ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳ ನಿರ್ವಹಣೆಯಲ್ಲಿರುವ ನಗರದ ಶೌಚಾಲಯಗಳನ್ನು ಟೆಂಡರ್ ಮೂಲಕ ಖಾಸಗಿ ಸಂಸ್ಥೆಗೆ ವಹಿಸಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು : ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳ ನಿರ್ವಹಣೆಯಲ್ಲಿರುವ ನಗರದ ಶೌಚಾಲಯಗಳನ್ನು ಟೆಂಡರ್ ಮೂಲಕ ಖಾಸಗಿ ಸಂಸ್ಥೆಗೆ ವಹಿಸಲು ಬಿಬಿಎಂಪಿ ಮುಂದಾಗಿದೆ.
ಸದ್ಯ ಇರುವ 400ಕ್ಕೂ ಹೆಚ್ಚಿನ ಶೌಚಾಲಯಗಳಲ್ಲಿ ಶೇ. 30ಕ್ಕೂ ಹೆಚ್ಚಿನ ಶೌಚಾಲಯಗಳು ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರು ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಲಾಗಿದೆ. ಆದರೆ, ಈ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗದ ಕಾರಣ ಇದೀಗ ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಲು ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸುವ ನೂತನ ಜಾಹೀರಾತು ನೀತಿ ಸಿದ್ಧಪಡಿಸಿರುವ ಬಿಬಿಎಂಪಿ, ಶೀಘ್ರದಲ್ಲಿ ಅನುಷ್ಠಾನಗೊಳಿಸಲಿದೆ. ಈ ನೀತಿಯಲ್ಲಿ ಶೌಚಾಲಯಗಳ ಹೊರಭಾಗದಲ್ಲೂ ಜಾಹೀರಾತು ಅಳವಡಿಕೆಗೆ ಅನುಮತಿಸಲು ಅವಕಾಶವಿದೆ. ಶೌಚಾಲಯಗಳ ನಿರ್ವಹಣೆ ಹೊಣೆಯನ್ನು ಪಡೆಯುವ ಖಾಸಗಿ ಏಜೆನ್ಸಿ ಅದಕ್ಕೆ ಬದಲಾಗಿ ಜಾಹೀರಾತು ಪ್ರದರ್ಶನದ ಹಕ್ಕು ಪಡೆಯಲಿದೆ.
ಅದರಿಂದ ಬರುವ ಆದಾಯವನ್ನು ಖಾಸಗಿ ಏಜೆನ್ಸಿ ಮತ್ತು ಬಿಬಿಎಂಪಿ ಹಂಚಿಕೊಳ್ಳಲಾಗುತ್ತದೆ. ಖಾಸಗಿಯವರಿಗೆ ವಹಿಸಲು ಬಿಬಿಎಂಪಿ ಶೀಘ್ರದಲ್ಲಿ ಟೆಂಡರ್ ಕರೆಯಲಿದೆ ಆದರೆ, ಬಿಬಿಎಂಪಿಯ ಈ ಕ್ರಮಕ್ಕೆ ಪೌರಕಾರ್ಮಿಕರು ಸೇರಿ ಶೌಚಾಲಯಗಳ ನಿರ್ವಹಣೆಯ ಹೊಣೆ ಹೊತ್ತಿರುವವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.