ಬೆಂಗಳೂರು : ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಮರು ಜಾರಿ ಸಂಬಂಧ ತ್ವರಿತವಾಗಿ ಪೊಲೀಸರಿಗೆ ಹೊಸ ವಾಹನಗಳನ್ನು ಬಿಬಿಎಂಪಿ ನೀಡುವುದಾಗಿ ಒಪ್ಪಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಶುಕ್ರವಾರ ಆಯೋಜಿಸಿದ್ದ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಶೀಘ್ರದಲ್ಲೇ ಟೋಯಿಂಗ್ ಜಾರಿಗೆ ಬರಲಿ ಎಂದರು.
ಜನರು ಸಂಚಾರ ನಿಯಮ ಪಾಲಿಸುವುದಿಲ್ಲ. ರಸ್ತೆಯ ಎರಡು ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದೇ ವಿಚಾರಕ್ಕೆ ದಿನನಿತ್ಯ ಗಲಾಟೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟೋಯಿಂಗ್ ವ್ಯವಸ್ಥೆ ಮರು ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ನಿಲ್ಲುವ ವಾಹನಗಳನ್ನು ತೆರವುಗೊಳಿಸಲಾಗುತ್ತದೆ. ಟೋಯಿಂಗ್ ಅನ್ನು ಪೊಲೀಸರೇ ನಡೆಸಲಿದ್ದಾರೆ. ಈ ಟೋಯಿಂಗ್ ಮಾಡಲು ಮಹಾನಗರ ಪಾಲಿಕೆಯಿಂದ ಹೊಸದಾಗಿ ವಾಹನಗಳನ್ನು ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಒಪ್ಪಿದ್ದಾರೆ ಎಂದು ಹೇಳಿದರು.
ಮಹಿಳೆಯರು ತೊಂದರೆಯಲ್ಲಿದ್ದಾಗ ಪೊಲೀಸರು ಕೂಡಲೇ ಸ್ಪಂದಿಸುತ್ತಿದ್ದಾರೆ. ಮಹಿಳೆಯರಿಗೆ ಬೆಂಗಳೂರು ಸುರಕ್ಷತೆ ನಗರವನ್ನಾಗಿ ಮಾಡುತ್ತೇವೆ. ನಿರ್ಭಯಾ ಯೋಜನೆಯಡಿ ನಗರದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 50 ಸೇಫ್ ಐ ಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ಡ್ರಗ್ ಮುಕ್ತ ಬೆಂಗಳೂರು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಮಕ್ಕಳು ಮಾದಕದ್ರವ್ಯ ಬಳಕೆ ಸೇರಿದಂತೆ ದುಶ್ಚಟಗಳಿಗೆ ಸಿಲುಕಿರುತ್ತಾರೆ. ಮನೆಗಳಿಗೆ ಪೊಲೀಸರು ಬಂದಾಗ ಇಂತಹ ಸಮಸ್ಯೆಗಳನ್ನು ಅವರೊಂದಿಗೆ ಪೋಷಕರು ಹಂಚಿಕೊಳ್ಳಬೇಕು. ಬೆಂಗಳೂರು ಪೊಲೀಸರು ಆತ್ಮವಿಶ್ವಾಸದಿಂದ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.