ತನಿಶಾ ಸಿಇಟಿ ಟಾಪರ್‌- ಐದು ವಿಭಾಗಗಳಲ್ಲಿ ಬೆಂಗಳೂರಿನ ನಯನಾ ಗೋಪಿ ನಂ.1

Published : Jun 07, 2026, 07:48 AM IST
Nayana Gopi

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿಸಿಇಟಿ-26) ಫಲಿತಾಂಶ ಪ್ರಕಟ

  ಬೆಂಗಳೂರು :  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿಸಿಇಟಿ-26) ಫಲಿತಾಂಶ ಪ್ರಕಟವಾಗಿದ್ದು, ಎಂಜಿನಿಯರಿಂಗ್‌, ಬಿಎಸ್ಸಿ ಕೃಷಿ ಸೇರಿ ಎಲ್ಲ ಏಳೂ ವಿಭಾಗಗಳಲ್ಲೂ ಬೆಂಗಳೂರಿನ ಎರಡು ಕಾಲೇಜುಗಳ ಮೂವರು ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.

ಬೆಂಗಳೂರಿನ ಶಿವನಗರದ ಬೇಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಬಿ ಫಾರ್ಮಾ, ಫಾರ್ಮಾ ಡಿ ಈ ಐದೂ ವಿಭಾಗಳಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಜಯನಗರದ ಆರ್‌.ವಿ.ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್‌, ಅದೇ ಕಾಲೇಜಿನ ನಿನಾದ್‌ ವಸಿಷ್ಠ್ ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಒಟ್ಟು 2.09 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್‌ ಮೂಲಕ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಅರ್ಹತೆ ಪಡೆದಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಲ್ಲೇಶ್ವರದ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಫಲಿತಾಂಶ ಪ್ರಕಟಿಸಿದರು.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಸಾಧನೆ:

ಈ ಬಾರಿ ಫಲಿತಾಶಂದ ವಿಶೇಷವೆಂದರೆ ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ ವಿಭಾಗಗಳಲ್ಲಿ ವಿಜಯಪುರದ ಬಿಜಾಪುರ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಬಸವರಾಜ್‌ ಆವತಿ 4ನೇ ರ್‍ಯಾಂಕ್‌, ಬಿ ಫಾರ್ಮಾ ಮತ್ತು ಫಾರ್ಮಾ ಡಿಯಲ್ಲಿ 6ನೇ ರ್‍ಯಾಂಕ್‌, ಯೋಗ ಮತ್ತು ನ್ಯಾಚುರೋಪತಿಯಲ್ಲಿ 10ನೇ ರ್‍ಯಾಂಕ್‌ ತಮ್ಮದಾಗಿಸಿಕೊಂಡಿದ್ದಾರೆ. ತನ್ಮೂಲಕ ಈ ಬಾರಿಯ ಸಿಟಿಇಯಲ್ಲಿ ಟಾಪ್‌ 10 ರ್‍ಯಾಂಕ್‌ಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಕಾಲೇಜಿನ ಏಕೈಕ ವಿದ್ಯಾರ್ಥಿ ಎನಿಸಿದ್ದಾನೆ.

ಮೊದಲ 5 ರ್‍ಯಾಂಕ್‌ಗಳಲ್ಲಿ ಓರ್ವ ಸಿಬಿಎಸ್‌ಇ ವಿದ್ಯಾರ್ಥಿ ಹೊರತುಪಡಿಸಿದರೆ ಉಳಿದೆಲ್ಲರೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಾಗಿರುವುದು ಮತ್ತೊಂದು ವಿಶೇಷ. ಎಲ್ಲ ವಿಭಾಗಗಳಲ್ಲೂ ಟಾಪ್‌ 10 ರ್‍ಯಾಂಕ್‌ಗಳು ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾಲಾಗಿವೆ. ಮೊದಲ 5 ರ್‍ಯಾಂಕ್‌ ಬೆಂಗಳೂರು, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಪಡೆದಿದ್ದಾರೆ.

ಈ ಬಾರಿ ಎಲ್ಲಾ ಏಳೂ ವಿಭಾಗಗಳಲ್ಲಿ ಮೊದಲ10 ರ್‍ಯಾಂಕ್‌ಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳೇ ಹೆಚ್ಚು ಟಾಪರ್‌ಗಳಾಗಿದ್ದರು.

ಒಟ್ಟು 2.92 ಲಕ್ಷ ಮಂದಿ ಕೌನ್ಸೆಲಿಂಗ್‌ಗೆ ಅರ್ಹರು:

ಈ ಬಾರಿ ಸಿಇಟಿಗೆ ನೋಂದಣಿಯಾಗಿದ್ದ 3.30 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ 3,09,014 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಒಟ್ಟು 2,92,782 ಮಂದಿ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಎಂಜಿನಿಯರಿಂಗ್‌ ಕೋರ್ಸು ಪ್ರವೇಶಕ್ಕೆ 2,82,603 ವಿದ್ಯಾರ್ಥಿಗಳು, ಬಿಎಸ್ಸಿ (ಕೃಷಿ, ತೋಟಗಾರಿಕೆ, ಆಹಾರ ವಿಜ್ಞಾನ) ಪ್ರವೇಶಕ್ಕೆ 2,09,220 ಮಂದಿ, ಪಶುವೈದ್ಯಕೀಯಕ್ಕೆ 2,12,909, ಬಿ-ಫಾರ್ಮಾಗೆ 2,86,965, ಫಾರ್ಮಾ-ಡಿ ಪ್ರವೇಶಕ್ಕೆ 2,86,965, ಬಿಎಸ್ಸಿ ನರ್ಸಿಂಗ್‌ ಕೋರ್ಸು ಪ್ರವೇಶಕ್ಕೆ 2,18,785 ವಿದ್ಯಾರ್ಥಿಗಳು ಮತ್ತು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ಪ್ರವೇಶಕ್ಕೆ 2,12,730 ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ವಿವರಿಸಿದರು.

ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು 2 ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡಲಾಗಿದೆ. ಸಿಇಟಿ ಬರೆದಿದ್ದ ರಾಜ್ಯದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ ಅಂಕಗಳನ್ನು ನೇರವಾಗಿ ಆಯಾ ಮಂಡಳಿ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮಾತ್ರ ಅಂಕ ದಾಖಲಿಸಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬು ಗೋಯಲ್‌ ಚೌಧರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ, ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ ಉಪಸ್ಥಿತರಿದ್ದರು.

ಎಂಜಿನಿಯರಿಂಗ್‌ ತನಿಷಾ, ಕೃಷಿ ವಿಜ್ಞಾನ ನಿನಾದ್‌, 5 ವಿಭಾಗಗಳಲ್ಲಿ ನಯನ ಟಾಪರ್‌

ಎಂಜಿನಿಯರಿಂಗ್‌ ವಿಭಾಗದಲ್ಲಿ ಜಯನಗರ 3ನೇ ಹಂತದ ಆರ್‌.ವಿ.ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್‌ (99.44 ಮೆರಿಟ್‌), ಇದೇ ಕಾಲೇಜಿನ ನಿನಾದ್‌ ವಸಿಷ್ಠ್‌(98.75 ಮೆರಿಟ್‌) ಕೃಷಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಪಶುವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಬಿ ಫಾರ್ಮಾ, ಫಾರ್ಮಾ ಡಿ ವಿಭಾಗಳಲ್ಲಿ ಶಿವನಗರದ ಬೇಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ (ಒಟ್ಟು ಮೆರಿಟ್‌ 100) ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಈ ಐದು ವಿಭಾಗಗಳ ಪೈಕಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (99.83 ಮೆರಿಟ್‌) ಹೊರತುಪಡಿಸಿ ಉಳಿದೆಲ್ಲವುಗಳಲ್ಲೂ ದಾವಣಗೆರೆಯ ಶ್ರೀ ಎಂವಿ ಪಿಯು ಕಾಲೇಜಿನ ಅಮೂಲ್ಯ ಒಟ್ಟು 100 ಮೆರಿಟ್‌ ಅಂಕ ಪಡೆದು ಎರಡನೇ ರ್‍ಯಾಂಕ್‌ ಪಡೆದಿದ್ದಾರೆ.

2 ವಿಷಯಗಳಲ್ಲಿ ತಲಾ 1 ಕೃಪಾಂಕ

ಪ್ರಶ್ನೆಗಳ ಅಸ್ಪಷ್ಟತೆ ಹಿನ್ನೆಲೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಲ್ಲಿ ತಲಾ ಒಂದೊಂದು ಪ್ರಶ್ನೆಗೆ ಒಂದೊಂದು ಕೃಪಾಂಕ ನೀಡಲಾಗಿದೆ. ಜೀವಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ನಾಲ್ಕು ಉತ್ತರಗಳಲ್ಲಿ 2 ಮತ್ತು 3 ಈ ಎರಡೂ ಉತ್ತರಗಳು ಸರಿ ಆಗಿದ್ದರಿಂದ ಯಾವ ಉತ್ತರ ಬರೆದಿದ್ದರೂ ಅಂಕಕ್ಕೆ ಪರಿಗಣಿಸಲಾಗಿದೆ. ಉಳಿದಂತೆ ಗಣಿತದಲ್ಲಿ ಯಾವುದೇ ಕೃಪಾಂಕ ನೀಡಿಲ್ಲ ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು.

ದಿನಕ್ಕೆ 4 ಗಂಟೆ ಓದು

ಟಾಪರ್‌ ಆಗಿದ್ದು ಸಂತೋಷ ತಂದಿದೆ. ಮನೆಯಲ್ಲಿ ನಿತ್ಯ ಕನಿಷ್ಠ ನಾಲ್ಕು ಗಂಟೆಗಳ ಕಾಲ ಓದುತ್ತಿದ್ದೆ. ಕಾದಂಬರಿ ಓದುವ, ಸೈಕ್ಲಿಂಗ್ ಅಭ್ಯಾಸಗಳಿವೆ. ಮುಂದೆ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಬೇಕೆಂದಿದ್ದೇನೆ.

-ತನಿಷಾ ಕಾರ್ತಿಕ್‌

ನಿರಂತರ ಅಭ್ಯಾಸದ ಫಲ

ತಂದೆ ತಾಯಿ ಸಹಕಾರ, ಉಪನ್ಯಾಸಕರ ಮಾರ್ಗದರ್ಶನ ಉತ್ತಮ ಫಲಿತಾಂಶಕ್ಕೆ ನೆರವಾಯ್ತು. ಇದಕ್ಕಾಗಿ 2 ವರ್ಷಗಳಿಂದ ನಿರಂತರ ಅಧ್ಯಯನ ನಡೆಸಿದ್ದೆ. ನೀಟ್‌ ಫಲಿತಾಂಶ ಬಂದ ಬಳಿಕ ಮುಂದಿನ ಶಿಕ್ಷಣದ ನಿರ್ಧಾರ ಮಾಡುತ್ತೇನೆ.

-ನಯನಾ ಗೋಪಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ
ಪ್ಲಾಸ್ಟಿಕ್‌ ಕಂಟಕದಿಂದ ಭೂಮಿಯ ರಕ್ಷಣೆ ಅಗತ್ಯ