ವಿದ್ಯುತ್‌ ಕನಿಷ್ಠ ಶುಲ್ಕದ ಮೇಲಿನ ತೆರಿಗೆ ಅಸಂವಿಧಾನಿಕ : ಹೈಕೋರ್ಟ್‌

Published : Jun 26, 2025, 10:22 AM IST
Karnataka High Court_RCB

ಸಾರಾಂಶ

ವಿದ್ಯುತ್‌ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಶುಲ್ಕದ ಮೇಲೆ ಶೇ.5 ತೆರಿಗೆ ವಿಧಿಸಲು ಕರ್ನಾಟಕ ವಿದ್ಯುತ್‌ (ಬಳಕೆ ಮೇಲಿನ ತೆರಿಗೆ) ಕಾಯ್ದೆಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿ ನಿಯಮವನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದೆ.

 ಬೆಂಗಳೂರು :  ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೃಷಿ ಪಂಪ್‌ ಸೆಟ್‌ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವರ್ಗದ ವಿದ್ಯುತ್‌ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಶುಲ್ಕದ ಮೇಲೆ ಶೇ.5 ತೆರಿಗೆ ವಿಧಿಸಲು ಕರ್ನಾಟಕ ವಿದ್ಯುತ್‌ (ಬಳಕೆ ಮೇಲಿನ ತೆರಿಗೆ) ಕಾಯ್ದೆಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿ ನಿಯಮವನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸಿದೆ.

ತಿದ್ದುಪಡಿ ನಿಯಮ ಪ್ರಶ್ನಿಸಿ 2008ರಲ್ಲಿ ಬೆಂಗಳೂರಿನ ಸೋನಾ ಸಿಂಥೆಟಿಕ್ಸ್‌ ಕಂಪನಿ, ಶ್ರೀ ಕೃಷ್ಣ ಸ್ಪಿನ್ನಿಂಗ್‌ ಮತ್ತು ವೀವಿಂಗ್‌ ಮಿಲ್ಸ್‌ ಪ್ರೈ.ಲಿ. ಸೇರಿ 10 ಕಂಪನಿಗಳು ಹಾಗೂ 2009ರಲ್ಲಿ ಎಫ್‌ಕೆ‌ಸಿಸಿಐ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗಡೆ ಅವರ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಕನಿಷ್ಠ ಶುಲ್ಕದ ಮೇಲಿನ ತೆರಿಗೆಯನ್ನು ಅಸಾಂವಿಧಾನಿಕವೆಂದು ಘೋಷಿಸಲಾಗಿದೆಯೇ ಹೊರತು, ಬಳಸಲ್ಪಟ್ಟ ವಿದ್ಯುತ್‌ಗೆ ವಿಧಿಸಿರುವ ತೆರಿಗೆಯನ್ನಲ್ಲ ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಈ ಆದೇಶದಿಂದ ವಿದ್ಯುತ್‌ ಸರಬರಾಜು ಕಂಪನಿಗಳು ಅರ್ಜಿದಾರರ ಕಂಪನಿಗಳಿಗೆ ಕೋಟ್ಯಂತರ ರು. ತೆರಿಗೆ ಹಣ ಮರುಪಾವತಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

''''ಕರ್ನಾಟಕ ವಿದ್ಯುತ್‌ (ಬಳಕೆ ಮೇಲಿನ ತೆರಿಗೆ) ಕಾಯ್ದೆಗೆ 1959''''ರ ಸೆಕ್ಷನ್‌ 3(1)ಗೆ ರಾಜ್ಯ ಸರ್ಕಾರ 2004ರಲ್ಲಿ ತಿದ್ದುಪಡಿ ತಂದಿತ್ತು. ಆ ನಿಯಮ ಪ್ರಕಾರ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೃಷಿ ಪಂಪ್‌ ಸೆಟ್‌ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವರ್ಗದ ವಿದ್ಯುತ್‌ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಶುಲ್ಕದ ಮೇಲೆ ಶೇ. 5 ತೆರಿಗೆ ವಿಧಿಸಲು ತೀರ್ಮಾನಿಸಿತ್ತು.

ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ಹೈಕೋರ್ಟ್‌, ಗ್ರಾಹಕರ ಬಳಕೆಗೆ ವಿದ್ಯುತ್ ಲಭ್ಯವಿದೆ ಎಂಬುದನ್ನು ಖಾತರಿಪಡಿಸಲು ಅವರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಪೂರೈಸಿದ ಮಾತ್ರಕ್ಕೆ ಅದು ಬಳಕೆ ಅಥವಾ ಮಾರಾಟ ಎಂದೆನಿಸುವುದಿಲ್ಲ. 

ಗ್ರಾಹಕರು ವಿದ್ಯುತ್‌ ಬಳಸದೇ ಇದ್ದರೆ ಅದರ ಮೇಲೆ ಸಂವಿಧಾನದ ಏಳನೇ ಷೆಡ್ಯೂಲ್‌ ಲಿಸ್ಟ್‌-2, ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಕನಿಷ್ಠ ಶುಲ್ಕದ ಮೇಲೆ ತೆರಿಗೆ ವಿಧಿಸುವ ಯಾವುದೇ ಶಾಸನಾತ್ಮಕ ಅಧಿಕಾರವಿಲ್ಲ. ಆದರೆ, 7ನೇ ಶೆಡ್ಯೂಲ್‌ ಲಿಸ್ಟ್‌ 2ರ ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ, ವಿದ್ಯುತ್‌ ಬಳಕೆ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆಯೇ ಹೊರತು, ಕನಿಷ್ಠ ಶುಲ್ಕದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

PREV
Read more Articles on

Recommended Stories

ಸಂಘಟಿತರಾಗಿ ಪಕ್ಷ ಕಟ್ಟಲು ಮುಂದಾಗಿ
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಅಸಮತೋಲನ