ಕಾಲ್ತುಳಿತ: ಆಸ್ಪತ್ರೆಗೆ ದಾಖಲಾದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರ

Published : Jun 06, 2025, 06:16 AM IST
Police lathi-charge RCB fans as stampede breaks out in Chinnswamy stadium

ಸಾರಾಂಶ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಆರ್‌ಸಿಬಿ ಗೆಲುವಿನ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಗಾಯಗೊಂಡಿರುವ ಕೆಲವರಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಆರ್‌ಸಿಬಿ ಗೆಲುವಿನ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಗಾಯಗೊಂಡಿರುವ ಕೆಲವರಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಮಧ್ಯೆ, ಪೋರ್ಟೀಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಶಾಲ್‌ ಎಂಬ 18 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ. ನನ್ನ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪೋರ್ಟೀಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆದರೆ, ಈವರೆಗೂ ಸರ್ಕಾರದ ಯಾವೊಬ್ಬ ಅಧಿಕಾರಿ, ಪ್ರತಿನಿಧಿಗಳೂ ಇತ್ತ ತಿರುಗಿ ನೋಡಿಲ್ಲ ಎಂದು ವಿಶಾಲ್‌ ತಾಯಿ ಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾನಗರದ ಮೊಟ್ಟಪ್ಪ ಪಾಳ್ಯದ ನಿವಾಸಿ ವಿಶಾಲ್ ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ವಿಶಾಲ್ ಮನೆಯಲ್ಲೂ ಹೇಳದೆ ಸ್ನೇಹಿತರ ಜೊತೆ ಆರ್‌ಸಿಬಿ ವಿಜಯೋತ್ಸವ ನೋಡಲು ಬಂದಿದ್ದ. ಕಾಲ್ತುಳಿತದಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಪೋರ್ಟೀಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

- ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತ 

ಬೌರಿಂಗ್‌ ಆಸ್ಪತ್ರೆ, ವೈದೇಹಿ ಮಲ್ಯ, ಪೋರ್ಟೀಸ್‌ ಮತ್ತು ಮಣಿಪಾಲ್‌ ಆಸ್ಪತ್ರೆಗಳಲ್ಲಿ ಇನ್ನೂ ಹಲವು ಗಾಯಾಳುಗಳು, ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಕಾಲಿನ ಮೂಳೆ ಮುರಿದಿದ್ದ ಕೆ.ಆರ್‌.ಪುರ ನಿವಾಸಿ ವೇಣು ಎನ್ನುವವರಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯರು ಟಿಬಿಯಾ ಸರ್ಜರಿ ನಡೆಸಿದ್ದಾರೆ. ಇದೇ ತಿಂಗಳಲ್ಲಿ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೊರೇಷನ್‌ ಪ್ರವೇಶ ಪರೀಕ್ಷೆ(ಎನ್‌ಟಿಬಿಸಿ) ಬರೆಯಬೇಕಿದ್ದ ವೇಣು ಆರ್‌ಸಿಬಿ ವಿಜಯೋತ್ಸವಕ್ಕೆ ಬಂದಿದ್ದ ವೇಳೆ ನೂಕುನುಗ್ಗಲು ಉಂಟಾದಾಗ ಕಾಲಿನ ಮೂಳೆ ಮುರಿದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಬೌರಿಂಗ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಕೆಂಪರಾಜು, ಘಟನೆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ 18 ಜನರಲ್ಲಿ ಆರು ಮಂದಿ ಮೃತಪಟ್ಟಿದ್ದರು. ಉಳಿದ 12 ಜನ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದ ಒಂದಿಬ್ಬರನ್ನು ಬುಧವಾರವೇ ಮನೆಗೆ ಕಳುಹಿಸಲಾಗಿತ್ತು. 

ಇನ್ನು 10 ಜನರಿಗೆ ಚಿಕಿತ್ಸೆ ನೀಡಲಾಗಿತ್ತು. ಇದರಲ್ಲಿ ಮೂವರಿಗೆ ಕಾಲು ಮುರಿತವಾಗಿದೆ. ಅವರಲ್ಲಿ ಒಬ್ಬರು ಬೇರೆ ಆಸ್ಪತ್ರೆಗೆ ಹೋಗಿದ್ದಾರೆ. ಉಳಿದ ಇಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. 14 ವರ್ಷದ ಬಿಲಾಲ್‌ ಅನ್ನೋ ಹುಡುಗ ಮಕ್ಕಳ ವಿಭಾಗದಲ್ಲಿದ್ದಾನೆ. ಅವನ ಕಣ್ಣಿಗೆ ಸ್ವಲ್ಪ ಸಮಸ್ಯೆ ಆಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ. ಉಳಿದವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್