ಬೆಂಗಳೂರು : ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಗುರುವಾರ ಕರಡು ನಿಯಮಾವಳಿ ಪ್ರಕಟಿಸಿದ್ದು, ಎಸ್ಸೆಸ್ಸೆಲ್ಸಿ ಪಾಸಾಗಲು ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಶೇ.33 ಅಂಕ ಪಡೆದರೆ ಸಾಕೆಂದು ಹೇಳಿದೆ. ಅರ್ಥಾತ್ ಪ್ರತಿ ವಿಷಯದಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ ಶೇ.20ಕ್ಕೆ 20 ಅಂಕ ಪಡೆದರೆ ಉಳಿದ 13 ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದರೂ ವಿದ್ಯಾರ್ಥಿ ಪಾಸ್!
ಅಲ್ಲದೆ, ಒಟ್ಟಾರೆ ಆರೂ ವಿಷಯಗಳಿಂದ 625ಕ್ಕೆ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಒಂದು ವೇಳೆ ಬೇರೆ ವಿಷಯದಲ್ಲಿ ಶೇ.30ರಷ್ಟು ಅಂಕ ಪಡೆದರೂ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈವರೆಗೆ ಉತ್ತೀರ್ಣಕ್ಕೆ ಒಟ್ಟಾರೆ ಶೇ.35 ಅಂಕ ಪಡೆಯುವುದು ಕಡ್ಡಾಯವಾಗಿತ್ತು. ಈಗ ಅದನ್ನು ಶೇ.33ಕ್ಕೆ ಇಳಿಸಲಾಗಿದೆ. ಅಲ್ಲದೆ, ಈವರೆಗೆ ಆಂತರಿಕ ಪರೀಕ್ಷೆಯಲ್ಲಿ ಪಡೆದ ಪೂರ್ಣ ಅಂಕಗಳನ್ನು ಉತ್ತೀರ್ಣಕ್ಕೆ ಪರಿಗಣಿಸುತ್ತಿರಲಿಲ್ಲ. ಅಂದರೆ 20ಕ್ಕೆ 20 ಅಂಕ ಪಡೆದರೆ ಅದರಲ್ಲಿ 7 ಅಂಕಗಳನ್ನು ಮಾತ್ರ ಉತ್ತೀರ್ಣಕ್ಕೆ ಬೇಕಿರುವ ಲಿಖಿತ ಪರೀಕ್ಷೆಯ ಅಂಕಗಳೊಂದಿಗೆ ಪರಿಗಣಿಸಲಾಗುತ್ತಿತ್ತು. ಹೀಗಾಗಿ ಲಿಖಿತ ಪರೀಕ್ಷೆಯಲ್ಲಿ ಶೇ.28 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿತ್ತು.
ಸಿಬಿಎಸ್‌ಇ ಮಾದರಿ ಪರೀಕ್ಷೆ:
ಇದರೊಂದಿಗೆ ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪ್ರೌಢ ಶಾಲೆಗಳೂ ಇನ್ನು ಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ರಾಜ್ಯ ಪಠ್ಯಕ್ರಮದ ಪರೀಕ್ಷಾ ವ್ಯವಸ್ಥೆ ಸಿಬಿಎಸ್‌ಇಗೆ ಹೋಲಿಸಿದರೆ ಬಲು ಕಠಿಣ. ಹಾಗಾಗಿ ನಮ್ಮ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂಬ ಬಹುದಿನಗಳಿಂದ ಶಾಲಾ ಶಿಕ್ಷಕರು, ಪೋಷಕರು, ಶಿಕ್ಷಣ ಸಂಸ್ಥೆಗಳಿಂದ ಕೇಳಿಬರುತ್ತಿದ್ದ ಕೂಗಿಗೆ ಬೆಲೆ ಸಿಕ್ಕಂತಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲಾವಣೆ ಸಂಬಂಧ ಗುರುವಾರ ಕರಡು ನಿಯಮಾವಳಿ ಪ್ರಕಟಿಸಿದ್ದು, ಇದು ಪ್ರಭಾವ ಬೀರುವ ಎಲ್ಲಾ ವ್ಯಕ್ತಿ, ಸಂಸ್ಥೆಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ನಿಯಮಾವಳಿ ಪ್ರಕಟವಾದ 15 ದಿನಗಳ ಅವಧಿ ಮುಗಿದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಒಟ್ಟು ಪರೀಕ್ಷಾ ಅಂಕದಲ್ಲಿ ಬದಲಾವಣೆ ಇಲ್ಲ:
ಈವರೆಗೆ ಕನ್ನಡ ಸೇರಿ ಪ್ರಥಮ ಭಾಷಾ ವಿಷಯಕ್ಕೆ125 ಅಂಕಗಳಿಗೆ(100 ಅಂಕಗಳಿಗೆ ಲಿಖಿತ ಪರೀಕ್ಷೆ-25 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಉಳಿದ ದ್ವಿತೀಯ ಹಾಗೂ ತೃತೀಯ ಭಾಷೆ ಹಾಗೂ ಕೋರ್ ಸಬ್ಜೆಕ್ಟ್‌ಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕಗಳಿಗೆ(80 ಅಂಕಗಳಿಗೆ ಲಿಖಿತ ಪರಿಕ್ಷೆ-20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಈಗಲೂ ವಿಷಯವಾರು ಪರೀಕ್ಷೆಗೆ ಇದೇ ಅಂಕಗಳೇ ಮುಂದುವರೆಯಲಿವೆ. ಆದರೆ, ಪಾಸಾಗಲು ಬೇಕಿರುವ ಅಂಕ ಮಾತ್ರ ಬದಲಾವಣೆ ಆಗಲಿದೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹಲವರ ಆಕ್ಷೇಪದ ಹಿನ್ನೆಲೆಯಲ್ಲಿ ಕನ್ನಡದ ಪರೀಕ್ಷಾ ಅಂಕವನ್ನು 125 ಎಂದೇ ಮುಂದುವರಿಸಲಾಗಿದೆ.
ಕನ್ನಡದಲ್ಲಿ ಪಾಸಾಗಲು ಮೊದಲು 44 ಅಂಕ(ಶೇ.35) ಪಡೆಯಬೇಕಿತ್ತು. ಇದಕ್ಕೆ ಲಿಖಿತ ಪರೀಕ್ಷೆಯಲ್ಲಿ 100ಕ್ಕೆ ಕನಿಷ್ಠ 35 ಅಂಕ ಮತ್ತು ಆಂತರಿಕ ಮೌಲ್ಯಮಾಪನದಲ್ಲಿ 25ಕ್ಕೆ ಕನಿಷ್ಠ 9 ಅಂಕ ಪಡೆಯಬೇಕಿತ್ತು. ಆದರೆ, ಈಗ ಪಾಸಾಗಲು ಒಟ್ಟಾರೆ 42 ಅಂಕ(ಶೇ.33) ಪಡೆದರೆ ಸಾಕು. ಆಂತರಿಕ ಮೌಲ್ಯಮಾಪನದಲ್ಲಿ ಒಂದು ವೇಳೆ 25ಕ್ಕೆ 25 ಅಂಕಗಳನ್ನೂ ಪಡೆದರೆ ಲಿಖಿತ ಪರೀಕ್ಷೆಯಲ್ಲಿ 100ಕ್ಕೆ 17 ಅಂಕ ಪಡೆದರೂ ಪಾಸ್ ಆಗಬಹುದು.
ಅದೇ ರೀತಿ ಉಳಿದ ವಿಷಯಗಳಲ್ಲಿ ಪಾಸ್ ಆಗಲು 35 ಅಂಕ ಪಡೆಯಬೇಕಿತ್ತು. ಇದಕ್ಕೆ ಲಿಖಿತ ಪರೀಕ್ಷೆಯಲ್ಲಿ 100ಕ್ಕೆ ಕನಿಷ್ಠ 28 ಅಂಕ ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ ಕನಿಷ್ಠ 7 ಅಂಕ ತೆಗೆಯಬೇಕಿತ್ತು. ಈಗ ಪಾಸ್ ಅಂಕ 33ಕ್ಕೆ ಇಳಿಯಲಿದೆ. ಈ 33 ಅಂಕಗಳನ್ನು ಆಂತರಿಕ ಮೌಲ್ಯಮಾಪನದಲ್ಲಿ ಒಂದು ವೇಳೆ 20ಕ್ಕೆ 20 ಅಂಕಗಳೂ ಬಂದರೆ, ಉಳಿದ 13 ಅಂಕಗಳು ಲಿಖಿತ ಪರೀಕ್ಷೆಯಲ್ಲಿ ಬಂದರೂ ಪಾಸ್ ಆಗಬಹುದು.
- ರಾಜ್ಯ ಸರ್ಕಾರದಿಂದ ಕರಡು ನಿಯಮಾವಳಿ ಪ್ರಕಟ
- ಆಕ್ಷೇಪಣೆಗೆ ಆಹ್ವಾನ । 15 ದಿನಗಳ ಬಳಿಕ ಅನುಷ್ಠಾನ
- ಶೇ.20ರಷ್ಟು ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಇರುತ್ತದೆ. ಉಳಿದ ಶೇ.80 ಅಂಕಕ್ಕೆ ಲಿಖಿತ ಪರೀಕ್ಷೆ
- ಆಂತರಿಕ ಮೌಲ್ಯಮಾಪನದಲ್ಲಿ 20 ಅಂಕ ಗಳಿಸಿ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಗಳಿಸಿದರೂ ಪಾಸಾಗಬಹುದು
- 625ಕ್ಕೆ 206 ಅಂಕ ಗಳಿಸಿದ ವಿದ್ಯಾರ್ಥಿ, ಬೇರೆ ವಿಷಯದಲ್ಲಿ ಶೇ.30ಕ್ಕಿಂತ ಕಡಿಮೆ ಅಂಕ ಪಡೆದರೂ ಇನ್ನು ಪಾಸ್
- ಸಿಬಿಎಸ್‌ಇ ಮಾದರಿ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ. ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪ ಆಹ್ವಾನ