625 ಅಂಕ ಪಡೆದ ಟೈಲರಿಂಗ್‌ ದಂಪತಿಯ ಪುತ್ರಿ, 90%ಗಿಂತ ಹೆಚ್ಚು ಅಂಕ ಪಡೆದ 2 ಅಂಧ ವಿದ್ಯಾರ್ಥಿಗಳು

Published : Apr 24, 2026, 09:39 AM IST
Karnataka SSLC Results 2026 State Records Historic 94 1 percents students Pass Percentage

ಸಾರಾಂಶ

ಕಾಫಿನಾಡು ಚಿಕ್ಕಮಗಳೂರಿನ ಟೈಲರಿಂಗ್‌ ದಂಪತಿಯ ಪುತ್ರಿ ಬೃಂದಾ ಎಂ.ತಾಪ್ಸೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಬಂದಿದ್ದಾಳೆ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಟೈಲರಿಂಗ್‌ ದಂಪತಿಯ ಪುತ್ರಿ ಬೃಂದಾ ಎಂ.ತಾಪ್ಸೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಬಂದಿದ್ದಾಳೆ. ಚಿಕ್ಕಮಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದಾದ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಬೃಂದಾ ಇದೀಗ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

 ಪ್ರತಿದಿನ ಬೆಳಗ್ಗೆ 4.30ಕ್ಕೆ ಎದ್ದು ಅಭ್ಯಾಸ ಮಾಡಿ ಶಾಲೆಗೆ ತೆರಳುತ್ತಿದ್ದಳು. ಶಾಲೆಯಲ್ಲೇ ವಿಶೇಷ ತರಗತಿಗಳಿಗೂ ಹಾಜರಾಗಿ ಸಂಜೆ 6ಕ್ಕೆ ಮನೆಗೆ ವಾಪಸ್ ಆಗುತ್ತಿದ್ದಳು. ನಿರೀಕ್ಷೆಗೆ ತಕ್ಕಂತ ಅಂಕ ಬಂದಿದ್ದು, ಪೋಷಕರು, ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಎಂಜಿನಿಯರ್‌ ಆಗಬೇಕೆಂಬ ಬಯಕೆ ಇದೆ ಎಂದಿದ್ದಾಳೆ.

ಸ್ವಲ್ಪ ಹೊತ್ತು ಆಟವಾಡಿ ಬಳಿಕ ಹೋಂ ವರ್ಕ್ ಮುಗಿಸುವುದು, ಊಟದ ಸಮಯದಲ್ಲಿ ಟೀವಿ ನೋಡುವುದು, ಬಳಿಕ 12 ಗಂಟೆವರೆಗೆ ಮತ್ತೆ ಓದುವುದು ಬೃಂದಾಳ ದಿನಚರಿಯಾಗಿತ್ತು.

ಕನ್ನಡಪ್ರಭ ಯುವ ಆವೃತ್ತಿ ನೆರವು ಪಡೆದು 621 ಅಂಕ ಪಡೆದ ಕೊಪ್ಪಳದ ಬಾಲಕ

ಕನಕಗಿರಿ (ಕೊಪ್ಪಳ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೈತನ ಮಗ 625ಕ್ಕೆ 621 ಅಂಕ ಪಡೆದು ಕೊಪ್ಪಳ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಯಲಬುರ್ಗಾ ತಾಲೂಕಿನ ಕಲಕಬಂಡಿ ಗ್ರಾಮದ ನಾಗರಾಜ ಮಾಲಿ ಪಾಟೀಲ್ ಕನಕಗಿರಿಯ ಹಿಂದುಳಿದ ವರ್ಗಗಳ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ. ಈತ ತನಗೆ ‘ಕನ್ನಡಪ್ರಭ’ ಯುವ ಆವೃತ್ತಿ ಬಹಳಷ್ಟು ನೆರವಾಯಿತು ಎಂದು ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ‘ಪ್ರತಿನಿತ್ಯ ಶಾಲಾ ಗೇಟಿನ ಬಳಿಗೆ ಕನ್ನಡಪ್ರಭ ಯುವ ಆವೃತ್ತಿ ಪತ್ರಿಕೆ ಬರುತ್ತಿದ್ದಂತೆ 10ನೇ ಕ್ಲಾಸ್‌ ವಿದ್ಯಾರ್ಥಿಗಳು ಸಾಲು ಸಾಲಾಗಿ ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೋತ್ತರ ಗಮನಿಸುತ್ತಿದ್ದರು. ಪಠ್ಯದ ಜತೆ ಪತ್ರಿಕೆ ಓದಿದ್ದು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.

ಪರೀಕ್ಷೆ ಬರೆದಿದ್ದ ಅಂಧಳಿಗೆ ಗೈರು ಎಂದು ರಿಸಲ್ಟ್‌ ನೀಡಿದ ಶಿಕ್ಷಣ ಮಂಡಳಿ

ಶಿರಸಿ: ಪರೀಕ್ಷೆ ಬರೆದಿದ್ದರೂ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ಗೈರುಹಾಜರಿ ಎಂದು ತೋರಿಸುವ ಮೂಲಕ ಶಿಕ್ಷಣ ಮಂಡಳಿಯು ದೊಡ್ಡ ಎಡವಟ್ಟು ಮಾಡಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಯೂನಿಯನ್ ಪ್ರೌಢಶಾಲೆಯ ಲೀಜಾ ಖಾನ್ ಅನ್ಯಾಯಕ್ಕೆ ಒಳಗಾಗಿದ್ದಾಳೆ. ಈಕೆ, ಉರ್ದುವಿನಲ್ಲಿ 124, ಕನ್ನಡದಲ್ಲಿ 100 ಸೇರಿ ಉಳಿದ ವಿಷಯಗಳನ್ನೂ ಉತ್ತಮ ಅಂಕ ಗಳಿಸಿದ್ದಾಳೆ. ಆದರೆ ಸಮಾಜ ವಿಜ್ಞಾನ ಪರೀಕ್ಷೆ ಬರೆದರೂ, ಈಕೆ ಗೈರಾಗಿದ್ದಾಳೆ ಎಂದು ಅಂಕಪಟ್ಟಿಯಲ್ಲಿ ನಮೂದಿಸಿ ಎಡವಟ್ಟು ಮಾಡಲಾಗಿದೆ.

ಇದರಿಂದಾಗಿ ಆಕೆಯ ಫಲಿತಾಂಶಕ್ಕೆ ಹಿನ್ನಡೆಯಾಗಿದ್ದು, ವಿದ್ಯಾರ್ಥಿನಿ ಮತ್ತು ಪೋಷಕರಿಗೆ ತೀವ್ರ ನೋವುಂಟಾಗಿದೆ. ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಹಾಜರಾತಿಯನ್ನು ಪರಿಶೀಲಿಸಿ, ತಪ್ಪು ಸರಿಪಡಿಸಿ ಆಕೆಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಮತ್ತು ಮುಖಂಡರು ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

90%ಗಿಂತ ಹೆಚ್ಚು ಅಂಕ ಪಡೆದ ಹುಬ್ಬಳ್ಳಿಯ 2 ಅಂಧ ವಿದ್ಯಾರ್ಥಿಗಳು

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಇಬ್ಬರು ಅಂಧ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಂಕ ಪಡೆಯುವ ಮೂಲಕ ಕಲಿಕೆ, ಸಾಧನೆಗೆ ಅಂಧತ್ವ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ನಗರದ ಶ್ರೀ ಆರೂಢ ಅಂಗವಿಕಲ ಶಿಕ್ಷಣ ಸಂಸ್ಥೆಯ ಸದ್ಗುರು ಸಿದ್ಧಾರೂಢ ಅಂಧ ಮಕ್ಕಳ ಶಾಲೆಯ ನಿರುಪಾದಗೌಡ ಪೊಲೀಸ್‌ ಪಾಟೀಲ (ಶೇ.94.08) ಹಾಗೂ ನಿರ್ಮಲಾ ಪಾಟೀಲ (ಶೇ.91.52) ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಕ್ಕಳ್ಳಿ ಗ್ರಾಮದ ನಿರುಪಾದಗೌಡ ತಂದೆ ಬಸನಗೌಡ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ನಿರ್ಮಲಾ ಸಹ ಕೃಷಿಕನ ಮಗಳಾಗಿದ್ದು, ಹುಟ್ಟಿದಾಗಿಂದ ಅಂಧಳಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ತಂದೆ ಬ್ರೈಲ್‌ ಲಿಪಿ ಶಿಕ್ಷಣವಿರುವ ಹುಬ್ಬಳ್ಳಿ ಸಿದ್ಧಾರೂಢ ಶಾಲೆಗೆ ದಾಖಲಿಸಿದ್ದರು.

ನಿರುಪಾದಗೌಡ ಮಾತನಾಡಿ, ಸೂಕ್ತ ತರಬೇತಿ, ಮಾರ್ಗದರ್ಶನ ದೊರೆತ ಹಿನ್ನೆಲೆಯಲ್ಲಿ ಈ ಸಾಧನೆ ಮಾಡಲಾಗಿದ್ದು, ಇದರಲ್ಲಿ ತಂದೆ-ತಾಯಿ, ಶಿಕ್ಷಕರ ಶ್ರಮ ಬಹಳಷ್ಟಿದೆ. ಮುಂದೆ ಐಎಎಸ್‌ ಮಾಡುವ ಆಸೆ ಇದೆ ಎಂದಿದ್ದಾನೆ.

ನಿರ್ಮಲಾ ಮಾತನಾಡಿ, ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆಯಿತ್ತು. ನನ್ನ ಯಶಸ್ಸಿಗೆ ನನ್ನ ತಂದೆ-ತಾಯಿಯ ಶ್ರಮವೇ ಕಾರಣವಾಗಿದ್ದು, ಮುಂದೆಯೂ ಕಲಿತು ಸಾಧನೆ ಮಾಡುವಾಸೆವಿದೆ ಎಂದಿದ್ದಾಳೆ.

625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು

1. ಪ್ರಾರ್ಥನಾ ನಾಗಪ್ಪ ಬಿರಾದರ್‌ ಪಾಟೀಲ್‌, ಕಟಗೇರಿ ಸರ್ಕಾರಿ ಪ್ರೌಢ ಶಾಲೆ, ಅಥಣಿ ತಾ., ಬೆಳಗಾವಿ

2. ಭರತ್‌ ಜಿ., ಶ್ರೀ ವಿದ್ಯಾಲಕ್ಷ್ಮೀ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌, ಕಬ್ಬಾಳ, ಚನ್ನಗಿರಿ ತಾ., ದಾವಣಗೆರೆ

3. ಬೃಂದಾ ಎಂ.ತಾಪ್ಸೆ, ಸೇಂಟ್‌ ಮೇರಿಸ್‌ ಹೈಸ್ಕೂಲ್‌, ಚಿಕ್ಕಮಗಳೂರು ತಾಲೂಕು, ಚಿಕ್ಕಮಗಳೂರು

4. ಧನುಷ್‌ ದುಧೀರ್‌ ಮೈಸೂರು, ಪೂರ್ಣಪ್ರಜ್ಞಾ ಎಜುಕೇಷನ್‌ ಸೆಂಟರ್‌, ಸದಾಶಿವನಗರ, ಬೆಂಗಳೂರು

5. ಪ್ರೀತಂ ಜಿ. ಪೂಜಾರಿ, ಮದರ್‌ ಥೆರೇಸಾ ಮೆಮೋರಿಯಲ್‌ ಸ್ಕೂಲ್‌, ಕುಂದಾಪುರ ತಾ., ಉಡುಪಿ

6. ಸೌಜನ್ಯ ಬಸವರಾಜ್ ಕಂದಕೂರ್‌, ಆಕ್ಸ್‌ಫರ್ಡ್‌ ಇಂಗ್ಲಿಷ್‌ ಹೈಸ್ಕೂಲ್‌, ಮುದ್ದೇಬಿಹಾಳ ತಾ., ವಿಜಯಪುರ

7. ಸುಖದೇವ್, ಬಿವಿಆರ್ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌, ಮಾನ್ವಿ ತಾ., ರಾಯಚೂರು

ಸರ್ಕಾರಿ ಪ್ರೌಢ ಶಾಲೆಯ ಓರ್ವ ವಿದ್ಯಾರ್ಥಿನಿ ಸೇರಿ ಮೂವರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳು ಸೇರಿ ಒಟ್ಟು ಏಳು ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ (ಚಿಕ್ಕೋಡಿ ಶೈಕ್ಷಣಿಕ) ಅಥಣಿ ತಾಲೂಕಿನ ಕಟಗೇರಿ ಸರ್ಕಾರಿ ಪ್ರೌಢ ಶಾಲೆಯ ಪ್ರಾರ್ಥನಾ ನಾಗಪ್ಪ ಬಿರಾದರ್‌ ಪಾಟೀಲ್‌, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಬ್ಬಾಳದ ಶ್ರೀ ವಿದ್ಯಾಲಕ್ಷ್ಮೀ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌ನ ಭರತ್‌ ಜಿ, ಚಿಕ್ಕಮಗಳೂರು ತಾಲೂಕಿನ ಸೇಂಟ್‌ ಮೇರಿಸ್‌ ಹೈಸ್ಕೂಲ್‌ನ ಬೃಂದಾ ಎಂ.ತಾಪ್ಸೆ, ಬೆಂಗಳೂರು ಉತ್ತರದ ಸದಾಶಿವನಗರದ ಪೂರ್ಣಪ್ರಜ್ಞಾ ಎಜುಕೇಷನ್‌ ಸೆಂಟರ್‌ನ ಧನುಷ್‌ ದುಧೀರ್‌ ಮೈಸೂರು, ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮದರ್‌ ಥೆರೇಸಾ ಮೆಮೋರಿಯಲ್‌ ಸ್ಕೂಲ್‌ನ ಪ್ರೀತಂ ಜಿ. ಪೂಜಾರಿ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌ನ ಸೌಜನ್ಯ ಬಸವರಾಜ್ ಕಂದಕೂರ್‌ ಮತ್ತು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಿವಿಆರ್ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್‌ನ ಸುಖದೇವ್ ಎಂಬ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಶೇ.100ಕ್ಕೆ ನೂರು ಫಲಿತಾಂಶ ಪಡೆದ ಸಾಧಕರಾಗಿದ್ದಾರೆ. ಕಳೆದ ಬಾರಿ 22 ಮಕ್ಕಳು ಈ ಸಾಧನೆ ಮಾಡಿದ್ದರು.

ಹುಬ್ಬಳ್ಳಿಯ ಟ್ಯಾಕ್ಸಿ ಡ್ರೈವರ್‌ ಮಗಳಿಗೆ 98.8% ಅಂಕ

ಹುಬ್ಬಳ್ಳಿ: ಕಾರು ಡ್ರೈವರ್‌ ಮಗಳು ಕನ್ನಡ ಮಾಧ್ಯಮದಲ್ಲಿ ಓದಿ ಶೇ.98.08ರಷ್ಟು ಅಂಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿನಿ ಶಕುಂತಲಾ ಹಸಬಿ ಈ ಸಾಧನೆ ಮಾಡಿದವಳು. ಈಕೆಯ ತಂದೆ ಚಂದ್ರಶೇಖರ ಹಸಬಿ ಖಾಸಗಿ ಟ್ಯಾಕ್ಸಿ ಡ್ರೈವರ್‌ ಆಗಿದ್ದು, ಟೂರಸ್‌ ಆ್ಯಂಡ್‌ ಟ್ರಾವೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಶೇಖರ ಪಿಯುಸಿ, ಪತ್ನಿ ಬಿಎ ಓದಿದ್ದಾರೆ. ತಾವು ಸರಿಯಾಗಿ ಓದದ ಕಾರಣ ಸ್ಥಿರ ನೌಕರಿ ಸಿಕ್ಕಿಲ್ಲ. ಆದರೆ, ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸೋಣವೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರ ಫಲವಾಗಿ ಶಕುಂತಲಾ 613 ಅಂಕ ಪಡೆದಿದ್ದು, ಬಿಎ ಎಲ್‌ಎಲ್‌ಬಿ ಓದಿ ಹೈಕೋರ್ಟ್‌ ವಕೀಲೆಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದಾಳೆ. ಶಕುಂತಲಾಳ ಹಿರಿಯ ಸಹೋದರ ಎಸ್‌ಎಸ್‌ಎಲ್‌ಸಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿಗೆ ಫಸ್ಟ್‌ ಬಂದಿದ್ದ.

ಕೂಲಿ ಕೆಲಸ ಮಾಡುತ್ತಲೇ 97.76% ಪಡೆದ ಸಂಗೀತಾ -ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿನಿ

ಕೊಪ್ಪಳ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಅಪ್ಪ, ಅಮ್ಮ ಕೂಲಿ ಮಾಡಿದರೆ ಬದುಕು, ಇಲ್ಲದಿದ್ದರೆ ಇಲ್ಲ ಎನ್ನುವ ಸ್ಥಿತಿಯಲ್ಲಿ ಶಾಲೆ ರಜೆ ಇದ್ದಾಗ ತಂದೆ-ತಾಯಿ ಜತೆ ಕೂಲಿ ಕೆಲಸ ಮಾಡುತ್ತಲೇ ಸಂಗೀತಾ ರಾಮಣ್ಣ ಹವಣ್ಣವರ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 611 ಅಂಕ ಪಡೆದಿದ್ದಾಳೆ. ಬೋಚನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ, ಅತ್ಯುತ್ತಮ ಫಲಿತಾಂಶ ಪಡೆದಿರುವ ಈಕೆಗೆ ಮುಂದಿನ ಓದಿಗೂ ಕಷ್ಟ ಎನ್ನುವಂತಾಗಿದೆ. ಅಪ್ಪ ಅಂಗವಿಕಲ, ಆದರೂ ನಿತ್ಯವೂ ದುಡಿಯಲು ಕೂಲಿಗಾಗಿ ಹೋಗುತ್ತಾರೆ. ತಾಯಿಯೂ ಕೂಲಿ ಮಾಡುತ್ತಾರೆ. ಆದರೂ ಮಗಳು ಓದಬೇಕು ಎನ್ನುವ ಆಸೆಯಿಂದ ತಮ್ಮೂರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದ್ದರು. ಮಗಳು ಸಂಗೀತಾ, ಅಪ್ಪ, ಅಮ್ಮನಿಗೂ ಹೊರೆಯಾಗಬಾರದು ಎಂದು ರಜೆ ಇದ್ದಾಗಲೆಲ್ಲ ಕೂಲಿ ಕೆಲಸ ಮಾಡುತ್ತಾಳೆ. ಒಂದು ದಿನವೂ ಟ್ಯೂಶನ್ ಮುಖ ನೋಡದೆ, ಅತ್ಯುತ್ತಮ ಫಲಿತಾಂಶ ಪಡೆದಿದ್ದಾಳೆ.

ಹಾವೇರಿ ಆಟೋ ಡ್ರೈವರ್‌ ಮಗಳಿಗೆ 93.6% ಅಂಕ 

ಆಟೋ ಡ್ರೈವರ್ ಪುತ್ರಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 585 ಶೇ.93.60 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ನಿವಾಸಿ ಆಶಾ ಅತ್ಯುತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿನಿ. ಈಕೆಯ ತಂದೆ ನಾಗರಾಜ ನರಸಪ್ಪ ಆರೇರ ಅವರು ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಹಗಲು ರಾತ್ರಿ ಆಟೋ ಓಡಿಸಿ ಮಗಳನ್ನು ಓದಿಸಿದ್ದಾರೆ. ತಂದೆಯ ಶ್ರಮಕ್ಕೆ ಚ್ಯುತಿ ಬಾರದಂತೆ ಮಗಳು ಆಶಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪಾಸ್‌ ಅಂಕ 33%ಗೆ ಇಳಿಸಿದ್ದರಿಂದ 1532 ವಿದ್ಯಾರ್ಥಿಗಳು ಉತ್ತೀರ್ಣ
ತೃತೀಯ ಭಾಷೆ ಹಿಂದೀಲಿ 9487 ವಿದ್ಯಾರ್ಥಿಗಳು ಫೇಲ್‌