ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಗೌರವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿದ ಆರೋಪ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಗೌರವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿದ ಆರೋಪ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಯತ್ನಾಳ್ ಅವರ ಪರ ವಕೀಲ ಪಿ.ವೆಂಕಟೇಶ್ ದಳವಾಯಿ, ನಟಿ ರನ್ಯಾ ಭಾಗಿಯಾಗಿರುವ ಚಿನ್ನ ಅಕ್ರಮ ಸಾಗಣೆ ಪ್ರಕರಣ ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಅರ್ಜಿದಾರರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ರನ್ಯಾ ರಾವ್ ಘನತೆಗೆ ಹಾನಿ ಉಂಟು ಮಾಡುವ ಯಾವುದೇ ಉದ್ದೇಶ ಅರ್ಜಿದಾರರಿಗೆ ಇಲ್ಲ. ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ ಎಂದರು.
ರನ್ಯಾ ಗೌರವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿರುವುದಾಗಿ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೆ, ಈ ಬಗ್ಗೆ ರನ್ಯಾ ನೇರವಾಗಿ ಏನೂ ಕೇಳಿಸಿಕೊಂಡಿಲ್ಲ ಹಾಗೂ ನೋಡಿಲ್ಲ. ಹೀಗಿರುವಾಗ ಭಾರತೀಯ ನ್ಯಾಯ ಸಂಹಿತೆ (ಬಿನ್‌ಎನ್‌ಎಸ್) ಸೆಕ್ಷನ್ 79 ಅನ್ವಯ ಮಹಿಳೆ ಗೌರವಕ್ಕೆ ಧಕ್ಕೆ ತಂದ ಅಪರಾಧವಾಗುವುದಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿದರು.
ದೂರುದಾರೆ ರನ್ಯಾ ಸಂಬಂಧಿ ಅಕುಲಾ ಅನುರಾಧ ಪರ ವಕೀಲರು, ಸಾರ್ವಜನಿಕ ವಲಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರ್ಜಿದಾರರು, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿರುವುದು ಸರಿಯಲ್ಲ. ಹಾಗಾಗಿ, ಅರ್ಜಿ ವಜಾಗೊಳಿಸಿ ಯತ್ನಾಳ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಮಾ.17ರಂದು ವಿಜಯಪುರದಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್, ರನ್ಯಾ ಜೊತೆ ಯಾರ್ಯಾರು ಸಂಬಂಧ ಹೊಂದಿದ್ದಾರೆ? ಆಕೆಗೆ ಏನೇನು ಭದ್ರತೆ ಕೊಟ್ಟಿದ್ದಾರೆ? ಎಲ್ಲಿಂದ ಚಿನ್ನ ತಂದಿದ್ದಾರೆ ಎಂಬ ಬಗ್ಗೆ ಎಲ್ಲ ಮಾಹಿತಿ ತೆಗೆದುಕೊಂಡಿದ್ದೇವೆ ಎಂದು ಹೇಳುವಾಗ ಅಶ್ಲೀಲ ಪದ ಬಳಸಿದ್ದಾರೆ. ಇದು ರನ್ಯಾ ರಾವ್ ಗೌರವಕ್ಕೆ ಧಕ್ಕೆ ತಂದಿದ್ದು, ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕುಲಾ ಅನುರಾಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು.