ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು - ಬೆಂಗಳೂರಿನ ಭರತ್‌ ಅತ್ತೆ ಕಣ್ಣೀರು

Published : Apr 24, 2025, 06:46 AM IST
Pahalgam terror attack Amit Shah statement 1

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ ದಾಳಿ ವೇಳೆ ಉಗ್ರರು ನನ್ನ ಅಳಿಯ ಭರತ್‌ ಭೂಷಣ್‌ನನ್ನು ’ನೀನು ಹಿಂದುನಾ, ಮುಸ್ಲಿಮಾ’ ಎಂದು ಕೇಳಿದ್ದಾರೆ. ಹಿಂದೂ ಎನ್ನುತ್ತಿದ್ದಂತೆ ಆತನ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಭರತ್‌ ಭೂಷಣ್‌ರ ಅತ್ತೆ ವಿಮಲಾ ಕಣ್ಣೀರಿಡುತ್ತಾ ಮಾಹಿತಿ ನೀಡಿದ್ದಾರೆ.

 ಬೆಂಗಳೂರು : ಕಾಶ್ಮೀರದ ಪಹಲ್ಗಾಮ್‌ ದಾಳಿ ವೇಳೆ ಉಗ್ರರು ನನ್ನ ಅಳಿಯ ಭರತ್‌ ಭೂಷಣ್‌ನನ್ನು ’ನೀನು ಹಿಂದುನಾ, ಮುಸ್ಲಿಮಾ’ ಎಂದು ಕೇಳಿದ್ದಾರೆ. ಹಿಂದೂ ಎನ್ನುತ್ತಿದ್ದಂತೆ ಆತನ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಭರತ್‌ ಭೂಷಣ್‌ರ ಅತ್ತೆ ವಿಮಲಾ ಕಣ್ಣೀರಿಡುತ್ತಾ ಮಾಹಿತಿ ನೀಡಿದ್ದಾರೆ.

ಬುಧವಾರ ಮತ್ತಿಕೆರೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.18ರಂದು ಅಳಿಯ ಭರತ್‌ ಭೂಷಣ್‌, ಮಗಳು ಸುಜಾತಾ ಹಾಗೂ ಮೊಮ್ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬುಧವಾರ ಬೆಳಗ್ಗೆ 7 ಗಂಟೆಗೆ ಶ್ರೀನಗರದಿಂದ ಹೊರಟು ಬೆಳಗ್ಗೆ 10.30ಕ್ಕೆ ಬೆಂಗಳೂರಿಗೆ ವಾಪಸ್‌ ಆಗಬೇಕಿತ್ತು. ಆದರೆ, ಮಂಗಳವಾರ ಉಗ್ರರ ಗುಂಡಿನ ದಾಳಿ ಬಳಿಕ ಮಗಳು ಸುಜಾತಾ ಕರೆ ಮಾಡಿ ಘಟನೆ ಬಗ್ಗೆ ಹೇಳಿದಳು ಎಂದರು.

ಪಹಲ್ಗಾಮ್‌ನಲ್ಲಿ ಉಗ್ರರು ಏಕಾಏಕಿ ದಾಳಿ ಮಾಡಿದ್ದಾರೆ. ಗುಂಡು ಹಾರಿಸುವ ಮುನ್ನ, ನೀವು ಹಿಂದೂಗಳ ಅಥವಾ ಮುಸ್ಲಿಮರಾ ಎಂದು ಕೇಳಿದ್ದಾರೆ. ಅಳಿಯ ಭರತ್‌ ಭೂಷಣ್‌ಗೂ ಈ ರೀತಿ ಪ್ರಶ್ನಿಸಿದ ಬಳಿಕ ತಲೆಗೆ ಗುಂಡಿಕ್ಕಿ ಕೊಂದಿದ್ದಾರೆ. ಅವರು ಕೇವಲ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದಾರೆ. ಈ ವೇಳೆ ಮಗಳು ಸುಜಾತಾ ಅಳಿಯನ ಜೇಬಿನಲ್ಲಿದ್ದ ಆಧಾರ್ ಕಾರ್ಡ್‌, ಮೊಬೈಲ್‌ ತೆಗೆದುಕೊಂಡು ಮಗುವಿನ ಜತೆಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾಳೆ. ಕಳೆದ ಬಾರಿ ನಾವು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದೆವು. ಈ ಬಾರಿ ಮಗಳ ಕುಟುಂಬ ಕಾಶ್ಮೀರ ಪ್ರವಾಸಕ್ಕೆ ತೆರಳಿತ್ತು ಎಂದು ವಿಮಲಾ ಭಾವುಕರಾದರು.

ಉಗ್ರರ ಗುಂಡಿಗೆ ಬಲಿಯಾದ ಮತ್ತಿಕೆರೆ ನಿವಾಸಿ ಭರತ್‌ ಭೂಷಣ್‌(41) ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಐದು ವರ್ಷಗಳ ಹಿಂದೆ ವೈದ್ಯೆ ಸುಜಾತಾ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಒಂದು ಗುಂಡು ಮಗುವಿದೆ. ಇತ್ತೀಚೆಗೆ ಭರತ್‌ ಭೂಷಣ್‌ ಐಟಿ ವೃತ್ತಿ ಬಿಟ್ಟು ಭದ್ರಪ್ಪ ಲೇಔಟ್‌ನಲ್ಲಿ ಡಯಾಗ್ನಾಸ್ಟಿಕ್‌ ಸೆಂಟರ್‌ ತೆರೆದಿದ್ದರು. ವೈದ್ಯೆಯಾಗಿರುವ ಪತ್ನಿ ಸುಜಾತಾ ಅವರು ದೇವಿನಗರದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದರು. ಭರತ್‌ ಭೂಷಣ್‌ ವಾರದ ಹಿಂದೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಉಗ್ರರ ಸರ್ವನಾಶ ಮಾಡಬೇಕು:

ಸ್ಥಳೀಯ ನಿವಾಸಿ ನಿವೃತ್ತ ಪ್ರಾಧ್ಯಾಪಕ ನಾಗರಾಜ್‌ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಭರತ್‌ ಭೂಷಣ್‌ ನಮ್ಮ ಹುಡುಗ. ಎಲ್ಲರ ಜತೆಗೆ ಸ್ನೇಹದಿಂದ ಮಾತನಾಡುತ್ತಿದ್ದ. ಇನ್ನಷ್ಟು ಸಾಧನೆ ಮಾಡುವ ಆಸೆ ಹೊಂದಿದ್ದ ಭರತ್‌ನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಟಿ.ವಿ.ನೋಡಿ ನಮಗೆ ವಿಚಾರ ಗೊತ್ತಾಯಿತು. ಸರ್ಕಾರ ಮಾಡಲು ಆಗದ ಕೆಲಸ ನಾವೇ ಮಾಡಬೇಕಿದೆ. ಇನ್ನು ಬೇರೆ ದಾರಿ ಇಲ್ಲ. ಯುವಕರೇ ಎದ್ದು ನಿಲ್ಲಬೇಕು. ಪುತ್ರ ಶೋಕದ ನೋವು ಅವರಿಗೆ ಅರ್ಥವಾಗಬೇಕು. ಉಗ್ರ ನಿಗ್ರಹ ಪಡೆಗಳನ್ನು ಬಳಸಿಕೊಂಡು ಉಗ್ರರನ್ನು ಸರ್ವನಾಶ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭರತ್‌ ಭೂಷಣ್‌ ಹೊಸ ಕಂಪನಿ ಪ್ರಾರಂಭಿಸುವ ಆಸೆ ಇರಿಸಿಕೊಂಡಿದ್ದ. ದೇಶಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂಬ ಆಸೆ ಆತನಿಗಿತ್ತು. ಇಲ್ಲೇ ವಾಕಿಂಗ್‌ ಮಾಡುತ್ತಿದ್ದ ಹುಡುಗ. ಆತನ ಸಾವಿಗೆ ಸೇಡು ತೀರಿಸಿಕೊಳ್ಳುವ ವರೆಗೂ ಯಾವುದೂ ಸರಿಯಾಗಲ್ಲ. ಉಗ್ರರ ಮನೆಗೆ ನುಗ್ಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ಆವೇಶದಿಂದ ನಾಗರಾಜ್‌ ಪ್ರತಿಕ್ರಿಯಿಸಿದರು.

PREV

Recommended Stories

ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್
ಜಾತಿ ಗಣತಿ ಈಗ ಕಗ್ಗಂಟು