ದ್ವಿಭಾಷಾ ನೀತಿಯತ್ತ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ

Published : Mar 28, 2026, 03:28 AM IST
Madhu Bangarappa

ಸಾರಾಂಶ

ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ವಿಷಯಗಳಿಗೆ ಪ್ರಸಕ್ತ ಸಾಲಿನಿಂದ ಹೆಸರಿಗಷ್ಟೇ ಪರೀಕ್ಷೆ ಇರುತ್ತದೆ. ಆದರೆ ಪಾಸು, ಫೇಲು ಎನ್ನುವ ಮಾನದಂಡವಾಗಲಿ, ಅಂಕ ಆಧಾರಿತ ಫಲಿತಾಂಶವಾಗಲಿ ಇಲ್ಲ. ಬದಲಿಗೆ ಗ್ರೇಡಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.

  ಬೆಂಗಳೂರು : ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ವಿಷಯಗಳಿಗೆ ಪ್ರಸಕ್ತ ಸಾಲಿನಿಂದ ಹೆಸರಿಗಷ್ಟೇ ಪರೀಕ್ಷೆ ಇರುತ್ತದೆ. ಆದರೆ ಪಾಸು, ಫೇಲು ಎನ್ನುವ ಮಾನದಂಡವಾಗಲಿ, ಅಂಕ ಆಧಾರಿತ ಫಲಿತಾಂಶವಾಗಲಿ ಇಲ್ಲ. ಬದಲಿಗೆ ಗ್ರೇಡಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.

ನಗರದ ಕೆ.ಆರ್‌.ವೃತ್ತದ ಬಳಿ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಪರೀಕ್ಷಾ ವ್ಯವಸ್ಥೆಯಲ್ಲಿ ಈ ಬದಲಾ‍ವಣೆಗೆ ನಿರ್ಧರಿಸಲಾಗಿದೆ. ಇದೇ ಮಾ.31 ರಂದು ನಡೆಯಲಿರುವ ತೃತೀಯ ಭಾಷಾ ವಿಷಯಗಳ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಈವರೆಗೆ ಪ್ರಥಮ ಭಾಷೆ ಕನ್ನಡ 125, ದ್ವಿತೀಯ, ತೃತೀಯ ಭಾಷೆ ಹಾಗೂ ಇತರೆ ಮೂರು ವಿಷಯಗಳಿಗೆ ತಲಾ 100 ಅಂಕಗಳಂತೆ ಒಟ್ಟು 625 ಅಂಕಗಳ ಪರೀಕ್ಷೆ ನಡೆಸಲಾಗುತ್ತಿತ್ತು. ಇನ್ನು ಮುಂದೆ ತೃತೀಯ ಭಾಷೆ ವಿಷಯಗಳ ಪರೀಕ್ಷೆಗಳು ಅಂಕ ಆಧಾರಿತವಾಗಿರುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಷ್ಟೆ. ಪಾಸು, ಫೇಲು ಎಂಬುದು ಇರಲ್ಲ. ಬದಲಿಗೆ ಗ್ರೇಡಿಂಗ್‌ (ಉದಾಹರಣೆಗೆ- ಎ, ಬಿ, ಸಿ, ಡಿ) ಪದ್ಧತಿ ಇರುತ್ತದೆ. ಹಾಗಾಗಿ ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸುವ ಪ್ರಮೇಯವೇ ಬರುವುದಿಲ್ಲ. ಅಂಕಪಟ್ಟಿಯಲ್ಲಿ ಮಾತ್ರ ತೃತೀಯ ಭಾಷೆಯ ಫಲಿತಾಂಶ ಗ್ರೇಡಿಂಗ್‌ನಲ್ಲಿರುತ್ತದೆ ಎಂದರು.

ತ್ರಿಭಾಷಾ ಸೂತ್ರ ಬೇಕಿಲ್ಲ:

ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಅಗತ್ಯವಿಲ್ಲ. ಸರ್ಕಾರವೂ ಇದಕ್ಕೆ ಬದ್ಧವಾಗಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಹಿಂದಿ ಕಡ್ಡಾಯ ಪಾಸ್‌ ಮಾನದಂಡದ ಅವಶ್ಯಕತೆ ಇಲ್ಲ. ಹಾಗಾಗಿ ಈ ಮಾನದಂಡ ಕೈಬಿಟ್ಟು ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರ ಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ನನ್ನನ್ನು ಭೇಟಿ ಮಾಡಿ ಮನವಿ ಮಾಡಿದರು. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿ, ಅವರು ಕನ್ನಡಪರ ಸಂಘಟನೆಗಳ ಅಭಿಪ್ರಾಯ ಸರಿಯಾಗಿದೆ. ಅದರಂತೆ ಕ್ರಮ ವಹಿಸಲು ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ಪರೀಕ್ಷಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ನಿರ್ಧರಿಸಲಾಗಿದೆ. ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಶೀಘ್ರ ಈ ಬಗ್ಗೆ ನಮ್ಮ ಇಲಾಖೆಯಿಂದ ಅಧಿಕೃತ ಆದೇಶ ಮಾಡಲಾಗುವುದು ಎಂದರು.

-ಸಾಮಾಜಿಕ ಜಾಲತಾಣ ನಿರ್ಬಂಧಕ್ಕೆ ಪೋಷಕರ ಸಹಕಾರ ಮುಖ್ಯ: ಸಚಿವ

ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸುವ ನಮ್ಮ ಸರ್ಕಾರದ ಮಹತ್ವದ ಪ್ರಸ್ತಾವಕ್ಕೆ ಪೋಷಕರ ಅಹಕಾರ ಸಿಕ್ಕಾಗ ಮಾತ್ರ ಕಟ್ಟುನಿಟ್ಟಿನ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ಇದೇ ವೇಳೆ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ 16 ವರ್ಷದೊಳಿಗನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಇದು ಸದನದಲ್ಲೂ ಸಾಕಷ್ಟು ಚರ್ಚೆಯಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಸಮಸ್ಯೆ ಕೇವಲ ಸರ್ಕಾರದ ಮಟ್ಟದಲ್ಲಿ ಬಗೆಹರಿಯುವುದಿಲ್ಲ, ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.

ಮುಂಬರುವ ಸಾಲಿಂದ ನೈತಿಕ ಶಿಕ್ಷಣ ಪುಸ್ತಕ:

ಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿದ್ಧಪಡಿಸಿರುವ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಇದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸರ್ಕಾರದ ಹೆಜ್ಜೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಯಾವ್ಯಾವ ಭಾಷೆಗೆ ಅಂಕ ಇರೋದಿಲ್ಲ?

ಹಿಂದಿ ಜತೆಗೆ ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಗ್ರೇಡಿಂಗ್‌ ನಿಯಮ ಅನ್ವಯ.

ಏಕೆ ಈ ನಿರ್ಧಾರ?

- ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಅಗತ್ಯವಿಲ್ಲ ಎಂದು ಕನ್ನಡಪರ ಸಂಘಟನೆಗಳ ಮುಖಂಡರಿಂದ ಮನವಿ

- ಮಾ.31ರಂದು ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಇದೆ. ಹಿಂದಿ ಕಡ್ಡಾಯ ಪಾಸ್‌ ಮಾನದಂಡದ ಅವಶ್ಯಕತೆ ಬೇಡ

- ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರ ಜಾರಿಗೊಳಿಸಬೇಕು: ಕನ್ನಡಪರ ಹೋರಾಟಗಾರರಿಂದ ಸಚಿವ ಮಧುಗೆ ಮನವಿ

- ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

- ಕನ್ನಡಪರ ಸಂಘಟನೆಗಳ ಅಭಿಪ್ರಾಯ ಸರಿಯಾಗಿದೆ. ಅದರಂತೆ ಕ್ರಮ ವಹಿಸಿ ಎಂದು ಸಿಎಂರಿಂದ ಸೂಚನೆ

- ಅದರಂತೆ ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ರಾಜ್ಯ ಸರ್ಕಾರದ ನಿರ್ಧಾರ

- ಶೀಘ್ರದಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಪ್ರಕಟ ಎಂದು ಸಚಿವ ಮಧು ಬಂಗಾರಪ್ಪರಿಂದ ಘೋಷಣೆ

ಹಿಂದಿಯಲ್ಲಿ ಫೇಲ್‌ ಆದರೂ ಭಯವಿಲ್ಲ!

- ಪ್ರಥಮ ಭಾಷೆ ಕನ್ನಡ (125 ಅಂಕ) ಸೇರಿ 625 ಅಂಕಗಳಿಗೆ ನಡೆಯುತ್ತಾ ಬಂದಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ

- ಇನ್ನು ಮುಂದೆ ತೃತೀಯ ಭಾಷೆ ವಿಷಯಗಳ ಪರೀಕ್ಷೆಗಳ ಅಂಕಗಳನ್ನು ಪರಿಗಣನೆ ಮಾಡದಿರಲು ನಿರ್ಧಾರ

- ವಿದ್ಯಾರ್ಥಿಗಳು ತೃತೀಯ ಭಾಷೆ (ಹಿಂದಿ) ಪರೀಕ್ಷೆ ಬರೆಯಬೇಕಷ್ಟೆ. ಪಾಸ್‌ ಅಥವಾ ಫೇಲ್‌ ಎಂಬುದೇ ಇರಲ್ಲ

- ಎ, ಬಿ, ಸಿ, ಡಿ ಮಾದರಿಯಲ್ಲಿ ಗ್ರೇಡಿಂಗ್‌. ಅಂತಿಮ ಫಲಿತಾಂಶಕ್ಕೆ ತೃತೀಯ ಭಾಷೆ ಅಂಕ ಪರಿಗಣನೆ ಇಲ್ಲ

- ಹೀಗಾಗಿ ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ. ದ್ವಿಭಾಷಾ ನೀತಿಯತ್ತ ಸರ್ಕಾರ ಹೆಜ್ಜೆ

ಮಾ.31ರಂದು ನಡೆವ ಪರೀಕ್ಷೆಯಿಂದಲೇ ಜಾರಿ

ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಪರೀಕ್ಷಾ ವ್ಯವಸ್ಥೆಯಲ್ಲಿ ಹೊಸ ಬದಲಾ‍ವಣೆಗೆ ನಿರ್ಧರಿಸಲಾಗಿದೆ. ಇದೇ ಮಾ.31 ರಂದು ನಡೆಯಲಿರುವ ತೃತೀಯ ಭಾಷಾ ವಿಷಯಗಳ ಪರೀಕ್ಷೆಯಿಂದಲೇ ಜಾರಿಗೆ ಬರಲಿದೆ.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಾಸಕರಿಗೆ ಸಿಗಲಿವೆ ತಲಾ ಎರಡು ಐಪಿಎಲ್‌ ಟಿಕೆಟ್‌!
ಭಾವಾಭಿವ್ಯಕ್ತಿಯ ಜೊತೆಗೆ ಮನುಷ್ಯ ಸಂವೇದನೆಯೂ ಮುಖ್ಯ