ಭೂ ಸುಧಾರಣೆ ಅಡಿ ರೈತರಿಗೆ ಬಂದ ವಕ್ಫ್‌ ಜಾಗ ತೆರವಿಲ್ಲ - ಅಕ್ರಮವಾಗಿ ಒತ್ತುವರಿ ಆಗಿರುವ ವಕ್ಫ್‌ ಆಸ್ತಿ ಮಾತ್ರ ತೆರವು

Published : Nov 15, 2024, 12:34 PM IST
BZ Zameer Ahmed Khan

ಸಾರಾಂಶ

ಭೂ ಸುಧಾರಣೆ ನೀತಿಯಡಿ ರೈತರಿಗೆ ಬಂದಿರುವ ವಕ್ಫ್‌ ಆಸ್ತಿಯನ್ನು ತೆರವುಗೊಳಿಸದೆ, ಅಕ್ರಮವಾಗಿ ಒತ್ತುವರಿಗೆ ಗುರಿಯಾಗಿರುವ ವಕ್ಫ್‌ ಆಸ್ತಿಯನ್ನು ಸಂರಕ್ಷಿಸಲು ಅಧಿಸೂಚನೆ ಹೊರಡಿಸುವ ಮೂಲಕ ವಕ್ಫ್ ಆಸ್ತಿ ವಿವಾದ ಇತ್ಯರ್ಥಪಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು : ಭೂ ಸುಧಾರಣೆ ನೀತಿಯಡಿ ರೈತರಿಗೆ ಬಂದಿರುವ ವಕ್ಫ್‌ ಆಸ್ತಿಯನ್ನು ತೆರವುಗೊಳಿಸದೆ, ಅಕ್ರಮವಾಗಿ ಒತ್ತುವರಿಗೆ ಗುರಿಯಾಗಿರುವ ವಕ್ಫ್‌ ಆಸ್ತಿಯನ್ನು ಸಂರಕ್ಷಿಸಲು ಅಧಿಸೂಚನೆ ಹೊರಡಿಸುವ ಮೂಲಕ ವಕ್ಫ್ ಆಸ್ತಿ ವಿವಾದ ಇತ್ಯರ್ಥಪಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಪರ-ವಿರೋಧ ಅಭಿಪ್ರಾಯಗಳು ತೀವ್ರವಾಗಿ ವ್ಯಕ್ತವಾದ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಪ್ರಸ್ತಾಪವನ್ನು ಮುಂದೂಡಿರುವುದಾಗಿ ತಿಳಿದುಬಂದಿದೆ.

ವಕ್ಫ್‌ ಆಸ್ತಿ ವಿವಾದವನ್ನು ರೈತರು ಸೇರಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾನೂನು ತಜ್ಞರು, ವಕ್ಫ್ ಮಂಡಳಿ ಜತೆ ಚರ್ಚಿಸಿ ಸಾಮಾಜಿಕ ಶಾಂತಿ ಕದಡದೇ ಪರಿಹರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಭೂಸುಧಾರಣೆ ನೀತಿಯಡಿ ರೈತರಿಗೆ ಹೋಗಿರುವ ಜಮೀನು ಬಿಟ್ಟು, 1978ರ ಬಳಿಕ ವಕ್ಫ್‌ ಆಸ್ತಿ ಎಂದು ಅಧಿಸೂಚಿಸಲ್ಪಟ್ಟ ಆಸ್ತಿ ಮಾತ್ರ ವಕ್ಫ್‌ಗೆ ಸೇರಿದ್ದು ಎಂದು ಅಧಿಸೂಚನೆ ಹೊರಡಿಸಲು ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಪ್ರಸ್ತಾಪಿಸಲಾಯಿತು.

ಆದರೆ ಇದಕ್ಕೆ ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹಮದ್‌ ಖಾನ್‌ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಹೀಗಾಗಿ ಪ್ರಸ್ತಾಪ ಯಾವುದೇ ಅಂತಿಮ ನಿರ್ಧಾರ ಇಲ್ಲದೆ ಮೊಟಕುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಸ್ತಾವನೆ?:

ವಕ್ಫ್‌ ಆಸ್ತಿಗಳ ಬಗ್ಗೆ 1974ರ ಅಧಿಸೂಚನೆಯ ಅನ್ವಯ ರಾಜ್ಯದ 1.70 ಲಕ್ಷ ಎಕರೆ ವಕ್ಫ್‌ ಆಸ್ತಿ ಇದೆ. ಆದರೆ 1974ರಿಂದ 1979ರವರೆಗೆ ಹಲವು ಕಾಯ್ದೆಗಳು ಹಾಗೂ ಭೂ ಸುಧಾರಣೆ ನೀತಿಗಳಿಂದಾಗಿ 70 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಉಳುವವನೇ ಭೂಮಿ ಒಡೆಯ ಎಂಬ ನಿಯಮದಡಿ ರೈತರಿಗೆ ಬಿಟ್ಟುಕೊಡಲಾಗಿದೆ.

ಆದರೆ, 1998ರಲ್ಲಿ ಸುಪ್ರೀಂ ಕೋರ್ಟ್‌ ಆಂಧ್ರ ವಕ್ಫ್‌ ಬೋರ್ಡ್‌ ದಾಖಲಿಸಿದ್ದ ಪ್ರಕರಣದ ಮೇರೆಗೆ ಒಂದು ಬಾರಿ ವಕ್ಫ್‌ ಎಂದು ನಮೂದಾದ ಆಸ್ತಿ ವಕ್ಫ್‌ಗೆ ಸೇರಬೇಕು. ಭೂಸುಧಾರಣೆ ನೀತಿ ಸೇರಿದಂತೆ ಯಾವುದೇ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಆದೇಶದ ಅಡಿ 1974ರ ಅಧಿಸೂಚನೆಯಡಿ ವಕ್ಫ್‌ ಆಸ್ತಿಗಳನ್ನು ಮರುವಶಕ್ಕೆ ಪಡೆಯುತ್ತಿರುವ ಬಗ್ಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಸಾವಿರಾರು ಎಕರೆ ವಕ್ಫ್‌ ಆಸ್ತಿ ಭೂ ಸುಧಾರಣಾ ನಿತಿ ಅಡಿ ರೈತರಿಗೆ ಹೋಗಿ ತಲೆಮಾರುಗಳು ಬದಲಾಗಿವೆ. ಹಲವು ಜಿಲ್ಲೆಗಳಲ್ಲಿ ರೈತರ ಜಮೀನು, ಮಠದ ಜಮೀನು, ಸ್ಮಶಾನ ಮತ್ತು ಖಬರಸ್ಥಾನಗಳು, ವಸತಿ ಪ್ರದೇಶಗಳಾಗಿ ಬದಲಾಗಿವೆ. ಹೀಗಾಗಿ 1978ರ ಅಧಿಸೂಚನೆ ಪ್ರಕಾರ ವಕ್ಫ್‌ ಆಸ್ತಿ ಅಂತಿಮಗೊಳಿಸಬಹುದು ಎಂದು ಚರ್ಚಿಸಲಾಯಿತು.

ಆದರೆ, ಇದಕ್ಕೆ ಓರ್ವ ಅಲ್ಪಸಂಖ್ಯಾತ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕೋರ್ಟ್‌ ಆದೇಶದ ಪ್ರಕಾರ ವಕ್ಫ್‌ ಆಸ್ತಿ ವಕ್ಫ್‌ ಮಂಡಳಿಗೆ ಸೇರಬೇಕು. ವಕ್ಫ್‌ ಬಳಿ ಈಗ ಮೊದಲಿದ್ದ ಆಸ್ತಿಯಲ್ಲಿ ಶೇ.10 ರಷ್ಟು ಕೂಡ ಇಲ್ಲ. ಈಗ ಒತ್ತುವರಿ ವಾಪಸು ಪಡೆಯದಿದ್ದರೆ ವಕ್ಫ್‌ ಬಳಿ ಆಸ್ತಿಯೇ ಇಲ್ಲದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌