;Resize=(412,232))
ಲಿಂಗರಾಜು ಕೋರಾ
ಬೆಂಗಳೂರು : ಕನ್ನಡ ಭಾಷಾ ಬೋಧನೆ, ಪಠ್ಯಕ್ರಮದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ- ಸರಳೀಕರಣ ಆಗದಿರುವುದು, ಭಾಷಾ ಬೋಧಕರಿಗೆ ಸಿಗದ ಸೂಕ್ತ ತರಬೇತಿ ಹೀಗೆ ವಿವಿಧ ಕಾರಣಗಳಿಂದ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಹೆಚ್ಚಿನ ಮಕ್ಕಳು ಫೇಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ, ಇದು ಕನ್ನಡ ಭಾಷಾ ಕಲಿಕೆಯಿಂದ ಕನ್ನಡಿಗರ ಮಕ್ಕಳೇ ದೂರ ಸರಿಯುವಂತೆ ಮಾಡುತ್ತಿದೆ.
- ಇದು ನಾಡಿನ ವಿವಿಧ ಸಾಹಿತಿಗಳು, ತಜ್ಞರು, ಕನ್ನಡಪರ ಹೋರಾಟಗಾರರ ಅಭಿಪ್ರಾಯ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 19 ಸಾವಿರಕ್ಕೂ ಹೆಚ್ಚು ಮಕ್ಕಳು ಫೇಲಾಗಿರುವ ಸಂಬಂಧ ‘ಕನ್ನಡಪ್ರಭ’ ಶುಕ್ರವಾರ ಮುಖಪುಟದಲ್ಲಿ ಪ್ರಕಟಿಸಿದ ವಿಶೇಷ ವರದಿ ರಾಜ್ಯಾದ್ಯಂತ ಬಹಳ ವೈರಲ್ ಆಗಿದೆ. ಕನ್ನಡ ಭಾಷೆ ಕಲಿಕೆಗೆ ಇಂಥ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಚಳವಳಿಗಾರ ವಾಟಾಳ್ ನಾಗರಾಜು, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿ ವಿವಿಧ ತಜ್ಞರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಶಾಲಾ ಹಂತದಲ್ಲಿ ಮಕ್ಕಳು ಕನ್ನಡವನ್ನು ಸರಳವಾಗಿ, ಸುಲಭವಾಗಿ ಕಲಿಯಲು ಸರ್ಕಾರ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳೇನು, ಆಗಬೇಕಿರುವ ಆಮೂಲಾಗ್ರ ಬದಲಾವಣೆಗಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕನ್ನಡ ಪ್ರಾಧ್ಯಾಪಕರೂ ಆದ ಡಾ.ಪುರುಷೋತ್ತಮ ಬಿಳಿಮಲೆ, ಕರ್ನಾಟಕದಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲೇ ಹೆಚ್ಚಿನ ಮಕ್ಕಳು ಫೇಲಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಭಾಷೆ ಹೇಳಿಕೊಡಲು ಈಗ ಅನುಸರಿಸುತ್ತಿರುವ ವಿಧಾನ ತೀರಾ ಹಳೆಯದು. ಸುಮಾರು 50 ವರ್ಷ ಹಿಂದಿನದು ಎನ್ನಬಹುದು.
ಇದು ಬದಲಾವಣೆ ಆಗಬೇಕು. ಈಗಿನ ಕಾಲಕ್ಕೆ ತಕ್ಕಂತೆ ಭಾಷೆಯನ್ನು ಸರಳವಾಗಿ, ಸುಲಭವಾಗಿ ಕಲಿಸುವ ವಿಧಾನ ತರಬೇಕಾಗುತ್ತದೆ. ಎರಡನೆಯದು ಭಾಷೆಯನ್ನು ಭಾಷೆಯಾಗಿ ಕಲಿಸುವ ಬದಲು ಶಾಲಾ ಹಂತದಲ್ಲೇ ಸಾಹಿತ್ಯವನ್ನು ಕಲಿಸುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾ ಪಠ್ಯಕ್ರಮದಲ್ಲಿ ಸರಳೀಕರಣ ಆಗಬೇಕು. ಬಹಳ ವರ್ಷಗಳಿಂದ ಭಾಷೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸ ಕಂಡುಕೊಳ್ಳದೆ, ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿತು ಮುಂದೆ ಉನ್ನತ ಶಿಕ್ಷಣದಲ್ಲಿ ಸಾಹಿತ್ಯದ ಮಟ್ಟಕ್ಕೆ ಮಕ್ಕಳು ಅಭ್ಯಾಸ ಮಾಡುವಂತಾಗಬೇಕು ಎಂದು ಹೇಳಿದ್ದಾರೆ.
ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು ಹೇಳುವ ಪ್ರಕಾರ, ಶಿಕ್ಷಕರ ಕೊರತೆಯಿಂದ ಒಬ್ಬರೇ ಶಿಕ್ಷಕರು ಎಲ್ಲ ವಿಷಯಗಳನ್ನೂ ಬೋಧಿಸುವ ಸ್ಥಿತಿ ನಿರ್ಮಾಣ ಆಗಿರುವುದರಿಂದ, ಸರ್ಕಾರಿ ಅಥವಾ ಕನ್ನಡದ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯದ ಬೋಧನೆಗೆ ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಮತ್ತೊಂದೆಡೆ ನೇಮಕಾತಿ ಬಳಿಕ ಶಿಕ್ಷಕರಿಗೆ ಸೂಕ್ತ ತರಬೇತಿಯೂ ದೊರೆಯುತ್ತಿಲ್ಲ.
ಕನ್ನಡ ಭಾಷಾ ಕಲಿಕಾ ವಿಧಾನದಲ್ಲೇ ಮೂಲ ದೋಷವಿದೆ. ಕನ್ನಡ ಸಾಹಿತ್ಯ, ಪಾಂಡಿತ್ಯ ಹೀಗೆ ಬೇರೆ ಬೇರೆ ವಿಚಾರಗಳನ್ನು ಉನ್ನತ ಶಿಕ್ಷಣದಲ್ಲಿ ಮಕ್ಕಳು ಐಚ್ಛಿಕ ಕನ್ನಡದಲ್ಲಿ ಓದುತ್ತಾರೆ. ಅಂತಹ ಪಠ್ಯವನ್ನು ಶಾಲಾ ಹಂತದಲ್ಲೇ ಇಡದೆ ಕನ್ನಡದ ವಾಕ್ಯ ರಚನೆ, ವ್ಯಾಕರಣ, ತಪ್ಪಿಲ್ಲದೆ ಸ್ಪಷ್ಟವಾಗಿ ಬರೆಯುವುದು, ಮಾತನಾಡುವುದು ಕಲಿಸಲು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೆ, 1ರಿಂದ 7ರವರೆಗಿನ ಕನ್ನಡ ಭಾಷಾ ಪಠ್ಯ ರಚನೆಗೆ ಒಂದು ಸಮಿತಿ, 8ರಿಂದ 10ಕ್ಕೆ ಒಂದು ಕಮಿಟಿ, ಪಿಯುಸಿಗೆ ಬೇರೆ ಸಮಿತಿ. ಹೀಗಾದಾಗ ಭಾಷಾ ಕಲಿಕೆಯ ಪಠ್ಯಗಳಲ್ಲಿ ನಿರಂತರತೆ, ಒಂದಕ್ಕೊಂದು ಸಂಬಂಧ ಬಲ್ಲದಂತಾಗುತ್ತದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಕ್ಕಳ ಮಾತೃಭಾಷೆ ಕನ್ನಡ ಅಲ್ಲ. ತುಳು, ಬ್ಯಾರಿ, ಅರೆಭಾಷೆ ಹೀಗೆ ಬೇರೆ ಬೇರೆ ಮಾತನಾಡುತ್ತಾರೆ. ಆದರೆ, ಕನ್ನಡದಲ್ಲಿ ಅವರ ಶೇ.93ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ಮಂಡ್ಯ, ಮೈಸೂರು ಭಾಗದ ಮಕ್ಕಳ ಮಾತೃಭಾಷೆ ಕನ್ನಡವೇ ಆದರೂ ಇಲ್ಲಿನ ಮಕ್ಕಳ ತೇರ್ಗಡೆ ಪ್ರಮಾಣ ಶೇ.68ಕ್ಕಿಂತ ಹೆಚ್ಚಿಲ್ಲ. ಇದು ಬೋಧನಾ ವಿಧಾನ ಮತ್ತು ಪಠ್ಯಪುಸ್ತಕದಲ್ಲಿ ಸಮಸ್ಯೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎನ್ನುವುದನ್ನು ಸೂಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ವರದಿ ನೋಡಿ ಕಣ್ಣಲ್ಲಿ ನೀರು ಬಂತು: ವಾಟಾಳ್
ಕನ್ನಡದ ಕುಡಿಗಳು ಕನ್ನಡ ಭಾಷೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವ ವರದಿ ನೋಡಿ ಕನ್ನಡಕ್ಕೆ ಇದೆಂತಹ ದುರ್ದೈವದ ಸಂಗತಿ ಬಂತು ಎಂದು ಕಣ್ಣಲ್ಲಿ ನೀರು ಬಂತು ಎನ್ನುತ್ತಾರೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್.
ಇದು ಕೇವಲ ಕನ್ನಡದ ಮಕ್ಕಳ ಅನುತ್ತೀರ್ಣ ಅಲ್ಲ, ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಇಲಾಖಾ ಅಧಿಕಾರಿಗಳೂ ಫೇಲಾಗಿದ್ದಾರೆ ಎಂದರೆ ತಪ್ಪಿಲ್ಲ. ಇದನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ಭಾರೀ ಹೋರಾಟ ರೂಪಿಸಲು ತಯಾರಾಗುತ್ತಿದ್ದೇವೆ. ಅ, ಆ, ಇ, ಈ ಮೆರವಣಿಗೆ ನಡೆಸಲು ಯೋಚಿಸಿದ್ದೇವೆ. ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ತರಲಿ, ಕನ್ನಡಕ್ಕೆ, ಕನ್ನಡದ ಮಕ್ಕಳಿಗೆ ಅನ್ಯಾಯ ಆಗದಂತೆ, ಕನ್ನಡ ಕಲಿಯುವುದು ಕಷ್ಟವಾಗದಂತೆ ಸರಳವಾಗಿ ಕಲಿಯಲು ಏನೆಲ್ಲಾ ಸುಧಾರಣೆಗಳು ಬೇಕೋ ಮಾಡಲಿ. ಕನ್ನಡ ಭಾಷಾ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ತರಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಕನ್ನಡ ಪಠ್ಯ ಸರಳೀಕರಣಕ್ಕೆ ಶೀಘ್ರ ಸರ್ಕಾರಕ್ಕೆ ವರದಿ
ಕನ್ನಡ ಭಾಷಾ ವಿಷಯದ ಪಠ್ಯಪುಸ್ತಕ 100 ಪುಟ ಇದ್ದರೆ ಸಂಸ್ಕೃತ 20 ಪುಟ, ಹಿಂದಿ 25 ಪುಟ ಇದೆ. ಈ ತಾರತಮ್ಯ ಏಕೆ? ಹೀಗೆ ಮಾಡಿದಾಗ 100 ಪುಟ ಓದುವ ಒತ್ತಡ ಏಕೆ ಎಂದು ಕನ್ನಡದ ಬದಲು ಬೇರೆ ಭಾಷೆ ವ್ಯಾಸಂಗದ ಕಡೆ ವಾಲುತ್ತಾರೆ. ಹಾಗಾಗಿ ಕನ್ನಡ ಭಾಷಾ ಬೋಧನೆಯಲ್ಲಿ ಬದಲಾವಣೆ ಮತ್ತು ಪಠ್ಯ ಸರಳೀಕರಿಸದಿದ್ದರೆ ಕನ್ನಡ ಇನ್ನಷ್ಟು ಹಿಂದೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹೈಸ್ಕೂಲ್ ಶಿಕ್ಷಕರಿಂದಲೇ ಒಂದು ವರದಿ ತಯಾರಿಸಿದ್ದು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
- ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಏನು ಮಾಡಬೇಕು?
1. ಮೊದಲನೆಯದಾಗಿ ಭಾಷೆ ಹೇಳಿಕೊಡಲು ಈಗ ಅನುಸರಿಸುತ್ತಿರುವ ವಿಧಾನ ತೀರಾ ಹಳೆಯದು. ಸುಮಾರು 50 ವರ್ಷ ಹಿಂದಿನದು ಎನ್ನಬಹುದು. ಸರಳವಾಗಿ, ಸುಲಭವಾಗಿ ಕಲಿಸುವ ವಿಧಾನ ತರಬೇಕು
2. ಭಾಷೆಯನ್ನು ಭಾಷೆಯಾಗಿ ಕಲಿಸುವ ಬದಲು ಶಾಲಾ ಹಂತದಲ್ಲೇ ಸಾಹಿತ್ಯವನ್ನು ಕಲಿಸುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾ ಪಠ್ಯಕ್ರಮದಲ್ಲಿ ಸರಳೀಕರಣ ಆಗಬೇಕು.
3. ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿತು ಮುಂದೆ ಉನ್ನತ ಶಿಕ್ಷಣದಲ್ಲಿ ಸಾಹಿತ್ಯದ ಮಟ್ಟಕ್ಕೆ ಮಕ್ಕಳು ಅಭ್ಯಾಸ ಮಾಡುವಂತಾಗಬೇಕು
4. ಕನ್ನಡ ಸಾಹಿತ್ಯ, ಪಾಂಡಿತ್ಯದಂತಹ ಪಠ್ಯವನ್ನು ಶಾಲಾ ಹಂತದಲ್ಲೇ ಇಡದೆ ಕನ್ನಡದ ವಾಕ್ಯ ರಚನೆ, ವ್ಯಾಕರಣ, ತಪ್ಪಿಲ್ಲದೆ ಸ್ಪಷ್ಟವಾಗಿ ಬರೆಯುವುದು, ಮಾತನಾಡುವುದು ಕಲಿಸಲು ಹೆಚ್ಚು ಒತ್ತು ನೀಡಬೇಕು
ವರದಿ ನೋಡಿ
ಕಣ್ಣೀರು ಬಂತು
ಕನ್ನಡದ ಕುಡಿಗಳು ಕನ್ನಡ ಭಾಷೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವ ವರದಿ ನೋಡಿ ಕನ್ನಡಕ್ಕೆ ಇದೆಂತಹ ದುರ್ದೈವದ ಸಂಗತಿ ಬಂತು ಎಂದು ಕಣ್ಣಲ್ಲಿ ನೀರು ಬಂತು. ನಾವು ಇಲ್ಲಿಗೇ ಬಿಡುವುದಿಲ್ಲ. ಭಾರೀ ಹೋರಾಟ ರೂಪಿಸಲು ತಯಾರಾಗುತ್ತಿದ್ದೇವೆ. ಅ, ಆ, ಇ, ಈ ಮೆರವಣಿಗೆ ನಡೆಸಲು ಯೋಚಿಸಿದ್ದೇವೆ.
-ವಾಟಾಳ್ ನಾಗರಾಜು, ಕನ್ನಡ ಹೋರಾಟಗಾರ
ನಮ್ಮಲ್ಲಿ ಮಾತ್ರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 19000ಕ್ಕೂ ಅಧಿಕ ಮಕ್ಕಳು ಕನ್ನಡಲ್ಲೇ ಅನುತ್ತೀರ್ಣರಾಗಿರುವ ಕುರಿತು ಕನ್ನಡಪ್ರಭ ನಿನ್ನೆ ವಿಶೇಷ ವರದಿ ಪ್ರಕಟಿಸಿತ್ತು.