ದಲಿತ ಅರ್ಚಕರನ್ನು ರೂಪಿಸಲು ಸ್ವಾಮೀಜಿಗಳ ಬೇಡಿಕೆ

ಸಾರಾಂಶ

ರಾಜ್ಯದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯದ ಅರ್ಚಕರನ್ನು ರೂಪಿಸಲು ಗುರುಕುಲ ಆರಂಭಿಸುವ ಸಲುವಾಗಿ ಚಿತ್ರದುರ್ಗದಲ್ಲಿ ಜಾಗ ಗುರುತಿಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯದ ಅರ್ಚಕರನ್ನು ರೂಪಿಸಲು ಗುರುಕುಲ ಆರಂಭಿಸುವ ಸಲುವಾಗಿ ಚಿತ್ರದುರ್ಗದಲ್ಲಿ ಜಾಗ ಗುರುತಿಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಹಿಂದುಳಿದ ಮತ್ತು ದಲಿತ ಅರ್ಚಕರನ್ನು ರೂಪಿಸಲು ಅನುಕೂಲ ಆಗುವ ರೀತಿ ಗುರುಕುಲ ಆರಂಭಿಸಲು ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗ ನೀಡುವಂತೆ ನಿಯೋಗ ಮನವಿ ಮಾಡಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಗ ಗುರುತಿಸಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಠಗಳಿಗೆ ಅನುದಾನ ಭರವಸೆ: ಇದೇ ವೇಳೆ ಎಲ್ಲಾ ದಲಿತ ಮತ್ತು ಹಿಂದುಳಿದ ಮಠಗಳಿಗೆ ಅನುದಾನ ನೀಡುವಂತೆ ಮಠಾಧೀಶರು ಮನವಿ ಮಾಡಿದ್ದು, ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು. ಜತೆಗೆ ಎಲ್ಲಾ ಹಿಂದುಳಿದ ಮತ್ತು ದಲಿತ ಮಠಗಳಿಗೆ ಬೆಂಗಳೂರಿನಲ್ಲಿ ನಿವೇಶನ ಒದಗಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಪರಿಶೀಲನೆ ಮಾಡುವ ಭರವಸೆ ಮಾತ್ರ ನೀಡಿದರು ಎಂದು ತಿಳಿದುಬಂದಿದೆ.

ಉಪ್ಪಾರರಿಗೆ ರಾಜಕೀಯ ಪ್ರಾತಿನಿಧ್ಯಕ್ಕೆ ಮನವಿ:

ಶನಿವಾರ ಉಪ್ಪಾರ ಸಮಾಜದ ಪುರುಷೋತ್ತಮಾನಂದ ಸ್ವಾಮೀಜಿ ನೇತೃತ್ವದ ಸಮಾಜದ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಿತು. ಈ ವೇಳೆ ಸಮಾಜದ ಪ್ರತಿನಿಧಿಗಳಿಗೆ ರಾಜಕೀಯ ಪ್ರತಿನಿಧ್ಯ ನೀಡುವುದೂ ಸೇರಿ ವಿವಿಧ ಬೇಡಿಕೆ ಸಲ್ಲಿಸಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

Share this article