಲಾಗಿದೆ. ಹಾಗಿದ್ದೂ ಹೊರದೇಶದಲ್ಲಿ ಯಾಕೆ ಆಟ ಆಡಿಸಬೇಕು? ಅವರು ಸರಿಯಾಗುವ ತನಕ ಅವರ ಜತೆ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅಂತರಾಳದ ಅನಿಸಿಕೆ ಎಂದಿದ್ದಾರೆ.

ಮ್ಯಾಚ್ ಆಯೋಜಿಸುವವರು ಈ ರೀತಿಯ ಗೊಂದಲ ಮಾಡಬಾರದು. ಈಗ ಆಟ ಆಡಲೇಬೇಕು ಎಂಬ ನಿರ್ಧಾರವಾಗಿದೆ. ಭಾರತ ದೇಶ ಟಿ20 ವಿಶ್ವಕಪ್ ಗೆಲ್ಲಬೇಕು. ಗೆಲುವಷ್ಟೇ ಅಲ್ಲ, ಗೌರವದ ಗೆಲುವಾಗಬೇಕು. ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದಿದ್ದಾರೆ.

Share this article