ಪೀಣ್ಯದಲ್ಲಿ ಶೀಘ್ರವೇ ದಕ್ಷಿಣ ಭಾರತದ ಮೊದಲ ಎನ್ಎಸ್‌ಐಸಿ ಶಾಖೆ ಆರಂಭ: ಶೋಭಾ ಕರಂದ್ಲಾಜೆ

Published : May 31, 2025, 09:43 AM IST
Shobha karandlaje

ಸಾರಾಂಶ

ಪೀಣ್ಯದಲ್ಲಿ ಶೀಘ್ರವೇ ದಕ್ಷಿಣ ಭಾರತದ ಮೊದಲ ಎನ್ಎಸ್‌ಐಸಿ ಶಾಖೆ ಆರಂಭ: ಶೋಭಾ ಕರಂದ್ಲಾಜೆ

 ಬೆಂಗಳೂರು : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯೋಗಿಗಳಲ್ಲಿ ಕೌಶಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ಕಾರ್ಪೊರೇಶನ್‌(ಎನ್‌ಎಸ್‌ಐಸಿ) ಶಾಖೆ ಆರಂಭಿಸಲಾಗುವುದು ಎಂದು ಕೇಂದ್ರ ಅತಿಸೂಕ್ಷ್ಮ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಷ್ಯಾ ಖಂಡದಲ್ಲೇ ಅತಿಹೆಚ್ಚು ಎಂಎಸ್‌ಎಂಇ ಕೈಗಾರಿಕೆಗಳಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಎನ್‌ಎಸ್‌ಐಸಿ ಶಾಖೆ ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಶಾಖೆ ಆರಂಭಿಸಲು ರಾಜ್ಯ ಸರ್ಕಾರ ಜಾಗ ಸಹ ನೀಡಿದ್ದು, ಶೀಘ್ರದಲ್ಲೇ ದಕ್ಷಿಣ ಭಾರತದ ಮೊದಲ ಎನ್‌ಎಸ್ಐಸಿ ಶಾಖೆ ಆರಂಭಿಸುವುದಾಗಿ ತಿಳಿಸಿದರು.

ಎನ್‌ಎಸ್ಐಸಿ ದೆಹಲಿ ಕೇಂದ್ರವು ಉದ್ಯೋಗಿಗಳಲ್ಲಿ ಕೆಲಸ ನಿರ್ವಹಣೆ, ಕೈಗಾರಿಕೆ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ ಮತ್ತು ತಂತ್ರಜ್ಞಾನ ಅಳವಡಿಕೆಯಂತಹ ಕೌಶಲ ವೃದ್ಧಿಸುವ ತರಬೇತಿ ನೀಡುತ್ತಿದೆ. ದಕ್ಷಿಣ ಭಾರತದಲ್ಲಿಯೂ ಈ ಮಾದರಿಯ ಸಂಸ್ಥೆಯ ಅಗತ್ಯ ಮನಗಂಡು ಇದೀಗ ಪೀಣ್ಯ ಕೈಗಾರಿಕಾ ಪ್ರದೇಶ ಆಯ್ಕೆ ಮಾಡಲಾಗಿದೆ ಎಂದರು.

ಎಂಎಸ್‌ಎಂಇಗಳಲ್ಲಿ 26 ಕೋಟಿ ಉದ್ಯೋಗ:

ದೇಶದಲ್ಲಿ ಕೃಷಿ ಬಳಿಕ ಅತಿಹೆಚ್ಚು ಉದ್ಯೋಗ ನೀಡುತ್ತಿರುವುದು ಎಂಎಸ್‌ಎಂಇ ಕೈಗಾರಿಕಾ ವಲಯ. ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಇಲಾಖೆ ಸಾಕಷ್ಟು ಪ್ರಗತಿ ಸಾಧಿಸಿದೆ. ಕೃಷಿ ವಲಯ ದೇಶದ ಸುಮಾರು 50 ಕೋಟಿ ಮಂದಿಗೆ ಉದ್ಯೋಗ ನೀಡಿದ್ದರೆ, ಎಂಎಸ್‌ಎಂಇ ವಲಯ ಸುಮಾರು 26 ಕೋಟಿ ಮಂದಿಗೆ ಉದ್ಯೋಗ ನೀಡಿದೆ ಎಂದರು.

ಕೃಷಿ ವಲಯ ದೇಶದ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡಿದರೆ, ಎಂಎಸ್ಎಂಇ ವಲಯ ಶೇ.30ರಷ್ಟು ಕೊಡುಗೆ ನೀಡುತ್ತಿದೆ. ಬೃಹತ್‌ ಕೈಗಾರಿಕೆಗಳು, ಮ್ಯಾನಿಫ್ಯಾಕ್ಚರಿಂಗ್‌ ಕೈಗಾರಿಗಳು, ಡಿಫೆನ್ಸ್‌, ಏರೋ ನಾಟಿಕಲ್‌, ಆಟೋ ಮೊಬೈಲ್‌ ಸೇರಿದಂತೆ ವಿವಿಧ ಕೈಗಾರಿಕೆಗಳು ಈ ಎಂಎಸ್‌ಎಂಇ ಕೈಗಾರಿಕೆಗಳ ಕಚ್ಚಾ ವಸ್ತುಗಳನ್ನು ಅವಲಂಬಿಸಿವೆ. ದೇಶದ ಒಟ್ಟು ರಫ್ತಿನಲ್ಲಿ ಎಂಎಸ್‌ಎಂಇ ವಲಯವು ಶೇ.40ರಷ್ಟು ಕೊಡುಗೆ ನೀಡುತ್ತಿದೆ. ಈ ವಲಯದಲ್ಲಿ ಸಾಕಷ್ಟು ಉದ್ಯೋಗಿಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.

ಎಲ್ಲಾ ಕಾರ್ಮಿಕರಿಗೂ ಇಪಿಎಫ್‌, ಇಎಸ್‌ಐ:

ಸದ್ಯ ಶೇ.10ರಷ್ಟಿರುವ ಸಂಘಟಿತ ಕಾರ್ಮಿಕರ ಇಪಿಎಫ್‌, ಇಎಸ್‌ಐ ಸೌಲಭ್ಯಗಳ ಬಗ್ಗೆ ಮಾತನಾಡುತ್ತೇವೆ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಶೇ.90ರಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ಇಪಿಎಫ್‌, ಇಎಸ್ಐ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ಮಾಡಲು ಚಿಂತಿಸಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ 7.1 ಕೋಟಿ ಜನರು ಇಪಿಎಫ್‌ಗೆ ಸೇರ್ಪಡೆಯಾಗಿದ್ದಾರೆ. ಅಂದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದರ್ಥ. ವಿದೇಶಿ ಕಂಪನಿಗಳು ಕೌಶಲವುಳ್ಳ ನೌಕರರನ್ನು ಎದುರು ನೋಡುತ್ತಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳ ಅಗತ್ಯ ಆಧರಿಸಿ ಕಾರ್ಮಿಕರಿಗೆ ಕೌಶಲಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಾಲ್ಕು ಕಾರ್ಮಿಕ ಕೋಡ್‌ ಜಾರಿಗೆ ಕೇಂದ್ರ ತೀರ್ಮಾನ

ಕಾರ್ಮಿಕ ಇಲಾಖೆಯಲ್ಲಿ 29 ಲೇಬರ್‌ ಕಾಯ್ದೆಗಳಿವೆ. ಇವು ಬ್ರಿಟಿಷರ ಕಾಲದ ಕಾಯ್ದೆಗಳಾಗಿವೆ. ಹೀಗಾಗಿ ಈ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನಾಲ್ಕು ಕಾರ್ಮಿಕ ಕೋಡ್‌ಗಳಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಬಹುತೇಕ ರಾಜ್ಯಗಳು ಸಕಾರಾತ್ಮಕ ಅಭಿಪ್ರಾಯ ತಿಳಿಸಿವೆ. ಕಾರ್ಮಿಕ ಯೂನಿಯನ್‌ಗಳಲ್ಲಿ ಸಣ್ಣ ಪ್ರಮಾಣದ ಗೊಂದಲಗಳಿದ್ದು, ಚರ್ಚೆ ಮುಖಾಂತರ ಆ ಗೊಂದಲಗಳನ್ನು ನಿವಾರಿಸಿ ಈ ವರ್ಷದೊಳಗೆ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಸಂಸತ್‌ನಲ್ಲಿ ಮಂಡಿಸಿ ಜಾರಿಗೊಳಿಸುವುದಾಗಿ ಹೇಳಿದರು.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ