ರಾಜ್ಯದಲ್ಲಿರುವ 2 ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಶೀಘ್ರ - ‘ಒಂದು ರಾಜ್ಯ-ಒಂದು ಗ್ರಾಮೀಣ ಬ್ಯಾಂಕ್‌’ ನೀತಿ

ಸಾರಾಂಶ

‘ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌’ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಶೀಘ್ರದಲ್ಲೇ ಜಾರಿಗೆ ತರಲಿದೆ. ಅದರಂತೆ ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಂಡು ಒಂದೇ ಆಗಲಿವೆ.

ನವದೆಹಲಿ: ‘ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌’ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಶೀಘ್ರದಲ್ಲೇ ಜಾರಿಗೆ ತರಲಿದೆ. ಅದರಂತೆ ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ವಿಲೀನಗೊಂಡು ಒಂದೇ ಆಗಲಿವೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಕಾರ್ಯಾಚರಣೆಯ ದಕ್ಷತೆ ಹೆಚ್ಚಳ ಮತ್ತು ವೆಚ್ಚದ ಸಾರ್ವತ್ರೀಕರಣ ಹಾಗೂ ಹಾಲಿ ಇರುವ 42 ಆರ್‌ಆರ್‌ಬಿಗಳ ಸಂಖ್ಯೆಯನ್ನು 28ಕ್ಕಿಳಿಸುವ ಉದ್ದೇಶದಿಂದ ಸರ್ಕಾರ ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಎಂಬ ಯೋಜನೆ ಜಾರಿಗೆ ತರಲು ಉದ್ದೇಶಿಸಿದೆ.

ಈಗಾಗಲೇ ಬ್ಯಾಂಕುಗಳ ಸಂಖ್ಯೆ ಕಡಿತಕ್ಕೆ ಸಂಬಂಧಿಸಿದ ಕೆಲಸ-ಕಾರ್ಯಗಳು ಪೂರ್ಣಗೊಂಡಿವೆ. ವಿಲೀನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ಸಚಿವಾಲಯದ ಪ್ರಕಾರ ಒಟ್ಟು 15 ಆರ್‌ಆರ್‌ಬಿಗಳನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ. ಆಂಧ್ರಪ್ರದೇಶವು ಅತಿಹೆಚ್ಚು ಅಂದರೆ ನಾಲ್ಕು ಆರ್‌ಆರ್‌ಬಿಗಳನ್ನು ಹೊಂದಿದ್ದು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ತಲಾ ಮೂರು, ಬಿಹಾರ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನ ತಲಾ ಎರಡು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಹೊಂದಿವೆ. ವಿಲೀನಕ್ಕೂ ಮುನ್ನ ಆರ್‌ಆರ್‌ಬಿಗಳಿಗೆ ಹಣಕಾಸು ಮರುಪೂರಣ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

Share this article