ಬೆಳಗಾವಿ : ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಎಂದೇ ಪ್ರಸಿದ್ಧಿ ಪಡೆದಿರುವ ಟೊಮೆಟೋ ಬೆಲೆ ಕುಸಿತದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರಿ ಬೇಡಿಕೆಯಲ್ಲಿದ್ದ ಟೊಮೆಟೋ ಬೆಳೆಯನ್ನು ಹೆಚ್ಚಿನ ರೈತರು ಬೆಳೆದಿದ್ದಾರೆ. ಆದರೆ ನಿರೀಕ್ಷಿತ ಬೆಲೆ ಸಿಗದೇ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ.
ಪ್ರತಿ ಕೆ.ಜಿಗೆ ₹30 ರಿಂದ ₹40ಗೆ ಮಾರಾಟವಾಗುತ್ತಿದ್ದ ಟೊಮೆಟೋ ಪ್ರಸ್ತುತ ಒಂದು ಕೇಜಿಗೆ ₹10 ರಿಂದ ₹15ಕ್ಕೆ ಮಾರಾಟವಾಗುತ್ತಿದ್ದು, 15 ಕೇಜಿಯ ಒಂದು ಬಾಕ್ಸ್‌ಗೆ ₹100 ರಿಂದ ₹200ಗೆ ಮಾರಾಟವಾಗುತ್ತಿದೆ.
ಬೆಲೆ ಕುಸಿತಕ್ಕೆ ಕಾರಣವೇನು?:
ಪೂರ್ವ ಮುಂಗಾರು ಮಳೆಯ ಪರಿಣಾಮ ಕಳೆದ ವಾರದಿಂದ ಬೆಲೆಗಳು ಕುಸಿಯಲು ಪ್ರಾರಂಭಿಸಿದೆ. ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚು ರೈತರು ಟೊಮೆಟೋ ಬೆಳೆದಿದ್ದಾರೆ. ಜತೆಗೆ, ಬಿಸಿಲ ವಾತಾವರಣದಿಂದಾಗಿ ಕಾಯಿಗಳು ಬೇಗ ಹಣ್ಣಾಗುತ್ತವೆ. ಅಲ್ಲದೆ, ಹೊರರಾಜ್ಯಗಳಲ್ಲೂ ಟೊಮೆಟೋ ಹೆಚ್ಚಾಗಿ ಬೆಳೆದಿರುವುದರಿಂದ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹಣ್ಣು ರವಾನೆಯಾಗುತ್ತಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆಯಿಲ್ಲದೆ ಬೆಲೆಗಳು ಕುಸಿದಿವೆ ಎಂದು ತಿಳಿದುಬಂದಿದೆ.