16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

Published : Mar 07, 2026, 08:56 AM IST
social media ban

ಸಾರಾಂಶ

ವಿದ್ಯಾರ್ಥಿಗಳು, ಯುವಸಮೂಹ ದಾರಿತಪ್ಪುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಕೆಲ ಮಹತ್ವದ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಜಾಗೃತಿ ಶಿಕ್ಷಣ ಹಾಗೂ ವಿದ್ಯಾರ್ಥಿ ನಾಯಕರನ್ನು ಬೆಳೆಸಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ 

 ಬೆಂಗಳೂರು :  ವಿದ್ಯಾರ್ಥಿಗಳು, ಯುವಸಮೂಹ ದಾರಿತಪ್ಪುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಕೆಲ ಮಹತ್ವದ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ. ಮಾದಕ ವಸ್ತು ವ್ಯಸನಕ್ಕೆ ಒಳಗಾಗುವುದು ತಪ್ಪಿಸಲು ಜಾಗೃತಿ ಶಿಕ್ಷಣ ಹಾಗೂ ವಿದ್ಯಾರ್ಥಿ ನಾಯಕರನ್ನು ಬೆಳೆಸಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ.

ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸಲಾಗುವುದು ಎಂದು ಘೋಷಿಸಲಾಗಿದೆ.

ನಿಷೇಧ ಹೇಗೆ?

ಈಗಾಗಲೇ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ದೇಶದಲ್ಲಿ ಇಂತಹದ್ದೊಂದು ಪ್ರಯತ್ನ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಟಿಕ್‌-ಕಾಟ್‌, ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌, ಸ್ಯಾಪ್‌ಚಾಟ್‌, ಇನ್ಟಾಗ್ರಾಮ್‌ ಸೇರಿದಂತೆ ವಿವಿಧ ಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸುವ ಉದ್ದೇಶ ಸರ್ಕಾರದ್ದಾಗಿದೆ. ಈ ವಯೋಮಾನದೊಳಗಿನ ಮಕ್ಕಳು ಈ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸುವುದು ಮತ್ತು ಈಗಾಗಲೇ ಇರುವಂತಹ ಅಂತಹ ಅಪ್ರಾಪ್ತರ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೊಂದಿಗೆ ಸೇರಿ ಕ್ರಮ ವಹಿಸುವುದು.

ಇದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಬಹುದಾದ ಸಾಮಾಜಿಕ ಜಾಲತಾಣಗಳ ಬಳಕೆಗೆ ಮನೆಗಳಲ್ಲೂ ಪೋಷಕರು ನಿಬಂರ್ಧ ವಿಧಿಸಬೇಕೆಂದು, ದೊಡ್ಡವರ ಹೆಸರಲ್ಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆದು ಬಳಸುವುದನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡುವುದು ಸರ್ಕಾರ ಆಲೋಚನೆಯಾಗದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಶಿಕ್ಷಣ ಕ್ಷೇತ್ರವೂ ಸ್ಮಾರ್ಟ್‌ ಆಗುತ್ತಿದೆ. ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು ತಮ್ಮದೇ ಆದ ಗೂಗಲ್‌ ಸ್ಮಾರ್ಟ್‌ ಕ್ಲಾಸ್‌ಗಳು, ಶೈಕ್ಷಣಿಕ ಆ್ಯಪ್‌ಗಳು, ಪೋಷಕರ ವಾಟ್ಸ್‌ಅಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಅಂತಹ ಕೆಲವು ಅಂದರೆ ವಿದ್ಯಾರ್ಥಿಗಳ ಕಲಿಕೆ, ಬೋಧನಾ ಚಟುವಟಿಕೆಗಳಿಗೆ ಪೂರಕ ಹಾಗೂ ಸಹಕಾರಿಯಾದ ಆ್ಯಪ್, ಸಾಮಾಜಿಕ ಜಾಲತಾಣಗಳ ಬಳಕೆಯನ್ನು 16 ವರ್ಷದೊಳಗಿನ ಮಕ್ಕಳು ಬಳಕೆಗೆ ನಿರ್ಬಂಧ ಇರುವುದಿಲ್ಲ. ಆದರೆ, ಅದೂ ಕೂಡ ಅವರ ತಂದೆ ತಾಯಿಯ ಅಥವಾ ಪೋಷಕರ ಮೊಬೈಲ್‌ನಲ್ಲಿ ಕಾಲಮಿತಿಯಲ್ಲಿ ಬಳಸಲು ಅವಕಾಶ ನೀಡಬೇಕೆಂದು ಸೂಚಿಸುವ ಇರಾದೆ ಸರ್ಕಾರದ್ದಾಗಿದೆ ಎಂದು ತಿಳಿದು ಬಂದಿದೆ.

ಮಾದಕ ವಸ್ತು ವ್ಯಸನ ತಡೆಗೆ ಶಿಕ್ಷಣ:

ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಮತ್ತು ಮಕ್ಕಳು ವ್ಯಸನಕ್ಕೆ ಒಳಗಾಗುವುದನ್ನು ತಪ್ಪಿಸಲು ಬಜೆಟ್‌ನಲ್ಲಿ ಜಾಗೃತಿ ಶಿಕ್ಷಣದ ಘೋಷಣೆ ಮಾಡಲಾಗಿದೆ.

ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

3 ದಶಕಗಳಿಂದ ಸ್ತಬ್ಧವಾಗಿದ್ದ ವಿದ್ಯಾರ್ಥಿ ಚುನಾವಣೆ ಶುರು

ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ಕಳೆದ ಮೂರು ದಶಕಗಳಿಂದ ಸ್ತಬ್ಧವಾಗಿದ್ದ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪುನರಾರಂಭಿಸುವ ಮುನ್ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳಿಗೆ 1989-90ರ ಅವಧಿಯಲ್ಲಿ ಕಡಿವಾಣ ಹಾಕಲಾಗಿತ್ತು. ಆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ವರದಿಯಾದ ಬಳಿಕ ಕಾಲೇಜು ಕ್ಯಾಂಪಸ್ ಚುನಾವಣೆಗಳಿಗೆ ನಿಷೇಧ ಹೇರಿದ್ದರು. ಈಗ ಮತ್ತೆ ಈ ಚುನಾವಣೆಗಳನ್ನು ನಡೆಸಲು ಸಿದ್ದರಾಮಯ್ಯ ಅವರ ಸರ್ಕಾರ ಉತ್ಸುಕತೆ ತೋರಿದೆ. ವಿದ್ಯಾರ್ಥಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಕೂಡ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಇದರ ಬೆನ್ನಲ್ಲೇ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಮೊದಲಾದವರು ಚುನಾವಣೆ ನಡೆಸುವಂತೆ ಪಕ್ಷವನ್ನು ಒತ್ತಾಯಿಸಿದ್ದರು.

ಈ ಆಶಯವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವುದು ಅವಶ್ಯವಿದೆ ಎಂದು ಪ್ರತಿಪಧಿಸಿರುವ ಮುಖ್ಯಮಂತ್ರಿ ಅವರು, ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಅಭಿಪ್ರಾಯ ಪಡೆದಿದ್ದರು. ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲ ಕುಲಪತಿಗಳು ಕ್ಯಾಂಪಸ್‌ಗೆ ಚುನಾವಣೆ ಬೇಡ, ಅದು ಪಕ್ಷೇತರ ಚುನಾವಣೆಯಾಗಿರುವುದಿಲ್ಲ. ಕ್ಯಾಂಪಸ್‌ಗೂ ಪಕ್ಷಾಧಾರಿತ ರಾಜಕೀಯ ಪ್ರವೇಶಿಸುತ್ತದೆ. ಕ್ಯಾಂಪಸ್‌ನಲ್ಲಿ ಈಗಲೇ ಬಹಳಷ್ಟು ಸಮಸ್ಯೆಗಳಿವೆ.

ಚುನಾವಣೆಯಿಂದ ಇನ್ನಷ್ಟು ಸಮಸ್ಯೆ ಹೆಚ್ಚಾಗಬಹುದು. ಅಲ್ಲದೆ, ಕಾಲಮಿತಿಯಲ್ಲಿ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ ಶೈಕ್ಷಣಿಕ ಚುಟವಟಿಕೆಗೂ ಸಮಸ್ಯೆ ಆಗಬಹುದು ಎಂದು ಹೇಳಿದ್ದರು. ಇನ್ನು ಕೆಲವರು, ಇತ್ತೀಚೆಗೆ ಯುವ ಜನರಲ್ಲಿ ರಾಜಕೀಯ ಪ್ರಜ್ಞೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ನಾಯಕತ್ವದ ಬೆಳವಣಿಗೆ ಕಡಿಮೆಯಾಗುತ್ತಿದ್ದು ಕಾಲಮಿತಿ ಹಾಗೂ ನಿಯಮಾವಳಿಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಚುನಾವಣೆ ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಿದ್ಯೆ ಯಾರೂ ಕದಿಯಲಾಗದ ಆಸ್ತಿ
ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಗುರಿ