ಸಿದ್ದು ಸ್ಟಿಂಗ್‌ ಕಟ್ಟುಕತೆ - ಮಾಜಿ ಸಿಎಂಗೆ ಸೈಬರ್‌ ಕ್ರೈಂ ಪೊಲೀಸ್‌ ಕ್ಲೀನ್‌ಚಿಟ್‌

Published : Oct 30, 2026, 08:07 AM IST
Siddaramaiah

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್‌ನ ವಿಡಿಯೋಗಳು ಕಟ್ಟುಕತೆಯಾಗಿದ್ದು, ಅವರ ಗೌರವಕ್ಕೆ ಧಕ್ಕೆ ತರುವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಿರುವುದು ಮೇಲ್ನೋಟಕ್ಕೆ ತನಿಖೆಯಲ್ಲಿ ದೃಢಪಟ್ಟಿದೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್‌ನ ವಿಡಿಯೋಗಳು ಕಟ್ಟುಕತೆಯಾಗಿದ್ದು, ಅವರ ಗೌರವಕ್ಕೆ ಧಕ್ಕೆ ತರುವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಿರುವುದು ಮೇಲ್ನೋಟಕ್ಕೆ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಸೈಬರ್ ಪೊಲೀಸರು ಗುರುವಾರ ಅಧಿಕೃತವಾಗಿ ಸುದೀರ್ಘವಾಗಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ತನ್ಮೂಲಕ ಹಲವು ದಿನಗಳಿಂದ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಸ್ಟಿಂಗ್ ಆಪರೇಷನ್‌ ಪ್ರಕರಣಕ್ಕೆ ಸಿಸಿಬಿ ಸೈಬರ್ ಪೊಲೀಸರು ತಾರ್ಕಿಕ ಅಂತ್ಯವಾಡುವ ಪ್ರಯತ್ನ ನಡೆಸಿದ್ದು, ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಊಹಾಪೋಹ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ, ಸ್ಟಿಂಗ್ ಆಪರೇಷನ್‌ದು ಎನ್ನಲಾದ ವಿಡಿಯೋ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪ್ರಸಾರ ಹಿನ್ನೆಲೆಯಲ್ಲಿ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಈ ರೀತಿಯ ವಿಡಿಯೋವನ್ನು ಚಿತ್ರೀಕರಿಸಿ ವಶದಲ್ಲಿ ಇರಿಸಿಕೊಂಡು, ಇತರರಿಗೆ ವರ್ಗಾಯಿಸಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈವರೆಗೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಮತ್ತು ದಾಖಲಿಸಲಾದ ಹೇಳಿಕೆಗಳ ಆಧಾರದಲ್ಲಿ ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕತೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ದೃಢಪಡಿಸುವುದಿಲ್ಲ ಎಂದು ಸೈಬರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಮಹಿಳೆ ಹೇಳಿಕೆ ದಾಖಲು:

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸಮಗ್ರ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳ ಆಧಾರದ ಮೇರೆಗೆ ವಿಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಕಟ್ಟುಕತೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ಜಪ್ತಿ:

ಸದರಿ ವಿಡಿಯೋವನ್ನು ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಲಾಗಿದೆ. ವಿಡಿಯೋದ ನೈಜತೆ, ಸಮಗ್ರತೆ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ಇತರೆ ತಾಂತ್ರಿಕ ಅಂಶಗಳನ್ನು ದೃಢಪಡಿಸುವ ಉದ್ದೇಶದಿಂದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆ (ಎಫ್‌ಎಸ್‌ಎಲ್‌)ಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಈ ವಿಡಿಯೋವನ್ನು ಸುಮಾರು 12 ವರ್ಷಗಳ ನಂತರ ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಬಿಂಬಿಸಲಾಗಿದೆ. ಈ ವಿಡಿಯೋವನ್ನು ಚಿತ್ರೀಕರಿಸುವ ಉದ್ದೇಶ ಹಾಗೂ ಸಂದರ್ಭದ ಬಗ್ಗೆ ತನಿಖೆ ನಡೆದಿದೆ. ಅದರ ಸೃಷ್ಟಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಯಾರು, ಅವರ ಪಾತ್ರವೇನು, ತಪ್ಪುದಾರಿಗೆಳೆಯುವ ನಿರೂಪಣೆಗೆ ಕಾರಣವೇನು, ವಿಡಿಯೋವನ್ನು ಪೂರ್ವಯೋಜಿತವಾಗಿ ಚಿತ್ರೀಕರಿಸಲಾಗಿದಿಯೇ, ಕೃತಕ ಸೃಷ್ಟಿಯೇ ಮತ್ತು ಇದರ ಉದ್ದೇಶಗಳೇನು ಎಂದೆಲ್ಲ ಸಮಗ್ರ ಶೋಧಿಸಲಾಗುತ್ತಿದೆ ಎಂದಿದ್ದಾರೆ.

ವಿಡಿಯೋ ‘ಪ್ರಸಾರ’ ಸಂಪರ್ಕ ಜಾಲಕ್ಕೆ ಪ್ರಭಾವಿಗಳ ನಂಟು

ವಿಡಿಯೋ ಪ್ರಸಾರ ಮಾಡಿದ ವ್ಯಕ್ತಿಗಳಿಗೆ ದೆಹಲಿ ಮಟ್ಟದಲ್ಲಿ ರಾಜಕೀಯ ಪ್ರಭಾವಿಗಳ ಸಂಪರ್ಕವಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೋ ಚಿತ್ರೀಕರಣಗೊಂಡ ನಂತರ ಅದು ಯಾರ ವಶದಲ್ಲಿತ್ತು? ಯಾರಿಂದ ಯಾರಿಗೆ ವರ್ಗಾಯಿಸಲಾಯಿತು ಹಾಗೂ ಅಂತಿಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವ್ಯಕ್ತಿಗಳ ಕೈಗೆ ಹೇಗೆ ತಲುಪಿತು ಎಂಬ ಅಂಶಗಳ ಕುರಿತು ತನಿಖೆ ಪ್ರಗತಿಯಲ್ಲಿದೆ. 2023ರಲ್ಲಿ ವಿಡಿಯೋ ಚಿತ್ರೀಕರಣಗೊಂಡ ಸಮಯದಿಂದ 2026ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಅಂತರ್ಜಾಲದಲ್ಲಿ ಪ್ರಸಾರವಾಗುವವರೆಗಿನ ವಿಡಿಯೋದ ಸಂಪೂರ್ಣ ವರ್ಗಾವಣೆಯ ಲಿಂಕ್‌ಗಳನ್ನು ಶೋಧಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ವಿಡಿಯೋವನ್ನು ಇದೇ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಯೂಟ್ಯೂಬ್, ಎಕ್ಸ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವುದು ದೃಢಪಟ್ಟಿದೆ ಎಂದಿದ್ದಾರೆ.

ವಿಡಿಯೋ ಅಪ್‌ ಲೋಡ್ ಮಾಡಲು ಅನಾಮಧೇಯ ಖಾತೆಗಳನ್ನು ಬಳಸಲಾಗಿದ್ದು, ತಮ್ಮ ಗುರುತು ಮತ್ತು ಸ್ಥಳವನ್ನು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳು (ವಿಪಿಎನ್‌), ಮರೆಮಾಚಲಾದ ಐಪಿ ವಿಳಾಸಗಳು, ವರ್ಚುವಲ್ ಹಾಗೂ ನಕಲಿ ಗುರುತು ಪ್ರದರ್ಶಿಸುವ ಮೊಬೈಲ್ ಸಂಖ್ಯೆಗಳು ಮತ್ತು ಇತರ ಸುಧಾರಿತ ಅನಾಮಧೇಯ ಡಿಜಿಟಲ್ ತಂತ್ರಗಳನ್ನು ಬಳಸಿದ್ದಾರೆ. ಈ ಚಟುವಟಿಕೆಗಳಿಗೆ ಸಂಬಂಧಿಸಿದ ಡಿಜಿಟಲ್ ಜಾಡುಗಳು ಕರ್ನಾಟಕದ ಹೊರಗಿನ ಸ್ಥಳಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ.

ವಿದ್ಯುನ್ಮಾನ ಸಾಕ್ಷ್ಯಾಧಾರಗಳ ಪರಿಶೀಲನೆ ಹಾಗೂ ತಾಂತ್ರಿಕ ವಿಶ್ಲೇಷಣೆಯ ಮೂಲಕ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಫೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೊಬೈಲ್ ಅನ್ನು ದೆಹಲಿಯ ಹಳೆಯ ಹಾಗೂ ನವೀಕರಿಸಿದ ಮೊಬೈಲ್ ಫೋನ್‌ಗಳ ಮಾರಾಟ ಮಳಿಗೆಯಿಂದ ಖರೀದಿಸಿರುವುದು ಪತ್ತೆಯಾಗಿದೆ. ಮೊಬೈಲ್ ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನೂ ಗುರುತಿಸಲಾಗಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್‌ಸಿಆರ್‌) ಮೊಬೈಲ್ ಫೋನ್ ಖರೀದಿಗೆ ಸಂಬಂಧಿಸಿದ ಆರೋಪಿಗಳಲ್ಲಿ ಒಬ್ಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆಯಲ್ಲಿ ತನಿಖೆಗೆ ಪೂರಕವಾದ ಹಲವು ಮಹತ್ವದ ಸುಳಿವುಗಳು ಸಹ ಲಭ್ಯವಾಗಿವೆ ಎಂದಿದ್ದಾರೆ.

ಈತ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್ ಆಗಿ ಕೆಲಸ ಮಾಡುತ್ತಿದ್ದ ಸಂಗತಿ ತಿಳಿಯಿತು. ನವದೆಹಲಿಯಲ್ಲಿ ನೆಲೆಸಿರುವ ಪ್ರಭಾವಿ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳೊಂದಿಗೆ ಆರೋಪಿ ಸಂಪರ್ಕವಿರುವುದು ಕಂಡು ಬಂದಿದೆ. ಈ ಸಂಬಂಧಗಳ ಸ್ವರೂಪ, ವ್ಯಾಪ್ತಿ ಹಾಗೂ ಪ್ರಕರಣದೊಂದಿಗೆ ಅವುಗಳಿಗಿರುವ ಪ್ರಸ್ತುತತೆಯ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಭಾವಿ ವ್ಯಕ್ತಿಗಳ ತೇಜೋವಧೆಗೆ ಸಂಚು

ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ತೇಜೋವಧೆ ಮಾಡುವ, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಹಾಗೂ ರಾಜಕೀಯ ವಿವಾದ ಮತ್ತು ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ವಿಡಿಯೋವನ್ನು ಯೋಜಿತವಾಗಿ ಪ್ರಸಾರ ಮಾಡಿರುವ ಸುಳಿವು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಡಿಯೋವನ್ನು ದುರುದ್ದೇಶದಿಂದ ಪ್ರಸಾರ ಮಾಡುವ ಸಂಚಿನ ರೂಪುರೇಷೆ ಸಿದ್ಧಪಡಿಸುವುದು, ಅದಕ್ಕೆ ಸಹಕರಿಸುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಹಾಗೂ ವ್ಯಾಪಕವಾಗಿ ಹರಡುವಂತೆ ಮಾಡುವ ಪ್ರಕ್ರಿಯೆಗಳಲ್ಲಿ ಹಲವು ವ್ಯಕ್ತಿಗಳು ಸಂಘಟಿತರಾಗಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಂಚುಕೋರರ ಹೆಸರು ಬಹಿರಂಗವಿಲ್ಲ

ಕೆಲವು ವ್ಯಕ್ತಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಕಾನೂನಿನ ರೀತ್ಯಾ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳ ಪತ್ತೆ ಹಚ್ಚಲಾಗಿದೆ. ಆದರೆ ತನಿಖೆಯ ದೃಷ್ಟಿಯಿಂದ ಹಾಗೂ ಸಾಕ್ಷ್ಯಾಧಾರಗಳಿಗೆ ಹಸ್ತಕ್ಷೇಪ ತಡೆಯುವ ಉದ್ದೇಶದಿಂದ ಪ್ರಸುತ್ತ ಹಂತದಲ್ಲಿ ಸಂಚುಕೋರರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ಮನವಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೃಢೀಕರಿಸದ ಆರೋಪಗಳನ್ನು ಪ್ರಸಾರ ಮಾಡುವುದು, ಅವುಗಳಿಗೆ ಮತ್ತಷ್ಟು ಪ್ರಚಾರ ನೀಡುವುದು ಅಥವಾ ತನಿಖೆ ಪೂರ್ಣಗೊಳ್ಳುವ ಮೊದಲೇ ಆತುರದ ತೀರ್ಮಾನಗಳಿಗೆ ಬರುವುದು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವುದರ ಜೊತೆಗೆ, ಪ್ರಗತಿಯಲ್ಲಿರುವ ತನಿಖೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿರುವುದರಿಂದ ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ ಎಂದು ಪೊಲೀಸರು ಕೋರಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರೈತರಿಗೆ ₹2500 ಬರ ಪರಿಹಾರ ಮಂಜೂರು - 226 ಬರಪೀಡಿತ ತಾಲೂಕಿನ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಂದಾಯ
ಫೆ.27ರಿಂದ ಪಿಯು, ಮಾ.22ರಿಂದ ಎಸ್ಸೆಸ್ಸೆಲ್ಸಿ ಎಕ್ಸಾಂ