10 ಮಂದಿಗೆ ಟಿಯೆಸ್ಸಾರ್‌, ಹಣಮಂತರಾಯ ಪ್ರಶಸ್ತಿ - 5 ವರ್ಷಗಳ ಪ್ರಶಸ್ತಿ ರಾಜ್ಯ ಸರ್ಕಾರದಿಂದ ಪ್ರಕಟ

Published : Sep 22, 2024, 12:48 PM IST
journalism

ಸಾರಾಂಶ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಡಮಾಡುವ ಟಿ.ಎಸ್‌.ರಾಮಚಂದ್ರರಾವ್‌(ಟಿಯೆಸ್ಸಾರ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹ ಕಟ್ಟಿ ಬೆಳೆಸಿದ ಪತ್ರಕರ್ತರಿಗೆ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಗೊಂಡಿದೆ.

ಬೆಂಗಳೂರು :  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಡಮಾಡುವ ಟಿ.ಎಸ್‌.ರಾಮಚಂದ್ರರಾವ್‌(ಟಿಯೆಸ್ಸಾರ್) ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹ ಕಟ್ಟಿ ಬೆಳೆಸಿದ ಪತ್ರಕರ್ತರಿಗೆ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಗೊಂಡಿದೆ.

ಕೋವಿಡ್ ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದ್ದ 2019 ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಟಿಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಶಿವಾಜಿ ಎಸ್. ಗಣೇಶನ್ (2019ನೇ ಸಾಲಿನ ಪ್ರಶಸ್ತಿ), ಶ್ರೀಕಾಂತಾಚಾರ್ಯ ಆರ್.ಮಣೂರ (2020), ಡಾ.ಆರ್.ಪೂರ್ಣಿಮಾ (2021), ಪದ್ಮರಾಜ ದಂಡಾವತಿ (2022), ಡಾ.ಸರಜೂ ಕಾಟ್ಕರ್ (2023) ಆಯ್ಕೆಗೊಂಡಿದ್ದಾರೆ.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಗದಗ-ಬೆಟಗೇರಿಯ ರಾಜೀವ್ ಕಿದಿಯೂರ (2019), ಬೆಂಗಳೂರಿನ ಇಂದೂಧರ ಹೊನ್ನಾಪುರ (2020), ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ (2021), ದಕ್ಷಿಣ ಕನ್ನಡ ಜಿಲ್ಲೆಯ ಚಂದ್ರಶೇಖರ್ ಪಾಲೆತ್ತಾಡಿ (2022), ಕಲಬುರಗಿ ಜಿಲ್ಲೆಯ ಅಫಜಲಪುರದ ಶಿವಲಿಂಗಪ್ಪ ದೊಡ್ಡಮನಿ (2023) ಆಯ್ಕೆಯಾಗಿದ್ದಾರೆ.

ಟಿಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯು ತಲಾ 2 ಲಕ್ಷ ರು.ನಗದು ಬಹುಮಾನವನ್ನು ಒಳಗೊಂಡಿದೆ.

ಹೈಕೋರ್ಟ್ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸನ್ನು ರಾಜ್ಯ ಸರ್ಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
‘ನವರಾತ್ರಿಯಲ್ಲಾದ್ರೂ ಸಮೀಕ್ಷೆಯಿಂದ ಬಿಡುವು ಕೊಡಿ’