;Resize=(412,232))
ಬೆಂಗಳೂರು : ನಗರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ 26 ಲಕ್ಷ ಮಂದಿಗೆ ಈಗಾಗಲೆ ನೋಟಿಸ್ ನೀಡಲಾಗಿದೆ. ಈ ಕುರಿತು ವಿಚಾರಣೆ ನಡೆಸಲು ಎಆರ್‌ಒ, ಹೆಚ್ಚುವರಿ ಎಆರ್‌ಒ ಹಾಗೂ ಇಆರ್‌ಒಗಳು ಸೇರಿ ಒಟ್ಟು 2,526 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಣೆಯ ಅಧಿಕಾರಿಗಳು ನಗರದ ವಾರ್ಡ್ ಕಚೇರಿ, ತಾಲೂಕು ಕಚೇರಿಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನೋಟಿಸ್ ನೀಡಿದವರಿಗೆ ವಿಚಾರಣೆ ನಡೆಸಲಿದ್ದಾರೆ. ನೋಟಿಸ್ ಪಡೆದವರು ಅಗತ್ಯ ದಾಖಲೆಗಳನ್ನು ನೀಡಬೇಕು. ಆ ದಾಖಲೆಗಳು ಸರಿ ಇದ್ದರೆ, ಹೆಸರು ಮತದಾರರ ಪಟ್ಟಿಯಲ್ಲಿ ಸೇರುತ್ತದೆ. ಇಲ್ಲದಿದ್ದರೆ, ಪಟ್ಟಿಯಿಂದ ಕೈಬಿಡಲಾಗುವುದು ಎಂದರು.
ಸೆ.19 ಹಾಗೂ 20 (ಶನಿವಾರ ಹಾಗೂ ಭಾನುವಾರ) ವಿಚಾರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಗರದ ಕೆ.ಆರ್.ಪುರಂನಲ್ಲಿ ಆಟೋಗಳಲ್ಲಿ ಪ್ರಚಾರ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ರಿಂದ 40 ಆಟೋಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಪ್ರಚಾರ ನಡೆಸಲಾಗುವುದು ಎಂದು ಆಯುಕ್ತರು ವಿವರಿಸಿದರು.
ಅನಾರೋಗ್ಯ, ನಡೆಯಲು ಆಗದೆ, ಹಾಸಿಗೆಯಲ್ಲಿರುವುದು ಸೇರಿ ಸಮಸ್ಯೆ ಇರುವವರ ಪರವಾಗಿ ಕುಟುಂಬದವರೇ ಬಂದು ಸಮಸ್ಯೆ ವಿವರಿಸಿದರೆ, ಅಧಿಕಾರಿಗಳೇ ಅವರ ಮನೆಗೆ ತೆರಳಿ ವಿಚಾರಣೆ ಮಾಡುತ್ತಾರೆ ಎಂದರು. ನಗರದ ನಿವಾಸಿಗಳು ಭಾರತೀಯರಾಗಿದ್ದಲ್ಲಿ ವಿಚಾರಣೆ ಮಾಡಬಹುದು. ಆದರೆ, ವಿದೇಶದಲ್ಲಿದ್ದರೆ ವಿಡಿಯೋ ಮೂಲಕ ವಿಚಾರಣೆ ಸಾಧ್ಯವಿಲ್ಲ. ಈ ಕುರಿತು ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್ಐಆರ್ ಹಂತದಲ್ಲಿ ವಿಳಾಸ ಸರಿಪಡಿಸಲು, ಮತದಾರರ ಚೀಟಿಯ ಫೋಟೋ ಸರಿಪಡಿಸಲು ಸಾಧ್ಯವಿಲ್ಲ. ಮುಂದಿನ ಹಂತದಲ್ಲಿ ಫಾರ್ಮ್ 6 ಸಲ್ಲಿಸಿದಾಗ ಹೆಸರು ಸೇರ್ಪಡಿಸಲು ಅವಕಾಶ ಇದೆ. ಈ ಹಂತದಲ್ಲಿ 2002ರ ಪಟ್ಟಿಯಲ್ಲಿ ಹೆಸರು ಇದ್ದರೂ ಮಾಹಿತಿ ದೊರೆಯದಿದ್ದರೆ, ಆ ಮಾಹಿತಿಯನ್ನು ಫಾರ್ಮ್ 6ನಲ್ಲಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.
3 ಬಗೆಯ ದಾಖಲಾತಿ ಅಗತ್ಯ:
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ 3 ವಿಷಯಗಳನ್ನು ಖಾತರಿಪಡಿಸುವ ದಾಖಲೆಗಳನ್ನು ನಗರದ ನಿವಾಸಿಗಳು ವಿಚಾರಣೆ ವೇಳೆ ನೀಡಬೇಕು. ನಾಗರಿಕತ್ವ(ಸಿಟಿಜನ್ ಶಿಪ್), 18 ವರ್ಷ ತುಂಬಿರುವ ಕುರಿತ ದಾಖಲೆ, ಸ್ಥಳೀಯ ನಿವಾಸಿಯಾಗಿರುವ ಕುರಿತ ದಾಖಲೆಗಳನ್ನು ನೀಡುವುದು ಕಡ್ಡಾಯ, ಈ 3 ವಿಷಯಗಳನ್ನು ಖಾತರಿ ಪಡಿಸುವ ಒಂದು ದಾಖಲೆಯಿದ್ದರೂ ಬೇರೆ ದಾಖಲೆಗಳ ಅಗತ್ಯ ಇರುವುದಿಲ್ಲ. ಚುನಾವಣಾ ಆಯೋಗ ತಿಳಿಸಿರುವ 11 ಬಗೆಯ ದಾಖಲೆಗಳಲ್ಲಿ ಈ 3 ವಿಷಯಗಳನ್ನು ಖಾತರಿ ಪಡಿಸುವ ದಾಖಲೆಗಳು ಇರುವುದು ಕಡ್ಡಾಯ ಎಂದು ದಕ್ಷಿಣ ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದರು.