ಕೆ.ಆರ್.ಮಾರುಕಟ್ಟೆ ಅಕ್ರಮ ಮಳಿಗೆ ತೆರವು ಕಾರ್ಯಕ್ಕೆ ತಾತ್ಕಾಲಿಕ ತಡೆ

Published : Jul 12, 2026, 07:31 AM IST
KR Market

ಸಾರಾಂಶ

ನಗರದ ಕೆ.ಆರ್.ಮಾರುಕಟ್ಟೆಯಲ್ಲಿನ ಅನಧಿಕೃತ ಮಳಿಗೆಗಳನ್ನು ತೆರವು ಮಾಡುತ್ತಿರುವ ಕೇಂದ್ರ ನಗರ ಪಾಲಿಕೆಯ ಕಾರ್ಯಾಚರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ತೆರವುಗೊಳಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಹೈಕೋರ್ಟ್ ಉಲ್ಲೇಖಿಸಿದೆ.

  ಬೆಂಗಳೂರು :  ನಗರದ ಕೆ.ಆರ್.ಮಾರುಕಟ್ಟೆಯಲ್ಲಿನ ಅನಧಿಕೃತ ಮಳಿಗೆಗಳನ್ನು ತೆರವು ಮಾಡುತ್ತಿರುವ ಕೇಂದ್ರ ನಗರ ಪಾಲಿಕೆಯ ಕಾರ್ಯಾಚರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದೇ ವೇಳೆ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಮೂಲಭೂತ ಹಕ್ಕಾಗಿದ್ದು, ಒತ್ತುವರಿಗಳನ್ನು ತೆರವುಗೊಳಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಹೈಕೋರ್ಟ್ ಉಲ್ಲೇಖಿಸಿದೆ.

ಅಂಗಡಿಗಳನ್ನು ಯಾವುದೇ ನೋಟಿಸ್ ನೀಡದೆ ತೆರವು

ಕೆ.ಆರ್.ಮಾರ್ಕೆಟ್‌ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ತಮ್ಮ ಅಂಗಡಿಗಳನ್ನು ಯಾವುದೇ ನೋಟಿಸ್ ನೀಡದೆ ಪಾಲಿಕೆಯಿಂದ ತೆರವುಗೊಳಿಸಲಾಗುತ್ತಿದೆ. ವ್ಯಾಪಾರ ಮಾಡಲು ಪಾಲಿಕೆಯಿಂದ ಪರವಾನಗಿ ಪಡೆದಿದ್ದು, ಕೂಡಲೇ ನಿಲ್ಲಿಸಲು ಆದೇಶಿಸಬೇಕೆಂದು ಕೋರಿ ಸ್ಯಾಮ್ಯುಯೆಲ್ ಆರ್. ಸೇರಿದಂತೆ ಹಲವು ವ್ಯಾಪಾರಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ

ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ವ್ಯಾಪಾರಿಗಳು ಹಾಜರುಪಡಿಸಿರುವ ಪರವಾನಗಿ ದಾಖಲೆಗಳು ನಕಲಿ ಮತ್ತು ಸಂಶಯಾಸ್ಪದವಾಗಿವೆ. ಅಂದಿನ ಕಂದಾಯ ಅಧಿಕಾರಿಯಾಗಿದ್ದ ಎಸ್.ಬಿ.ಮಧು ಅವರು ಈ ಯಾವುದೇ ಪರವಾನಗಿ ಪತ್ರಗಳಿಗೆ ಸಹಿ ಮಾಡಿಲ್ಲ. ಈ ಪರವಾನಗಿ ಪತ್ರಗಳ ಮೇಲಿನ ಸಹಿಗಳು ನಕಲಿ ಎಂದು ಕೋರ್ಟ್‌ಗೆ ತಿಳಿಸಿದರು.

ಎರಡು ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ, ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಆದರೆ, ವ್ಯಾಪಾರಿಗಳು ಕೂಡ ಕೋರ್ಟ್‌ನಿಂದ ಸ್ಪಷ್ಟ ಅನುಮತಿ ಸಿಗುವವರೆಗೂ ಆ ಜಾಗದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಅಗತ್ಯ ಬಿದ್ದರೆ ಆ ಮಳಿಗೆಗಳನ್ನು ಸೀಲ್ ಮಾಡಲು ಅಧಿಕಾರಿಗಳಿಗೆ ಮುಕ್ತ ಅವಕಾಶ ಇದೆ ಎಂದು ತಿಳಿಸಿ, ಮುಂದಿನ ವಿಚಾರಣೆಯವರೆಗೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದೂಡಲು ಪಾಲಿಕೆಗೆ ಸೂಚಿಸಿದೆ.

ಪ್ರಮಾಣ ಪತ್ರ ಸಲ್ಲಿಕೆಗೆ ಆದೇಶ: ಅರ್ಜಿದಾರರು ತಮಗೆ ನೀಡಲಾಗಿದೆ ಎನ್ನಲಾದ ಪರವಾನಗಿ ಪತ್ರಗಳ ನೈಜತೆಯನ್ನು ಸಾಬೀತುಪಡಿಸಲು ಮತ್ತು ಆ ಅಂಗಡಿಗಳು ಫುಟ್‌ಪಾತ್ ಮೇಲೆಯೇ ಇವೆಯೇ ಎಂಬುದನ್ನು ಸ್ಪಷ್ಟಪಡಿಸಲು ಪ್ರಮಾಣಪತ್ರ ಸಲ್ಲಿಸುವಂತೆ ಜಿಬಿಎಗೆ ಹೈಕೋರ್ಟ್ ನಿರ್ದೇಶಿಸಿದೆ.

ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿನ ಫುಟ್‌ಪಾತ್‌ಗಳು ಹಾಗೂ ಜನರು ಓಡಾಡುವ ಖಾಲಿ ಜಾಗಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಪಾಲಿಕೆಗೆ ಬಾಡಿಗೆಯನ್ನು ಕೂಡ ಪಾವತಿ ಮಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಸುಧಾರಿಸಲು ಪಾಲಿಕೆ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು 2 ವಾರಗಳ ಹಿಂದೆ ಆರಂಭಿಸಿದೆ.

ಒತ್ತುವರಿ ತೆರವು ಅಧಿಕಾರಿಗಳ ಜವಾಬ್ದಾರಿ

ಫುಟ್‌ಪಾತ್‌ ಒತ್ತುವರಿ ತೆರವು ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪಾದಚಾರಿ ಮಾರ್ಗಗಳನ್ನು ಬಳಸುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿದೆ. ನಗರದಲ್ಲಿ ಫುಟ್‌ಪಾತ್‌ಗಳು ಒತ್ತುವರಿ ಆಗುತ್ತಿರುವುದರಿಂದ ಜನರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇದರಿಂದ ಅಪಘಾತಗಳಾಗಿ ಸಾವು ನೋವು ಸಂಭವಿಸುತ್ತಿವೆ. ಕೇವಲ ಈ ಪ್ರದೇಶ ಮಾತ್ರವಲ್ಲದೆ, ಇಡೀ ರಾಜ್ಯಾದ್ಯಂತ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರಸ್ವತಿಯೇ ಕಣ್ಮುಚ್ಚಿದರೆ ಸರಿಗಮ ಕೇಳುತ್ತಾ?
ಇಂದು ಸಂಜೆ ಮೈಸೂರಿನಲ್ಲಿ ಗಾನಕೋಗಿಲೆ ಅಂತ್ಯಕ್ರಿಯೆ