ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲೂ ಉಪ ನೋಂದಣಿ ಕಚೇರಿ ಕಾರ್ಯ : ಕಂದಾಯ ಸಚಿವ ಕೃಷ್ಣ ಬೈರೇಗೌಡ

Published : Sep 24, 2024, 09:40 AM ISTUpdated : Sep 24, 2024, 09:41 AM IST
Krishna Byre Gowda

ಸಾರಾಂಶ

ರಾಜ್ಯದಲ್ಲಿ ಸುಗಮ ಆಡಳಿತ ನೀಡುವ ಉದ್ದೇಶದಿಂದ ಮುಂದಿನ ತಿಂಗಳು 21ರಿಂದ ಉಪ-ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಸುಗಮ ಆಡಳಿತ ನೀಡುವ ಉದ್ದೇಶದಿಂದ ಮುಂದಿನ ತಿಂಗಳು 21ರಿಂದ ಉಪ-ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅ.21 ರಿಂದ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ಉಪ ನೋಂದಣಿ ಕಚೇರಿಯು ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. 

ಪ್ರತಿ ನೋಂದಣಿ ಜಿಲ್ಲೆಯಲ್ಲಿ 5-6 ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಒಂದು ಕಚೇರಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾರದಂದು ರಜೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂಬುದರ ಕುರಿತು ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಮಾಹಿತಿ ನೀಡಲಾಗುವುದು. ಇದು ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದೆ. 

ದುಡಿಯುವ ಮಧ್ಯಮ ವರ್ಗದ ಜನರು ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟಕರವಾಗುತ್ತಿರುವುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ರಜೆ ದಿನವನ್ನು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 

ಶನಿವಾರ-ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಬೇಕು ಎಂಬ ಒತ್ತಾಯ ಈ ಹಿಂದಿನಿಂದಲೂ ಇತ್ತು. ಅಲ್ಲದೆ, ಬಜೆಟ್ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಇದಕ್ಕೆ ಬೇಕಾದ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ